ಇಸ್ರೋ ವಿಜ್ಙಾನಿ ನಂಬಿ ನಾರಾಯಣ್ರವರನ್ನು 1994ರಲ್ಲಿ ಇಸ್ರೋ ವಿರುಧ್ಧ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂದಿಸಲಾಗಿತ್ತು. ಇಸ್ರೋದ ರಹಸ್ಯ ದಾಖಲೆ ಕಡತಗಳು ಅತಿ ಸೂಕ್ಷ್ಮ ಮಾಹಿತಿ ಮತ್ತು ಹಲವಾರು ತಂತ್ರಜ್ಙಾನಗಳನ್ನು ಪಾಕಿಸ್ಥಾನಕ್ಕೆ ಮಾರಾಟ ಮಾಡಿದ್ದಾರೆ ಎಂದು ಇದಕ್ಕಾಗಿ ಮಾಲ್ಡೀವ್ಸ್ನ ಇಬ್ಬರು ಮಹಿಳೆಯರ ನೆರವು ಪಡೆದಿದ್ದಾರೆ ಎಂಬುದಾಗಿ ಆರೋಪಿಸಲಾಗಿತ್ತು.
ಹೀಗೆ ಆರೋಪಿಸಿದ್ದ ಅಂದಿನ ಕೇರಳ ಪೋಲಿಸ್ ಮತ್ತು ಇಂಟೆಲಿಜೆನ್ಸ್ ಬ್ಯೂರೋನ ಕೆಲವು ಉನ್ನತ ಅಧಿಕಾರಿಗಳು ತಮ್ಮ ತಲೆದಂಡವನ್ನು ತಪ್ಪಿಸುವ ಸಲುವಾಗಿ ಬೇಹುಗಾರಿಕೆಯ ತನಿಖೆಯ ಹಾದಿ ತಪ್ಪಿಸಿ ನಂಬಿ ನಾರಾಯಣ್ರ ತಲೆ ದಂಡಕ್ಕೆ ಪ್ರಯತ್ನಿಸಿದ್ದನ್ನು 1998ರಲ್ಲಿ ಜೈನ್ ಸಮಿತಿ ಸುಪ್ರಿಮ್ ಕೋರ್ಟ್ ಗೆ ನೀಡಿದ ತನ್ನ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಇಲ್ಲಿ ಪೋಲಿಸರ ಮೇಲೆ ಐ ಬಿ ಅಧಿಕಾರಿಗಳು ಒತ್ತಡ ಹೇರಿದ್ದರು ಎಂದೂ ವರದಿಯಾಗಿದೆ. ಆಗಲೇ ಸುಪ್ರಿಂ ಕೋರ್ಟ್ ಪ್ರಕರಣದ ಅರ್ಜಿಯನ್ನು ವಜಾಗೊಳಿಸಿ, ಕೇರಳ ಸರಕಾರಕ್ಕೆ ಛೀಮಾರಿ ಹಾಕಿದ್ದನ್ನು ನೆನೆಪಿಸಿಕೊಳ್ಳಬಹುದು.
ನಂತರದಲ್ಲಿ ಕೇರಳ ಹೈಕೋರ್ಟ್ ಕೇರಳ ಸರಕಾರಕ್ಕೆ ನಂಬಿ ನಾರಾಯಣರವರಿಗೆ 10ಲಕ್ಷ ಪರಿಹಾರ ನೀಡಬೇಕೆಂದು ಸೂಚಿಸಿತ್ತು ಮತ್ತು ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿ ವರ್ಗದವರ ವಿರುಧ್ಧವೂ ಕ್ರಮ ಕೈಗೊಳ್ಳುವಂತೆ ಆದೇಶಿಸಿ ಮುಂದಿನ ತನಿಖೆಯನ್ನು ಸಿ ಬಿ ಐ ಗೆ ವಹಿಸಿತ್ತು. ಇದೇ ಸಂದರ್ಭದಲ್ಲಿ ಕೇರಳ ಪೋಲಿಸ್ ನ ಒಬ್ಬ ಉನ್ನತ ಅಧಿಕಾರಿಯೂ ಪ್ರಕರಣವನ್ನು ಸಿ ಬಿ ಐ ಗೆ ವಹಿಸುವಂತೆ ಶಿಫಾರಸು ಮಾಡಿದ್ದರು. ಪ್ರಕರಣ ದ ತನಖೆ ಆರಂಭಿಸಿದ ಸಿ ಬಿ ಐ, ಪೋಲಿಸರು ಮತ್ತು ಐ ಬಿ ಯ ಕೆಲ ಅಧಿಕಾರಿಗಳು ನಂಬಿ ನಾರಾಯಣರಿಗೆ ನಿಡಿದ ಕಿರುಕುಳವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಅಪರಾದಿಗಳ ಮೇಲೆ ಚಾರ್ಜ್ ಶೀಟನ್ನು ತಯಾರು ಮಾಡಿತು. ಐಬಿ ಅಧಿಕಾರಿಗಳು ಮತ್ತು ಪೋಲಿಸರು ಕಿರುಕುಳ ನೀಡಿದ ಬಗ್ಗೆ ಸಿಬಿಐ ಹೇಳಿದ್ದೇನೆಂದರೆ "ಭೇಹುಗಾರಿಕೆ ನಡೆದದ್ದನ್ನು ನಂಬಿ ನಾರಾಯಣರು ಸ್ವತಃ ತಾವೇ ಬೇಹುಗಾರಿಕೆ ನಡೆಸಿದ್ದಾಗಿ ಹೇಳಿಕೆ ನೀಡುವಂತೆ ಒಪ್ಪಿಕೊಳ್ಳುವಂತೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ" ಎಂದು ತನಿಖೆಯಿಂದ ತಿಳಿದು ಬಂದಿದೆ. ಈ ಹಿರಿಯ ವಿಜ್ಞಾನಿ ನಂಬಿ ನಾರಾಯಣ್ ಪ್ರಕರಣದಲ್ಲಿ ಸುಮಾರು ಹರಿನೆಂಟು ಮಂದಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿದೆ. ಈ ಬಗ್ಗೆ ನಂಬಿ ನಾರಾಯಣರವರು ಪ್ರಕರಣದ ಹಿನ್ನಲೆಯನ್ನು ಹೀಗೆ ವಿಶ್ಲೇಸಿದ್ದಾರೆ. "ಅಮೇರಿಕಾವು ಭಾರತದ ಕ್ರಯೋಜನಿಕ್ ಇಂಜಿನ್ ಅಥವ ಸ್ವದೇಶಿ ನಿರ್ಮಿತ ತಂತ್ರಜ್ಙಾನದಲ್ಲಿ (ಉಪಗ್ರಹ ಉಡಾವಣಾ ವಾಹನ ಮತ್ತು ಇನ್ನು ಹಲವು) ಸಫಲವಾಗಬಾರದೆಂದು ರಷ್ಯಾದ ಮೇಲೆ ಒತ್ತಡ ಹೇರಿ ಇಸ್ರೋ, ಡಿ ಆರ್ ಡಿ ಒ, ಸೇನೆ ಮತ್ತು ಭಾರತ ಸರಕಾರದ ಅತಿ ಸೂಕ್ಷ್ವಾದ ಗೌಪ್ಯ ವಿಷಯಗಳ ಬೇಹುಗಾರಿಕೆಗೆ ಪ್ರಯತ್ನಿಸಿತ್ತು". 1998ರಲ್ಲಿ ಫೋಕ್ರಾಣ್ನಲ್ಲಿ ನಡೆದ ಅಣ್ವಸ್ತ್ರಗಳ ಪ್ರಯೋಗವನ್ನು ಅಮೇರಿಕಾ ವಿರೋದಿಸಿತ್ತು ಹಾಗೂ ಅದಕ್ಕೂ ಮೊದಲು ಬಹಳ ಸಲ ಪ್ರಯೋಗ ನಡೆಯದಂತೆ ಭಾರತವನ್ನು ತಡೆಯುವಲ್ಲಿ ಅಮೇರಿಕಾ ಸಫಲವಾಗಿತ್ತು.
ಅಬ್ದುಲ್ ಕಲಾಂ ಇವರನ್ನು ಗೌರವಿಸದವರು ಯಾರು ಇಲ್ಲ. ಇಂತಹ ಅಬ್ದುಲ್ ಕಲಾಂರ ಇಸ್ರೋದಲ್ಲಿನ ತಂಡದಲ್ಲಿದ್ದವರ ಪೈಕಿ ಒಬ್ಬರು ಎಸ್ ನಂಬಿ ನಾರಾಯಣ್. ತಮಿಳುನಾಡಿನ ನಾಗರಕೋಯಿಲ್ ನಲ್ಲಿ ಹುಟ್ಟಿದ ಈ ವ್ಯಕ್ತಿಗೆ 2019ರಲ್ಲಿ ಭಾರತ ಸರಕಾರ ಪದ್ಮಭೂಷಣ ನೀಡಿ ಗೌರವಿಸಿದೆ. ಇದು ದೇಶಕ್ಕೆ ಅವರು ನೀಡಿದ ಸೇವೆಯನ್ನು ಗುರುತಿಸಿ ಅವರಿಗೆ ನೀಡಿದ ಗೌರವ. ನಾರಾಯಣ್ರವರ ಪ್ರಯತ್ನದ ಫಲವಾಗಿ ಇಸ್ರೋ ಸ್ವದೇಶಿ ನಿರ್ಮಿತ ಉಪಗ್ರಹ ಉಡಾವಣಾ ವಾಹನ(ಕ್ರಯೋಜನಿಕ್ ಇಂಜಿನ್) ವಲಯದಲ್ಲಿ ಸಾಧನೆ ಮಾಡಿತ್ತು. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿ ಎಸ್ ಎಲ್ ವಿ) ರಾಕೆಟ್ ನ ಬಗ್ಗೆ ನಮಗೆಲ್ಲಾ ತಿಳಿದಿದೆ.
ಇದು ಇಸ್ರೋದ ಬಹು ಉಪಯುಕ್ತ ಉಪಗ್ರಹ ಉಡಾವಣಾ ವಾಹನ. ಪಿ ಎಸ್ ಎಲ್ ವಿಯನ್ನು ಫ್ರೆಂಚ್ ವಿಜ್ಙಾನಿಗಳ ಸಹಯೋಗದಲ್ಲಿ ಇಸ್ರೋ ಅಭಿವೃದ್ಧಿ ಪಡಿಸಿತ್ತು. ಈ ತಂಡದಲ್ಲಿ ನಂಬಿ ನಾರಾಯಣರವರು ಒಬ್ಬರು. ಇದಕ್ಕೆ ಪರ್ಯಾಯವಾಗಿ ಇಸ್ರೋ ಜಿಯೋ ಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಕ್ರಯೋಜನಿಕ್ ಇಂಜಿನ್)ನ್ನು ಅಬಿವೃದ್ಧಿ ಪಡಿಸಿತು. ಈ ಕ್ರಯೋಜನಿಕ್ ಇಂಜಿನ್ನ ತಂತ್ರಾಂಶವನ್ನು ಅಬಿವೃದ್ಧಿ ಪಡಿಸುವಲ್ಲಿ ನಂಬಿ ನಾರಾಯಣ್ ಬಹು ಮುಖ್ಯ ಪಾತ್ರ ವಹಿಸಿದ್ದಾರೆ. ಈ ತಂತ್ರಾಂಶವನ್ನು ಯುದ್ದಕ್ಷಿಪಣಿಗೆ ಬಳಸಿಕೊಳ್ಳುವ ಜೊತೆಗೆ ದೇಶಕ್ಕೆ ಅತಿ ಅಮೂಲ್ಯವಾಗಿ ಬೇಕಾದ ಉಪಗ್ರಹ ಉಡಾವಣಾ ವಾಹನಕ್ಕೆ ಉಪಯೋಗಿಸುವಂತೆ ಸಲಹೆ ನೀಡಿದವರು ನಂಬಿ ನಾರಾಯಣ್. ಇವರು 70ನೇ ದಶಕದಲ್ಲಿ ಲಿಕ್ವಿಡ್ ಪ್ಯೂಲ್ ರಾಕೆಟ್ ತಂತ್ರಜ್ಙಾನವನ್ನು ಕಂಡು ಹಿಡಿದಿದ್ದರು.
ಇದೆ ತಂತ್ರಜ್ಙಾನದಿಂದ ಮುಂದೆ ವಿಕಾಸ್ ಇಂಜಿನ್ ಎಂಬ ಉಡಾವಣಾ ವಾಹನದ ಭಾಗವನ್ನು ನಿರ್ಮಿಸಿ ಪಿ ಎಸ್ ಎಲ್ ವಿ ಗೆ ಪರ್ಯಾಯವಾಗಿ ಜಿ ಎಸ್ ಎಲ್ ವಿ ಸಂಪೂರ್ಣ ಸ್ವದೇಶಿ ನಿರ್ಮಿತ ಉಡಾವಣಾ ವಾಹನವನ್ನು ಪರಿಚಯಿಸುವ ಇಸ್ರೋದ ಸಫಲತೆಯಲ್ಲಿ ಇವರು ಭಾಗಿಯಾಗಿದ್ದರು. ಇದೇ ಕಾರಣಕ್ಕೆ ಇಂದಿನ ಕೇಂದ್ರ ಸರಕಾರ 2019ರಲ್ಲಿ ದೇಶದ ಮೂರನೆ ಅತ್ಯನ್ನತ ನಾಗರಿಕ ಪ್ರಶಸ್ತಿಯಾದ ಪಧ್ಮ ಭೂಷನವನ್ನಿತ್ತು ಗೌರವಿಸಿತು. ನಂಬಿ ನಾರಾಯಣ್ 1966ರಿಂದ ಇಸ್ರೋದ ತಮ್ಮ ಸೇವೆಯಲ್ಲಿ ವಿಕ್ರಮ್ ಸಾರಾಬಾಯ್, ವೈ ಎಸ್ ರಾಜನ್, ಎ ಪಿ ಜೆ ಅಬ್ಧುಲ್ ಕಲಾಂ, ಸತೀಶ್ ಧವನ್, ಯು ಆರ್ ರಾವ್ ರಂತಹ ಹೆಸರುವಾಸಿಯಾದ ವಿಜ್ಞಾನಿಗಳೊಂದಿಗೆ ಕಾರ್ಯನಿರ್ವಹಿಸಿದ್ದಾರೆ.
ತಮ್ಮ ಮೇಲೆ ಆಪಾದನೆ ಬಂದ ಸಮಯದಲ್ಲೂ ಬಾಡಿಗೆ ಮನೆಯಲ್ಲೆ ವಾಸಿಸುತ್ತಿದ್ದರೆಂಬುದು ಮಾಹಿತಿಗಳಿಂದ ತಿಳಿದಿದೆ. ನ್ಯಾಯವನ್ನು ನಂಬಿದ ನಂಬಿ ನಾರಾಯಣರಿಗೆ ಬೆನ್ನೆಲುಬಾಗಿ ಸುಪ್ರಿಮ್ ಕೋರ್ಟ್, ಕೇರಳ ಹೈ ಕೋರ್ಟ್, ಸಿಬಿಐ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮತ್ತು ಇನ್ನು ಕೆಲವು ಎನ್ ಜಿ ಓ ಗಳು ನಿಂತಿದ್ದರಿಂದ ಇವರು ಪ್ರಕರಣದಿಂದ ಸಂಪೂರ್ಣವಾಗಿ ಹೊರಬಂದರು ಹಾಗೆಯೇ ತಾವು ಅನುಭವಿಸಿದ ಅವಮಾನ ಕಿರುಕುಳಗಳಿಗೆ ಪರಿಹಾರವಾಗಿ ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿಗಳನ್ನು ಕೇರಳ ಸರಕಾರದಿಂದ ಎರಡು ಸಾವಿರದ ಇಪ್ಪತ್ತರ ಆಗಸ್ಟ್ ನಲ್ ಪಡೆದರು. ಅಷ್ಟೆ ಅಲ್ಲದೆ ನಿರ್ದೋಷಿ ಎಂದು ಸುಪ್ರೀಮ್ ಕೋರ್ಟ್ ತೀರ್ಪು ಕೊಟ್ಟು ನ್ಯಾಯಕ್ಕೆ ಜಯ ಸಲ್ಲಿಸಿತು. ದೇಶಕ್ಕಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದ ನಂಬಿ ನಾರಾಯಣ್ರ ಜೀವನದಲ್ಲಿ 1994ರ ನಂತರ ಕೆಲವು ವರುಷಗಳ ಕಾಲ ಅಪಾದನೆಯ ಕತ್ತಲು ಆವರಿಸಿ ಸುಮಾರು ಹತ್ತು ವರ್ಷಕ್ಕೂ ಹೆಚ್ಚಿನ ಅವರ ಸೇವೆ ಇಸ್ರೋ ಹಾಗೂ ಭಾರತಕ್ಕೆ ಅಲಭ್ಯವಾದದ್ದು ದುರಂತವೇ ಸರಿ. ಈ ಪ್ರಕರಣ ನಡೆಯದೇ ಇದ್ದಿದ್ದರೆ ನಂಬಿ ನಾರಾಯಣರವರ ಸೇವೆ ಇಸ್ರೋಗೆ ಇನ್ನಷ್ಟು ಕಾಲ ದೊರೆತು ಭಾರತ ಇನ್ನೂ ಹಲವು ತಂತ್ರಜ್ಞಾನದಲ್ಲಿ ತನ್ನ ಸ್ವಂತಿಕೆಯನ್ನು ಬಹಳ ಬೇಗನೆ ಸಾಧಿಸುತ್ತಿತ್ತೋ ಏನೋ. ಯಾವುದೋ ಪಟ್ಟ ಭದ್ರ ಶಕ್ತಿಗಳ ದುರಾಲೋಚನೆಯ ಫಲವಾಗಿ ಭಾರತಕ್ಕೂ ನಷ್ಟ, ವ್ಯಕ್ತಿಗತವಾಗಿ ನಾರಾಯಣರವರಿಗೂ ತುಂಬಲಾರದ ನಷ್ಟವಾಗಿದೆ. ಇಂತಹ ಪಿತೂರಿಗಳು ನಮ್ಮಲ್ಲಿ ಹೊಸದಲ್ಲದಿದ್ದರೂ ಇಂದಿನ ಯುವ ಪೀಳಿಗೆ ತನ್ನ ಭಾರತೀಯತೆಯನ್ನು ಮರೆಯದೆ ಪಿತೂರಿಗಳ ಭಾಗವಾಗದೆ ನ್ಯಾಯವಾಗಿ ನಡೆದು ಭಾರತದ ಅಭಿವೃಧ್ಧಿಗೆ ಸಹಕರಿಸಬೇಕು ಎಂಬುದೇ ಆಶಯ. ಇಂತಹ ಪಿತೂರಿಯಲ್ಲಿ ಇಲ್ಲಿಯವರೆಗೂ ಮತ್ತು ಇನ್ನು ಮುಂದೆ ಭಾಗಿಯಾಗುವವರು ದೇಶದ್ರೋಹಿಗಳಲ್ಲದೆ ಮತ್ತೇನು ಅಲ್ಲ. ನಿರ್ದೋ಼ಷಿಯಾಗಿ ಹೊರಬಂದ ನಂಬಿ ನಾರಾಯಣ್ ಒಬ್ಬ ಹೋರಾಟಗಾರನೇ ಸರಿ. ಇಂತಹ ಮಹಾನ್ ಮಹಾನ್ ವ್ಯಕ್ತಿಗೆ ಕರಾವಳಿ ತರಂಗಿಣಿ ಮುಗಿದು ನಮಿಸುತ್ತಿದೆ.
✍ ಪ್ರೀತಂ ರೈ ಇಳಂತಾಜೆ