image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೇಜರ್ ಕುಲ್ದೀಪ್ ಸಿಂಗ್ ಚಾಂದ್ಪುರಿ

ಮೇಜರ್ ಕುಲ್ದೀಪ್ ಸಿಂಗ್ ಚಾಂದ್ಪುರಿ

ಬಹುಶಃ 1997 ರಲ್ಲಿ ಹಿಂದಿಯಲ್ಲಿ ತೆರೆಕಂಡ "ಬಾರ್ಡರ್"ಸಿನಿಮಾ ಮನರಂಜನೆಯ ಬದಲಾಗಿ ಭಾರತೀಯ ವೀರ ಯೋಧನೋರ್ವನ ಜೀವನದ ಒಂದು ಭಾಗವನ್ನು ತೋರಿಸಿತ್ತು. ಒಂದು ಯುದ್ಧದಲ್ಲಿ ತನ್ನ ತಾಯಿ ನಾಡನ್ನು ತಾನಿರುವ ತನಕ ಇನ್ನೊಬ್ಬರಿಗೆ ಬಿಟ್ಟು ಕೊಡಲಾರೆ ಎಂಬ ಧೋರಣೆಯನ್ನು ತೋರಿಸಿದ ಚಿತ್ರ. 'ಮೇಜರ್ ಕುಲ್ದೀಪ್ ಸಿಂಗ್ ಚಾಂದ್ಪುರಿ' . 1971 ರಲ್ಲಿ 'ಮಹಾ ವೀರ ಚಕ್ರ' ಪಡೆದ ಭಾರತದ ಹೆಮ್ಮೆಯ ಯೋಧ. 2014 ರವರೆಗೂ ಭಾರತೀಯ ಸೇನೆಗೆ ತನ್ನ ಸೇವೆ ಸಲ್ಲಿಸಿ 'ಬ್ರಿಗೇಡಿಯರ್' ಹುದ್ದೆ ಅಲಂಕರಿಸಿದ್ದರು. 1971 ರ ಲೋಂಗೆವಾಲ ಯುದ್ಧದಲ್ಲಿ ಬ್ರಹತ್ ಸೇನಾ ಬಲದ ಪಾಕಿಸ್ಥಾನವನ್ನು ತನ್ನ ಅಲ್ಪ ಸೇನಾ ಬಲದಿಂದ ಹಿಮ್ಮೆಟ್ಟಿಸಿದವರು 'ಮೇಜರ್ ಕುಲ್ದೀಪ್ ಸಿಂಗ್ ಚಾಂದ್ಪುರಿ'. ಅಂದು ರಾಜಸ್ಥಾನದ ಲೋಂಗೆವಾಲ ಪೋಸ್ಟನ್ನು 23ನೇ ಪಂಜಾಬ್ ರೆಜಿಮೆಂಟಿನ ತನ್ನ 120 ಮಂದಿ ಯೋಧರೊಂದಿಗೆ ಕಾಯುತ್ತಿರುವಾಗ ಪಾಕಿಸ್ಥಾನದ 51 ನೇ ಕಾಲಾಳುಪಡೆ ಬ್ರಿಗೇಡ್‌ನ 2000ಕ್ಕೂ ಹೆಚ್ಚು ಸೈನಿಕರು ಮತ್ತು 40ಕ್ಕೂ ಹೆಚ್ಚು ಯುದ್ಧ ಟಾಂಕರ್‌ಗಳ ಪಡೆಯು ಆಕ್ರಮಿಸಿದಾಗ ಮತ್ತು ಅಂದಿನ ರಾತ್ರಿಗೆ ಭಾರತೀಯ ವಾಯುಪಡೆಯ ಸೇವೆಯೂ ಸಿಗದೇ ಇದ್ದಾಗ ಅಲ್ಲಿದ್ದ 120 ಸೈನಿಕರನ್ನು ಹುರಿದುಂಬಿಸಿ ಯುದ್ಧ ಮಾಡಲು ಪ್ರಚೋದಿಸಿ, ರಾತ್ರಿ ಇಡೀ ವೈರಿ ಸೇನೆಯನ್ನು ತಡೆದು, ಬೆಳಗ್ಗಿನ ಜಾವ ನಾಲ್ಕು ಭಾರತೀಯ ವಾಯುಪಡೆಯ ಹಂಟರ್ ಯುದ್ಧ ವಿಮಾನದ ಸಹಾಯದಿಂದ ಪಾಕಿಸ್ಥಾನದ ಬ್ರಹತ್ ಸೇನಾ ಪಡೆಯ 30 ಕ್ಕೂ ಹೆಚ್ಚು ಯುದ್ಧ ಟಾಂಕರ್‌ಗಳನ್ನು ಹಾನಿಗೊಳಿಸಿ, 200 ಕ್ಕೂ ಹೆಚ್ಚು ಸೈನಿಕರನ್ನು ಬಲಿಪಡೆದು, 500 ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿ, 800ಕ್ಕೂ ಹೆಚ್ಚು ಗಾಯಾಳುಗಳ ಜೊತೆಗೆ ಪಾಕಿಸ್ಥಾನದ ಪಡೆ ಹಿಂತಿರುಗಿ ಓಡುವಂತೆ ಮಾಡಿದರು. “ಮೇಜರ್ ಕುಲ್ದೀಪ್ ಸಿಂಗ್ ಚಾಂದ್ಪುರಿ” ಮತ್ತು ಅವರ 120 ಸೈನಿಕ ಬಲ ತುಕಡಿ. ನಮ್ಮಲ್ಲಿಯೂ ಕೆಲವು ಸೈನಿಕರ ಬಲಿದಾನ, ನಷ್ಟ ಸಂಭವಿಸಿದರೂ ಆ ಯೋಧರಿಗೆ ಅದು ನಗಣ್ಯವಾಗಿತ್ತು. ಹೀಗೆ ಓಡುವಾಗ ಪಾಕಿಸ್ಥಾನಿಯರು 10ಕ್ಕೂ ಹೆಚ್ಚು ಹಾನಿಯಾಗದ ಟಾಂಕರಗಳನ್ನು ಬಿಟ್ಟು ಓಡಿದ್ದರು, ನಮ್ಮ ಸೈನಿಕರು ಆ ಟಾಂಕರ್‌ಗಳ ಮೇಲೆ ಕುಣಿದು ಸಂಭ್ರಮಿಸಿದರು. ಈ ಸಂದರ್ಭ ಹೇಗಿದ್ದಿರಬಹುದು, ಎದುರಿಗೆ ಸಾಗರದಂತೆ ಇರುವ ಬಲಶಾಲಿ ವೈರಿ ಪಡೆ, ತಮ್ಮ ಮೇಜರ್ ಹೇಳಿದನ್ನು ಕೇಳಿ ಆತ್ಮಸ್ಥೈರ್ಯ ಪಡೆದು ಗಟ್ಟಿಯಾಗಿ ನಿಲ್ಲುವುದು ಊಹಿಸಲೂ ಸಾದ್ಯವಾಗದು, ಆದರೂ ನಮ್ಮ ಸೈನಿಕರು ಅಂದು ದೊಡ್ಡ ಸೈನ್ಯವನ್ನು ಎದುರಿಸಿದರು ಮತ್ತು ಯುದ್ಧವನ್ನು ಗೆದ್ದರು ಎಂದರೆ 'ಮೇಜರ್ ಕುಲ್ದೀಪ್ ಸಿಂಗ್ ಚಾಂದ್ಪುರಿ' ಯವರ ಮಾತಿನಲ್ಲಿ ಎಂತಹ ಬಲವಿದ್ದೀತು, ಅವರ ಮೇಲೆ ಸೈನಿಕರಿಗೆ ಯಾವ ಮಟ್ಟದ ನಂಬಿಕೆ ಬಂದಿರಬಹುದು, ಯದ್ಧದಲ್ಲಿ ತನ್ನವರ ಒಟ್ಟಿಗೆ ನಿಂತ 'ಮೇಜರ್ ಕುಲ್ದೀಪ್ ಸಿಂಗ್ ಚಾಂದ್ಪುರಿ'ಯವರ ಮನಸ್ಥೈರ್ಯ ಊಹೆಗೂ ನಿಲುಕದ್ದು. ಈ ಘಟನೆ ನಡೆದು 50 ವರ್ಷ ಸಂದರೂ, ಅಂಥ ಯೋಧರನ್ನು ನೆನೆಯುವಾಗ ಗರ್ವವೆನಿಸುತ್ತದೆ. ಅವರಿಗೆ ಸಂದಬೇಕಾದ ಗೌರವ, ನಾವೆಷ್ಟು ಗೌರವಿಸಿದರೂ ಸಾಲದು ಬಿಡಿ. “ಮಹಾ ವೀರ ಚಕ್ರ” ದಂತಹ ಪ್ರಶಸ್ತಿಗೆ ಇವರೇ ವಾರಸುದಾರರು ಎನ್ನಲು ಹೆಮ್ಮೆ ಎನ್ನಿಸುತ್ತದೆ. ಹಾಗೆ ತನ್ನ ನಿವೃತ್ತಿ ತನಕವೂ ದೇಶ ಸೇವೆ ಮಾಡುವ ಅವರ ತುಡಿತಕ್ಕೆ ಕರಾವಳಿ ತರಂಗಿಣಿಯ ಸಲಾಮ್.

✍ ಪ್ರೀತಂ ರೈ ಇಳಂತಾಜೆ

 

Category
ಕರಾವಳಿ ತರಂಗಿಣಿ