ಕಾರ್ಪೋರಲ್ ಜ್ಯೋತಿ ಪ್ರಕಾಶ್ ನಿರಾಲ ಬಿಹಾರದ ರೋಹ್ಟಾಸ್ ಜಿಲ್ಲೆಯ ಬದ್ಲಾಡಿಹ್ ಮೂಲದವರು. ನವೆಂಬರ್ 15, 1986 ರಂದು ಜನಿಸಿದ ಇವರು 2005 ರಲ್ಲಿ ಐಎಎಫ್‌ಗೆ ಸೇರಿದರು. ಅವರ 12 ವರ್ಷಗಳ ಸೇವೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿನ ವಿವಿಧ ವಾಯುಪಡೆ ನೆಲೆಗಳಲ್ಲಿ ಸೇವೆ ಸಲ್ಲಿಸಿದರು. ನಂತರ ಅವರನ್ನು ವಾಯುಪಡೆ ನೆಲೆಗಳ ಮೇಲೆ ಪ್ರತಿಕೂಲ ದಾಳಿಗಳನ್ನು ಎದುರಿಸಲು ವಿಶೇಷವಾಗಿ ತರಬೇತಿ ಪಡೆದ ಐಎಎಫ್‌ನ ಗಣ್ಯ ಗರುಡ್ ಕಮಾಂಡೋ ಪಡೆಗೆ ಆಯ್ಕೆ ಮಾಡಲಾಯಿತು. 2016 ರಲ್ಲಿ ಪಠಾಣ್‌ಕೋಟ್‌ನಲ್ಲಿನ ವಾಯುಪಡೆ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ, 2017 ರಲ್ಲಿ ಜೆ & ಕೆ ಯಲ್ಲಿ ಸೇನಾ ಘಟಕಗಳೊಂದಿಗೆ ಗರುಡ್ ಪಡೆಗೆ ತರಬೇತಿ ನೀಡಲು ನಿರ್ಧರಿಸಲಾಯಿತು, ಕಾರ್ಪೋರಲ್ ಜ್ಯೋತಿ ಪ್ರಕಾಶ್ ನಿರಾಲಾ ಜೆ & ಕೆ ಮೂಲದ 13 ರಾಷ್ಟ್ರೀಯ ರೈಫಲ್ಸ್ ಜೊತೆ ತರಬೇತಿಗೆ ಸೇರಿದರು. 14 ನವೆಂಬರ್ 2017 ರಂದು, ಗುಪ್ತಚರ ಮೂಲಗಳಿಂದ ಬಂದಿಪೋರಾ ಜಿಲ್ಲೆಯ ಚಂದರ್ಗರ್ ಗ್ರಾಮದಲ್ಲಿ ಭಯೋತ್ಪಾದಕರ ಇರುವಿಕೆಯ ಬಗ್ಗೆ ನಂಬಲರ್ಹವಾದ ಮಾಹಿತಿ ಬಂದು, ಈ ಪರಿಸ್ಥಿತಿಯನ್ನು ವಿಶ್ಲೇಷಿಸಿದ ನಂತರ ಭದ್ರತಾ ಪಡೆಗಳು ಉಗ್ರರನ್ನು ಹೊಡೆದುಹಾಕಲು ಐಎಎಫ್ ಗರುಡ್ ಫೋರ್ಸ್ ಮತ್ತು 13 ರಾಷ್ಟ್ರೀಯ ರೈಫಲ್ಸ್ ಜಂಟಿ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿದವು. ಗೊತ್ತುಪಡಿಸಿದ ಪ್ರದೇಶವನ್ನು ತಲುಪಿದ ನಂತರ, ಕಾರ್ಪೋರಲ್ ಜ್ಯೋತಿ ಪ್ರಕಾಶ್ ನಿರಾಲಾ ಅವರ ತಂಡ ರಹಸ್ಯವಾಗಿ ಉಗ್ರರಿದ್ದ ಮನೆಯನ್ನು ಮತ್ತು ಹೊರಹೋಗಲು ಇದ್ದ ಎಲ್ಲಾ ದಾರಿಯನ್ನು ಸುತ್ತುವರೆಯಿತು, ಅದರಲ್ಲಿದ್ದ ಉಗ್ರರು ದಾಳಿ ಮಾಡಲು ಸಿದ್ದರಾಗುತ್ತಿದ್ದಂತೆ, ಲಘುವಾದ ಮೆಷಿನ್ ಗನ್‌ನಿಂದ ಶಸ್ತ್ರಸಜ್ಜಿತರಾಗಿದ್ದ ಕಾರ್ಪೋರಲ್ ಜ್ಯೋತಿ ಪ್ರಕಾಶ್ ನಿರಾಲಾ ತಾವೇ ಎದುರು ನಿಂತು ಹೊರ ಓಡಿ ಬರುತ್ತಿದ್ದ ಉಗ್ರರನ್ನು ಎದುರಿಸಿ ಅವರಿಂದ ಬರುತ್ತಿದ್ದ ಗುಂಡಿನ ದಾಳಿಯನ್ನು ಲೆಕ್ಕಿಸದೆ ಇಬ್ಬರು ಕುಖ್ಯಾತ ಉಗ್ರನ್ನು ಹೊಡೆದುರುಳಿಸಿದರು. ಉಳಿದ ಎಲ್ಲಾ ಉಗ್ರರನ್ನು ತಮ್ಮ ತಂಡದವರು ಹೊಡೆದುರುಳಿಸಿದನ್ನು ನೋಡುತ್ತಲೇ ತಮಗಾದ ಗುಂಡಿನ ಗಾಯದ ಪರಿಣಾಮ ತೀವ್ರ ರಕ್ತಸ್ರಾವದಿಂದ ಅಲ್ಲಿಯೇ ಅಸುನೀಗಿದರು. ಈ ಕಾರ್ಯಾಚರಣೆಯ ಸಮಯದಲ್ಲಿ ಕೊಲ್ಲಲ್ಪಟ್ಟ ಉಗ್ರರಲ್ಲಿ ಒಬ್ಬ ಲಕ್ಷರ್ ಇ ತೈಬಾ ಕಮಾಂಡರ್ ಜಾಕಿ ಉರ್ ರೆಹಮಾನ್ ಲಖ್ವಿ ಯು 2008 ರ ಮುಂಬೈ ದಾಳಿಯ ಪ್ರಮುಖ ಯೋಜಕನ ಸೋದರಳಿಯ. ಜ್ಯೋತಿ ಪ್ರಕಾಶ್ ನಿರಾಲಾ ಅವರ ಧೈರ್ಯ, ನಾಯಕತ್ವ ಮತ್ತು ಅತ್ಯುನ್ನತ ತ್ಯಾಗಕ್ಕಾಗಿ ೨೬ ಜನವರಿ 2018 ರಂದು ರಾಷ್ಟ್ರದ ಅತ್ಯುನ್ನತ ಶಾಂತಿ ಸಮಯದ ಶೌರ್ಯ ಪ್ರಶಸ್ತಿ "ಅಶೋಕ್ ಚಕ್ರ" ನೀಡಲಾಯಿತು. ಇವರ ಸಹೋದರಿಯ ವಿವಾಹವನ್ನು ಇವರ ಸೈನ್ಯದ ಸ್ನೇಹಿತರು ತಾವೇ ಮುಂದೆ ನಿಂತು ನೆರವೇರಿಸದ್ದಲ್ಲದೆ ಕಾರ್ಪೋರಲ್ ಜ್ಯೋತಿ ಪ್ರಕಾಶ್ ನಿರಾಲಾ ಅವರ ಆಸೆಯಂತೆ ಅವರ ಸಹೋದರಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಬಂದಿದ್ದರು. ಇಂತಹ ಮಹಾನ್ ಯೋದನಿಗೆ ಕರಾವಳಿ ತರಂಗಿಣಿ ಶಿರಭಾಗಿ ನಮಿಸುತ್ತದೆ.