ಲೆಫ್ಟಿನೆಂಟ್ ಕರ್ನಲ್ ಎಂ.ಎಲ್. ಖೇತ್ರಪಾಲ್ ಮತ್ತು ಶ್ರೀಮತಿ ಮಹೇಶ್ವರಿ ಖೇತ್ರಪಾಲ್‌ರ ಇಬ್ಬರು ಪುತ್ರರಲ್ಲಿ ಹಿರಿಯ ಮಗನಾಗಿ 14 ಅಕ್ಟೋಬರ್ 1950 ರಂದು ಪುಣೆಯಲ್ಲಿ ಮಿಲಿಟರಿ ಕುಟುಂಬದಲ್ಲಿ ಜನಿಸಿದರು ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್. ಅವರ ಕುಟುಂಬದ ಹಲವು ತಲೆಮಾರುಗಳು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದರಿಂದ, ಸೇನಾ ಜೀವನದ ಮೇಲಿನ ಪ್ರೀತಿ ಅವರಿಗೆ ಸಹಜವಾಗಿಯೇ ಬಂದಿತು. ಅವರ ದೊಡ್ಡ ಅಜ್ಜ ಸಿಖ್ ಸೈನ್ಯದಲ್ಲಿದ್ದು, ಬ್ರಿಟಿಷರ ವಿರುದ್ಧ ಹೋರಾಡಿದವರು. ಅವರ ಅಜ್ಜ ಮೊದಲ ವಿಶ್ವಯುದ್ಧದ ಸಮಯದಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು. ಅರುಣ್ ಖೇತ್ರಪಾಲ್ ಜೂನ್ 1967 ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಿದರು. ಟ್ಯಾಂಕ್ ಸ್ಕ್ವಾಡ್ರನ್‌ಗೆ ಸೇರಿದ ಅವರು, 38 ನೇ ಕೋರ್ಸ್ ನ ಸ್ಕ್ವಾಡ್ರನ್ ಕೆಡೆಟ್ ಕ್ಯಾಪ್ಟನ್ ಆಗಿದ್ದರು. 12 ಜೂನ್ 1971 ರಂದು 17 ಪೂನಾ ಹಾರ್ಸ್ ಗೆ ನಿಯೋಜನೆಗೊಂಡರು. 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ, 17 ಪೂನಾ ಹಾರ್ಸ್ ಅನ್ನು 47 ನೇ ಕಾಲಾಳುಪಡೆ ಬ್ರಿಗೇಡ್‌ನ ಆಜ್ಞೆಗೆ ನಿಯೋಜಿಸಲಾಯಿತು, ಇದು ಶಕರ್ ಘರ್ ಸೆಕ್ಟರ್ ನಲ್ಲಿ ಬಸಂತರ್ ಕದನದಲ್ಲಿ ಭಾಗಿಯಾಗಿತ್ತು. 2 ನೇ ಲೆಫ್ಟಿನೆಂಟ್ ಅರುಣ್ ಖೇತ್ರರ್ಪಾಲ್, ಟ್ಯಾಂಕ್ ರೆಗಿಮೆಂಟಿನ 'ಎ' ಸ್ಕ್ವಾಡ್ರನ್‌ನಲ್ಲಿದ್ದರು ಮತ್ತು ಹತ್ತಿರದಲ್ಲಿದ್ದರು, ಡಿಸೆಂಬರ್ 16 1971 ರಂದು 2 ನೇ ಲೆಫ್ಟಿನೆಂಟ್ ಖೇತ್ರಪಾಲ್ ಪಾಕಿಸ್ತಾನದ ಬ್ರಹತ್ ಟ್ಯಾಂಕ್ ಪಡೆಯನ್ನು ಎದುರುಗೊಂಡು, ದಾಳಿಯನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ಖೇತ್ರಪಾಲ್‌ರ ಟ್ಯಾಂಕ್‌ನ ಕಮಾಂಡರ್ ಲೆಫ್ಟಿನೆಂಟ್ ಅಹ್ಲಾವತ್ ಗಾಯಗೊಂಡರು. ಏಕಾಂಗಿಯಾಗಿ, ಖೇತ್ರಪಾಲ್ ಶತ್ರುಗಳ ಮೇಲೆ ದಾಳಿ ಮುಂದುವರಿಸಿದರು. ಆದರೆ ಭಾರೀ ಸಾವು ನೋವುಗಳ ಹೊರತಾಗಿಯೂ ಶತ್ರು ಹಿಮ್ಮೆಟ್ಟಲಿಲ್ಲ. ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ಉಳಿದ ಟ್ಯಾಂಕ್‌ಗಳೊoದಿಗೆ ಹೋರಾಡಿ, 10 ಶತ್ರು ಟ್ಯಾಂಕ್‌ಗಳನ್ನು ನಾಶಪಡಿಸಿದರು. ಅರುಣ್ ಖೇತ್ರಪಾಲ್ ಅವರ ಟ್ಯಾಂಕ್ ಬೆಂಕಿಯಿoದ ಆವೃತಗೊಂಡರೂ ಅವರು ಟ್ಯಾಂಕ್ ಅನ್ನು ತ್ಯಜಿಸಲಿಲ್ಲ, ಬದಲಾಗಿ ಮುನ್ನುಗ್ಗಿ ಹೋರಾಡಿದರು. ಅವರು ಉಳಿದ ಶತ್ರು ಟ್ಯಾಂಕ್‌ಗಳನ್ನು ನಾಶಮಾಡಲು ಮುಂದಾದರು. ಅವರು ಹೊಡೆದ ಕೊನೆಯ ಶತ್ರು ಟ್ಯಾಂಕ್ ಅವರ ಸ್ಥಾನದಿಂದ ಕೇವಲ 100 ಮೀಟರ್ ದೂರದಲ್ಲಿತ್ತು. ಈ ಹಂತದಲ್ಲಿ, ಅವರ ಟ್ಯಾಂಕ್ ದಾಳಿಗೊಳಗಾಗಿ ಅರುಣ್ ಖೇತ್ರಪಾಲ್ ವೀರೋಚಿತ ಸಾವನ್ನು ಪಡೆದರು. 17 ನೇ ಡಿಸೆಂಬರ್, 1971 ರಂದು, 2 ನೇ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ಅವರನ್ನು ಸಾಂಬಾ ಜಿಲ್ಲೆಯ ಬಳಿ ಅಂತ್ಯಸಂoಸ್ಕಾರ ಮಾಡಿ, ಅವರ ಚಿತಾಭಸ್ಮವನ್ನು ಅವರ ಕುಟುಂಬಕ್ಕೆ ಕಳುಹಿಸಲಾಯಿತು. 2 ನೇ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ಅವರಿಗೆ ರಾಷ್ಟ್ರದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ "ಪರಮ ವೀರ ಚಕ್ರ" ನೀಡಲಾಯಿತು. 2 ನೇ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ 21 ವರ್ಷದ ಚಿಕ್ಕ ವಯಸ್ಸಿನಲ್ಲಿ ಧೈರ್ಯ ಮತ್ತು ತ್ಯಾಗದ ಕಾರ್ಯವನ್ನು ಮಾಡಿದರು. ಅವರಿಗೆ ಕರಾವಳಿ ತರಂಗಿಣಿಯ ಹೆಮ್ಮೆಯ ಸಲ್ಯೂಟ್
✍ ಪ್ರೀತಂ ರೈ ಇಳಂತಾಜೆ