ಧಾರ್ಮಿಕವಾಗಿ ನಾಲ್ಕು ಯುಗಗಳಿಂದಲೂ, ವಿವಿಧ ಹೆಸರುಗಳಿಂದ ಅಸ್ತಿತ್ವದಲ್ಲಿರುವ ಭೂ ಕೈಲಾಸ ಎಂದೇ ಪ್ರತೀತಿ ಹೊಂದಿರುವ ಕಾರಿಂಜ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದಲ್ಲಿದೆ. ಈ ಕ್ಷೇತ್ರವನ್ನು ಕೃತ ಯುಗದಲ್ಲಿ ರೌದ್ರಗಿರಿ, ತ್ರೇತಾ ಯುಗದಲ್ಲಿ ಗಜೇಂದ್ರಗಿರಿ, ದ್ವಾಪರದಲ್ಲಿ ಭೀಮಶೈಲವೆಂದು ಕರೆಯುತ್ತಿದ್ದರೆಂಬ ಐತಿಹ್ಯವಿದೆ. ಇಡೀ ಬೆಟ್ಟ ಪ್ರದೇಶವೇ ಸುಮಾರು 25 ಎಕರೆ ವ್ಯಾಪಿಸಿದೆ. ಈ ಕ್ಷೇತ್ರದ ಸುತ್ತಲೂ ಕೊಡ್ಯಮಲೆಯ ದಟ್ಟ ಅರಣ್ಯ ಆವರಿಸಿಕೊಂಡಿದೆ. ಬೆಟ್ಟದ ಬುಡದಲ್ಲಿರುವ ಗಧೆಯ ಆಕಾರದ ವಿಶಾಲವಾದ ’ಗಧಾತೀರ್ಥ’ ಎಂಬ ಶುದ್ಧ ನೀರಿನ ಕೊಳವು ಸುಮಾರು 237 ಮೀ. ಉದ್ದ 55 ಮೀ. ಅಗಲವಿದೆ.
ಇಲ್ಲಿ ಜಲಪ್ರೋಕ್ಷಣೆ ಮಾಡಿಕೊಂಡು ಬೆಟ್ಟ ಹತ್ತುವುದು ಭಕ್ತರ ರೂಡಿ. ಗಧಾತೀರ್ಥದಲ್ಲಿ ದೊಡ್ಡಗಾತ್ರದ ಮೀನುಗಳನ್ನು ಕಾಣಬಹುದು. ಇಲ್ಲಿ ಮೀನು ಹಿಡಿಯುವುದು ನಿಸಿದ್ದ. ಕೆರೆಯ ಪಕ್ಕದಲ್ಲಿ ವಿಶಾಲವಾದ ಅಶ್ವತ್ತವೃಕ್ಷ ಇದೆ. ಅಲ್ಲೇ ಪಕ್ಕದಲ್ಲಿ ಕಾಡಿನಿಂದ ಮುಚ್ಚಿಹೋದ ಪುರಾತನ ಗುಹೆಯೊಂದಿದೆ. ಹಿಂದೆ ಋಷಿ ಮುನಿಗಳು ಇಲ್ಲಿ ತಪಸ್ಸನ್ನಾರಿಸಿದ್ದಾರೆ ಎನ್ನಲಾಗುತ್ತಿದೆ. ಇಲ್ಲಿಂದ ಬೃಹತ್ ಬಂಡೆಯ ಮೆಟ್ಟಿಲು ಏರುತ್ತಾ ಸಾಗಿದರೆ ಪಾರ್ವತಿ ಗುಡಿ ಸಿಗುತ್ತದೆ. ಮೆಟ್ಟಿಲು ಹತ್ತಿ ಬರಲಾಗದವರಿಗಾಗಿ ಹಿಂದಿನಿಂದ ಡಾಂಬರು ರಸ್ತೆ ಕೂಡಾ ಇದೆ. ಇಷ್ಟರಲ್ಲಾಗಲೇ ನಮ್ಮನ್ನು ವಾನರ ಸೇನೆ ಸ್ವಾಗತಿಸುತ್ತದೆ. ಕೆಲವು ಸಲ ಆಹಾರಕ್ಕಾಗಿ ನಮ್ಮ ಜೊತೆ ಕಾಳಗಕ್ಕೂ ಸಿದ್ದವಾಗುತ್ತದೆ. ಪಾರ್ವತಿ ದರ್ಶನದ ನಂತರ ತೀರಾ ಕಡಿದಾದ ಸುಸಜ್ಜಿತ ಸುಮಾರು 140 ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿ ’ಉಕ್ಕಡದ ಬಾಗಿಲು’ ಕಾಣಸಿಗುತ್ತದೆ. ಇದು ಕಲ್ಲಿನಿಂದ ಮಾಡಿದ ದ್ವಾರ.
ಅಲ್ಲಿಂದ ಮುಂದಕ್ಕೆ ಬಂಡೆ ಹಾಗೂ ಕುರುಚಲು ಮರ-ಗಿಡಗಳ ನಡುವೆ ಸುಮಾರು 120 ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಿದರೆ ಬೆಟ್ಟದ ತುದಿಯಲ್ಲಿದೆ ಶಿಲಾಮಯ ಶಿವ ದೇವಸ್ಥಾನ. ಅದಕ್ಕೂ ಮೊದಲು ಮೆಟ್ಟಿಲುಗಳ ಪಕ್ಕ ಉಂಗುಷ್ಟ ತೀರ್ಥ, ಜಾನು ತೀರ್ಥ ಸಿಗುತ್ತದೆ. ಈ ಪುಟ್ಟ ಕೆರೆಗಳನ್ನು ಹಾಗೂ ಕೆಳಗಿನ ಗದಾತೀರ್ಥವನ್ನು ಮಹಾಭಾರತ ಕಾಲದಲ್ಲಿ ಭೀಮಸೇನ ನಿರ್ಮಿಸಿದ ಎಂಬ ನಂಬಿಕೆ. ವರ್ಷದ ಎಲ್ಲಾ ದಿನ ಬೆಟ್ಟದ ತುದಿಯಲ್ಲಿರುವ ಈ ಕೆರೆಗಳಲ್ಲಿ ನೀರು ಬತ್ತದಿರುವುದು ಇಲ್ಲಿಯ ವಿಶೇಷ. ದೇವಳ ಪಕ್ಕದಲ್ಲಿರುವ ’ಹಂದಿಕೆರೆ’ಯು ಅರ್ಜುನನಿಂದಾಗಿ ನಿರ್ಮಾಣವಾಯಿತು ಎನ್ನುವ ಐತಿಹ್ಯವಿದೆ. ದಕ್ಷಿಣ ಕನ್ನಡದ ವಿವಿದ ತಾಣಗಳನ್ನು ಬೇಟಿ ಮಾಡುವ ಸಂದರ್ಭದಲ್ಲಿ ಇಂತಹ ರಮಣೀಯ ಹಾಗೂ ದಾರ್ಮಿಕ ನೆಲೆಗಟ್ಟಿನ ಕ್ಷೇತ್ರಕ್ಕೆ ಬೇಟಿ ನೀಡಲು ಮರೆಯದಿರಿ.
✍ಲಲಿತಶ್ರೀ ಪ್ರೀತಂ ರೈ