ಮಂಗಳೂರಿನ ಕೇಂದ್ರ ಸ್ಥಾನದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದಲ್ಲಿರುವ ಮಂಗಳಾದೇವಿ ದೇವಸ್ಥಾನದ ಪ್ರಧಾನ ದೇವತೆಯಾದ "ಮಂಗಳಾಂಬೆ"ಯಿಂದಲೆ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಈ ದೇವಸ್ಥಾನವು ಒಂಬತ್ತನೇ ಶತಮಾನದ ರಾಜನಾದ ಕುಂದವರ್ಮನ ಕಾಲದಲ್ಲಿ ಪ್ರತಿಷ್ಠಾಪನೆಗೊಂಡಿತು. ಆ ಕಾಲದಲ್ಲಿ ಅಲೂಪ ವಂಶದ ರಾಜನಾಗಿದ್ದ ಕುಂದವರ್ಮರಾಜ ಬಹಳ ಪ್ರಸಿದ್ಧಿ ಪಡೆದಿದ್ದ ಅದೇ ಕಾಲದಲ್ಲಿ ನೇಪಾಳದಿಂದ ನಾಥಪಂಥದ ಸಂನ್ಯಾಸಿಗಳಾದ ಮಚ್ಚೇಂದ್ರನಾಥ ಹಾಗು ಗೋರಾಕ್ಷನಾಥರು ನೇತ್ರಾವತೀ ನದಿಯನ್ನು ದಾಟಿ ಮಂಗಳಾಪುರ ರಾಜ್ಯಕ್ಕೆ ಬರುತ್ತಾರೆ, ನೇತ್ರಾವತಿ ನದಿಯ ತಪ್ಪಲಿನ ಒಂದು ಪ್ರದೇಶವನ್ನು ಆಯ್ಕೆಮಾಡಿ ಅಲ್ಲಿ ಅವರ ಆಶ್ರಮವನ್ನು ಸ್ಥಾಪಿಸಿದರು. ಈ ಜಾಗ ಕ್ರಮೇಣ ಗೋರಖಂಡಿ ಎಂದು ಹೆಸರುವಾಸಿಯಾಯಿತು. ಸಂತರ ಆಗಮನವನ್ನು ಮನಗಂಡು ರಾಜ ಕುಂದವರ್ಮ ಅವರ ಆಶ್ರಮಕ್ಕೆ ಆಗಮಿಸಿ ಸಕಲ ರಾಜೋಪಚಾರವನ್ನು ಕೊಟ್ಟು ಸಂತರ ಕೃಪೆಗೆ ಪಾತ್ರನಾಗುತ್ತಾನೆ.
ಸಂತುಷ್ಟರಾದ ಸಾದುಗಳು ಮಂಗಳಾಪುರವು ಮಾತೆ ಮಂಗಳಾಂಬೆಗೆ ಸೇರಿದ್ದೆಂದು, ಒಂದು ಕಾಲದಲ್ಲಿ ಈ ಸ್ಥಳದಲ್ಲಿ ಮಾತೆ ಮಂಗಳಾಂಬೆಯ ಪುಣ್ಯಕ್ಷೇತ್ರವಿತ್ತೆಂದು, ವಿಕಾಸಿನ ಹಾಗೂ ಅಂಡಾಸುರರು ಭೂಲೋಕವನ್ನು ನಾಶಮಾಡಲು ಹೊರಟಾಗ ಮಾತೆ ಮಂಗಳಾಂಬೆ ಆ ರಾಕ್ಷಸರನ್ನು ಸದೆಬಡಿದು ಪೃಥ್ವಿಯನ್ನು ರಕ್ಷಿಸಿ, ಈ ಘಟನೆ ನಡೆದ ಸ್ಥಳದಲ್ಲೇ ಆ ಮಹಾತಾಯಿ ನೆಲೆಗೊಂಡಳು. ಆ ದೇವರ ಬಿಂಬವನ್ನು ಪುನಃ ಭೂಮಿಗೆ ಪರಿಚಯಿಸಲು ಕಾರಣನಾದವನು ಪರಶುರಾಮ ಎಂದು ಈ ಸ್ಥಳ ಮಹಿಮೆಯನ್ನು ರಾಜನಿಗೆ ವಿವರಿಸುತ್ತಾರೆ. ಇದೆಲ್ಲ ಕಥೆಯನ್ನು ಕೇಳಿ ತಿಳಿದುಕೊಂಡ ರಾಜ ಸಂತರ ಆದೇಶದಂತೆ ಲಿಂಗವಿದ್ದ ಜಾಗವನ್ನು ಅಗೆದು, ಲಿಂಗ ಹಾಗು ಧಾರಾಪಾತ್ರೆಯನ್ನು ನಾಗರಾಜನ ಸಮೇತವಾಗಿ ಹೊರತೆಗೆದು, ಯೋಗ್ಯ ಶಿಲ್ಪಿಗಳನ್ನು ಕರೆಯಿಸಿ ಶ್ರೀ ಮಂಗಳಾದೇವಿಗೆ ಅವರಿಂದ ಮಂದಿರವನ್ನು ನಿರ್ಮಿಸಿ ಲಿಂಗರೂಪದ ಬಿಂಬವನ್ನು ಪುನರ್ ಪ್ರತಿಷ್ಥಾಪಿಸಿ, ನಿಷ್ಟಾವಂತರಾದ ಯೋಗ್ಯ ಬ್ರಾಹ್ಮಣರಿಂದ ತ್ರೀಕಾಲ ಪೂಜೆಗೆ ವ್ಯವಸ್ಥೆ ಮಾಡಿದನು.
ಈ ಕಾರ್ಯಕ್ರಮದಲ್ಲಿ ಮಚ್ಚೇಂದ್ರನಾಥರ ಶಿಷ್ಯರಾದ ಗೋರಕ್ಷನಾಥರು ಉಪಸ್ಥಿತರಿದ್ದದ್ದು ಮಾತ್ರವಲ್ಲದೆ ಶ್ರೀ ಮಂಗಳಾದೇವಿಗೆ ಪಟ್ಟೆ ವಸ್ತ್ರವನ್ನು ಅರ್ಪಿಸಿ ಪೂಜಿಸಿದರು. ಅದರ ಕುರುಹಾಗಿ ಇಂದಿಗೂ ಕದ್ರಿ ಮಠದ ಯೋಗಿರಾಜರು ಕದ್ರಿ ಉತ್ಸವದ ಮೊದಲ ದಿನ ಶ್ರೀಮಂಗಳಾದೇವಿ ದೇವಸ್ಥಾನಕ್ಕೆ ಬಂದು ಶ್ರೀ ದೇವಿಗೆ ಪೀತಾಂಬರ ಅರ್ಪಿಸಿ ಪೂಜೆ ಒಪ್ಪಿಸುವ ಕ್ರಮ ನಡೆದುಕೊಂಡು ಬಂದಿದೆ.ಈ ದೇವಿಯ ವಿಶೇಷ ಅನುಗ್ರಹವೆಂದರೆ ಮದುವೆಯಾಗದ ಕನ್ಯೆ ಈ ಕ್ಷೇತ್ರಕ್ಕೆ ಬಂದು ದೀಕ್ಷೆಯಿಂದಿದ್ದು ಪಾರ್ವತಿ ಸ್ವಯಂವರ ವೃತವನ್ನು ಕೈಕೊಂಡರೆ ಆಕೆಗೆ ಉತ್ತಮ ಗುಣವಂತನೂ ಐಶ್ವರ್ಯವಂತನಾದ ಪತಿಯು ದೊರಕುವುದರಲ್ಲಿ ಸಂದೇಹವಿಲ್ಲ. ಮಂಗಳೂರಿಗೆ ಬೇಟಿ ನೀಡಿದಾಗ ನಗುಮುಖದಿಂದ ಹಾರೈಸುವ ತಾಯಿ ಮಂಗಳಾದೇವಿಯ ದಿವ್ಯ ದರುಶನ ಪಡೆದು ಪುನೀತರಾಗಲು ಮರೆಯದಿರಿ.
✍ಲಲಿತಶ್ರೀ ಪ್ರೀತಂ ರೈ