image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೋಹಿಮಾದಿಂದ ಕಾರ್ಗಿಲ್‌ಗೆ

ಕೋಹಿಮಾದಿಂದ ಕಾರ್ಗಿಲ್‌ಗೆ

ತನ್ನ ತಂದೆಗೆ ತಾನು ಸೈನ್ಯ ಸೇರುವುದು ಇಷ್ಟವಿಲ್ಲದಿದ್ದರೂ ಅವರ ಮನವೊಲಿಸಿ ಸೈನ್ಯ ಸೇರಿದವರು ನಾಗಾಲ್ಯಾಂಡ್‌ನ ಕೋಹಿಮಾದ ನೈಕೆಜಕು ಕೆಂಗುರುಸೆ. ಅಲ್ಲಿಂದ ತಮ್ಮ ಸೈನ್ಯದ ಪಯಣ ಪ್ರಾರಂಭಿಸಿ ಕಾರ್ಗಿಲ್ ಯುದ್ಧದಲ್ಲಿ ವೀರ ಮಣವನ್ನಪ್ಪಿ ಮರಣೋತ್ತರ ಮಹಾವೀರಚಕ್ರ ಪಡೆದರು ನೈಕೆಜಕು ಕೆಂಗುರುಸೆ. ಸಂಪ್ರದಾಯಸ್ಥ ಕ್ರಿಶ್ವಿಯನ್ ಕುಟುಂಬದ ಕೆಂಗುರುಸೆ ತಮ್ಮ ಸಹೋದ್ಯೋಗಿಗಳ ಮಧ್ಯದಲ್ಲಿ ನಿಂಬೂ ಸಾಬ್ ಎಂದು ಕರೆಸಿಕೊಂಡ ಮನೆಯವರ ಪ್ರೀತಿಯ ನೀಬೂ. ಶಾಂತ ಸ್ವಭಾವದ, ಯಾರಿಗೂ ಎದುರುತ್ತರ ನೀಡದ, ಎತ್ತರದ ಧ್ವನಿಯಲ್ಲಿ ಎಂದೂ ಮಾತನಾಡದ, ತಮ್ಮ ಸೀನಿಯರ್‌ಗಳು ಹೇಳಿದನ್ನು ಚಾಚೂ ತಪ್ಪದೆ ಮಾಡಿ ಮುಗಿಸುತ್ತಿದ್ದ ಕೆಂಗುರುಸೆಯನ್ನು ನೋಡುವಾಗ ಇವನು ಯುದ್ಧ ಮಾಡಬಲ್ಲನೇ ಎಂದು ಅನುಮಾನಿಸಿದವರೂ ಉಂಟು. ಈ ಅನುಮಾನವನ್ನು ತಾನು ಟ್ರೈನಿಂಗ್ ಮುಗಿಸಿ 2 ನೇ ರಜಪೂತಾನ ರೈಫಲ್ಸ್ ನ ಘಾತಕ್ ಪ್ಲಟೂನನ್ನು ಮುನ್ನಡೆಸಲು ಆಯ್ಕೆಯಾದಾಗಲೇ ಉತ್ತರ ನೀಡಿದರು. ಮುಂದೆ ಲೆಪ್ಟಿನೆಂಟ್ ಆದ ನೈಕೆಜಕು ಕೆಂಗುರುಸೆ ಕಾರ್ಗಿಲ್ ಯುದ್ಧದ ಪ್ರಮುಖ ಕಾರ್ಯಾಚರಣೆಯಾದ ತೋಲೋಲಿಂಗ್ ಪರ್ವತದ ವಿಜಯದಲ್ಲಿ ಮರೆಯಲಾರದ ಕೊಡುಗೆ ನೀಡಿದರು. ಕಾರ್ಗಿಲ್‌ನಲ್ಲಿ ನಮ್ಮ ಯೋಧರು ಪಾಕಿಸ್ಥಾನದೊಂದಿಗೆ ಮಾತ್ರವಲ್ಲ, ಅಲ್ಲಿನ -10 ಡಿಗ್ರಿ ಉಷ್ಣತೆ ಮತ್ತು ಕಡಿದಾದ ಬೆಟ್ಟಗುಡ್ಡಗಳೊಂದಿಗೂ ಹೋರಾಡಿದ್ದಾರೆ. ಬ್ಲಾಕ್ ಟಾಪ್ ಎಂಬ ತೋಲೋಲಿಂಗ್ ಪರ್ವತದ ಒಂದು ಭಾಗವನ್ನು ತಲುಪಲು ಹಗ್ಗಗಳ ಸಹಾಯದಿಂದ ಲೆಪ್ಟಿನೆಂಟ್ ನೈಕೆಜಕು ಕೆಂಗುರುಸೆ ಮತ್ತು ತಂಡದವರು ಏರುತ್ತಿರುವಾಗಲೇ ಶತ್ರುಗಳ ಗುಂಡಿನ ದಾಳಿ ಪ್ರಾರಂಭವಾಯಿತು. ಲೆಪ್ಟಿನೆಂಟ್ ನೈಕೆಜಕು ಕೆಂಗುರುಸೆಯವರ ಹತ್ತಿರವೇ ಒಂದು ಗ್ರೆನೇಡ್ ಸ್ಪೋಟಗೊಂಡಿತು. ಹೊಟ್ಟೆ, ಕಾಲು ಕೈಗಳಿಗೆ ಗಾಯವಾಗಿ ರಕ್ತಸ್ರಾವವಾಗಿತ್ತಿದ್ದರೂ, ಛಲಬಿಡದ ಲೆಪ್ಟಿನೆಂಟ್ ನೈಕೆಜಕು ಕೆಂಗುರುಸೆ ಪಾಕಿಸ್ಥಾನಿಗಳ ಮಾರ್ಟರ್ ಶೆಲ್‌ಗಳ ದಾಳಿಯ ನಡುವೆಯೂ ಒಂದು ಕೈಯಲ್ಲಿ ಹಗ್ಗ ಹಿಡಿದು ಇನ್ನೊಂದರಲ್ಲಿ ರಾಕೆಟ್ ಲಾಂಚರನ್ನು ಹೆಗಲಿಗೇರಿಸಿ ಶತ್ರುಗಳ ಒಂದು ಬಂಕರನ್ನು ಧ್ವಂಸ ಮಾಡಿದರು. ಒಂದು ಬಂಡೆಯ ಮರೆಯಲ್ಲಿ ಮೇಲೆ ಹತ್ತಲು ಪ್ರಯತ್ನಿಸಿತ್ತಿರುವಾಗ ಕಾಲಿಗೆ ಹಾಕಿದ್ದ ಶೂ ಮಂಜಿನ ಮೇಲೆ ಜಾರುತ್ತಿತ್ತು. ಮುಂದಡಿಯಿಡಲು ಕಷ್ಟವಾಗುತ್ತಿದ್ದಂತೆ ಯಾರೂ ಊಹಿಸದ ರೀತಿ -10 ಡಿಗ್ರಿ ಉಷ್ಣತೆಯಲ್ಲಿ ತಮ್ಮ ಶೂ ಕಳಚಿ ಬರಿಗಾಲ್ಲಿ ಆ ಕಡಿದಾದ ಬೆಟ್ಟವನ್ನು ಏರಿದ ಲೆಪ್ಟಿನೆಂಟ್ ನೈಕೆಜಕು ಕೆಂಗುರುಸೆ ತಾವೊಬ್ಬರೇ ತಮ್ಮ ಕಮಾಂಡೋ ಕತ್ತಿಯನ್ನು ಝಳಪಳಿಸುತ್ತಾ ಎರಡನೇ ಬಂಕರ್ ನಲ್ಲಿದ್ದ ಶತ್ರುಗಳನ್ನು ಕತ್ತರಿಸಿ ಹಾಕಿದರು. ತಮ್ಮ ಸಂಗಡಿಗರಿಗೆ ಮೇಲೆ ಏರಿ ಬರಲು ಅನುವು ಮಾಡಿಕೊಟ್ಟು ಎರಡು ಬಂಕರನ್ನು ಧ್ವಂಸಮಾಡಿದ್ದ ಅವರು ಮೂರನೇ ಬಂಕರ್ ನ ಹತ್ತಿರ ಬರುವಾಗಲೇ ಅಲ್ಲಿಂದ ಗುಂಡಿನ ಸುರಿಮಳೆಯಾಯಿತು. ಈ ದಾಳಿ ಹೇಗಿತ್ತೆಂದರೆ ಲೆಪ್ಟಿನೆಂಟ್ ನೈಕೆಜಕು ಕೆಂಗುರುಸೆ ಅವರು ಗುಂಡಿನ ದಾಳಿಗೊಳಗಾಗಿ 100 ಅಡಿ ಆಳದ ಪ್ರಪಾತಕ್ಕೆ ತಳ್ಳಲ್ಪಟ್ಟರು. ತಮ್ಮ ನೆಚ್ಚಿನ ನಿಂಬೂ ಸಾಬ್ ಕೆಳಗೆ ಬೀಳುವುದನ್ನು ನೋಡಿದ ತಂಡ ರೊಚ್ಚಿಗೆದ್ದು ' ಜೈ ಕರ್ಣಿ ಮಾತಾ' ಎಂಬ ಯುದ್ಧಗೋಷದೊಂದಿಗೆ ಶತ್ರುಗಳನ್ನು ಅಟ್ಟಾಡಿಸಿ ಕೊಂದು ಬ್ಲಾಕ್ ಟಾಪ್ ಎಂಬ ತೋಲೋಲಿಂಗ್ ಪರ್ವತದ ಈ ಪೋಸ್ಟನ್ನು ವಶಪಡಿಸಿಕೊಂಡರು. 'ಇದು ನಿಮ್ಮ ವಿಜಯ' ಎಂದು ಲೆಪ್ಟಿನೆಂಟ್ ನೈಕೆಜಕು ಕೆಂಗುರುಸೆ ಉರುಳಿದ ಪ್ರಪಾತದೆಡೆಗೆ ನೋಡಿ ವಿಜಯೋದ್ಗಾರವಿತ್ತರು. ಇವರ ಮರಣೋತ್ತರ 'ಮಹಾವೀರ ಚಕ್ರವನ್ನು  ಅವರ ತಂದೆ ನೆಸಿಲೆ ಕೆಂಗುರರುಸೆ ಹೆಮ್ಮೆಯಿಂದ ಸ್ವೀಕರಿಸಿದರು. ಇಂತಹ ಮಹಾನ್ ವೀರನೀಗೆ ಕರಾವಳಿ ತರಂಗಿಣಿ ಶಿರಬಾಗಿ ನಮಿಸುತ್ತಿದೆ. 

✍ಪ್ರೀತಂ ರೈ ಇಳಂತಾಜೆ

Category
ಕರಾವಳಿ ತರಂಗಿಣಿ