ದಕ್ಷಿಣ ಕನ್ನಡ ಜಿಲ್ಲೆಯ ಶಿಬರೂರಿನ (ತಿಬಾರ್) ಪ್ರಕೃತಿಯ ಮಡಿಲಲ್ಲಿ ನೆಲೆನಿಂತಿರುವ ಶ್ರೀ ಕೊಡಮಣಿತ್ತಾಯ ದೈವ ಕಾರ್ಣಿಕದ ದೈವವಾಗಿದೆ. ಪಾಡ್ದನದ ಪ್ರಕಾರ ತುಳುನಾಡಿನ ಪ್ರಸಿದ್ಧ ಜೈನ ಮನೆತನದ ಕೊಡಮಣಿ ಬರ್ಕೆಯ ಅರಸು ಕುಂಞಣ್ಣ ಆಳ್ವರು ಗಂಗೆಯ ಉತ್ಸವಕ್ಕೆ ಹೋಗಿ, ಹಿಂತಿರುಗಲು ದೈವವೊಂದು ಪ್ರಕಟಗೊಂಡು ನಾನು ಕೊಡಮಣಿ ಬರ್ಕೆಗೆ ಬರುತ್ತೇನೆಂದು ಹೇಳುತ್ತದೆ. ಆಳ್ವರು ದೈವದ ಹೆಸರೇನೆಂದು ಕೇಳಲು “ಹೊಸ ದೈವ ಕುಮಾರ”ಎಂದು ಕುಂಞಳ್ವರ ಬೆನ್ನು ಹಿಡಿದು ಬರುತ್ತದೆ. ಅವರ ಹಿಂದೆ ಬಂದ ದೈವವು ಕೊಡಂಗೆ ಗವಸಾಲೆ ಬರ್ಕೆಯಲ್ಲಿ ಹಾಲು ನೀರು ಸೇವಿಸಿ ಕೊಡಮಣಿ ಬರ್ಕೆಗೆ ಬರುತ್ತದೆ.
ಮುಂದೆ ಕೊಡಮಣಿ ಬರ್ಕೆಯಲ್ಲಿ ಪ್ರತಿಷ್ಟಾಪನೆಗೊಂಡ ದೈವವು ತನ್ನನ್ನು ‘ಕೊಡಮಣಿತ್ತಾಯ’ ಎಂದು ಹೆಸರಿಸಿಕೊಂಡು ಕುಂಞಣ್ಣ ಆಳ್ವರಿಗೆ ಅಭಯ ನೀಡುತ್ತದೆ. ನಂತರ ’ಕೊಡಮಣಿತ್ತಾಯ’ ಅಭಿಧಾನದಿಂದ ತುಳುನಾಡಿನಲ್ಲಿ ಪ್ರಸಿದ್ಧಿ ಪಡೆಯುತ್ತದೆ.
ಶಿಬರೂರಿನ ತೀರ್ಥದ ಬಾವಿಯಲ್ಲಿ ಸಿಗುವ ತೀರ್ಥ ಮತ್ತು ದೈವದ ಗಂಧಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿದರೆ ವಿಷ ನಾಶವಾಗುತ್ತದೆ ಎಂಬ ನಂಬಿಕೆ. ಅಷ್ಟು ಮಾತ್ರವಲ್ಲದೆ ಬಾವಿಯ ತೀರ್ಥ ಮತ್ತು ದೈವದ ಗಂಧಪ್ರಸಾದ ಸ್ವೀಕರಿಸುವವರಿಗೆ ನಾಗದೋಷ ನಿವಾರಕ, ಚರ್ಮರೋಗ ನಿವಾರಣೆ, ಉಬ್ಬಸ ರೋಗ ದೂರಿಕರಿಸುವ ಶಕ್ತಿಯಲ್ಲದೆ, ಸಂತಾನ ಪ್ರತಿಬಂಧಕ ದೋಷವೂ ಪರಿಹಾರವಾಗುವುದು. ವಿಷಜಂತು ಕಚ್ಚಿದ ಅನೇಕ ಜನರನ್ನು ರಕ್ಷಿಸಿದ ಜ್ವಲಂತ ಉದಾಹರಣೆಗಳು ಪರಿಸರದಲ್ಲಿ ಕಾಣುತ್ತಿವೆ. ಈ ಬಾವಿಯ ನೀರನ್ನು ಏತದಿಂದಲೇ ಮೇಲಕ್ಕೆತ್ತುತ್ತಾರೆ. ನೇಮದ ಸಂದರ್ಭ ಕ್ಷೇತ್ರಕ್ಕೆ ಭೇಟಿ ನೀಡುವ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಈ ಪವಿತ್ರ ತೀರ್ಥ ಸ್ವೀಕರಿಸುತ್ತಾರೆ. ಮಂಗಳೂರಿನಿಂದ ಸುಮಾರು 25 ಕಿ.ಮೀ. ದೂರದಲ್ಲಿ ಶಿಬರೂರು ಕ್ಷೇತ್ರವಿದೆ. ಇದು ಪ್ರಸಿದ್ಧ ‘ಕಟೀಲು ಕ್ಷೇತ್ರ’ದಿಂದ 2 ಕಿ.ಮೀ. ದೂರದಲ್ಲಿದೆ. ಈ ದೈವಸ್ಥಾನದಲ್ಲಿ ಪ್ರತಿವರ್ಷ ಧನು ಸಂಕ್ರಮಣಕ್ಕೆ ಧ್ವಜಾರೋಹಣವಾಗಿ ಮಹೋತ್ಸವವು ಜರಗುತ್ತದೆ. ಮರುದಿನ ಮುಂಜಾನೆ ಶ್ರೀ ಉಳ್ಳಾಯ ದೈವದ ನೇಮದಲ್ಲಿ ತುಲಾಭಾರ ಸೇವೆ, ಕಂಚೀಲು ಸೇವೆ, ಉರುಳು ಸೇವೆಗಳು ನಡೆಯುವುದಲ್ಲದೇ ಮಹಾ ಅನ್ನಸಂತರ್ಪಣೆಯು ನಡೆಯುತ್ತಿದೆ.
ಅದೇ ರಾತ್ರಿ ಕೊಡಮಣಿತ್ತಾಯ ದೈವದ ನೇಮ, ಬಂಡೀ ಉತ್ಸವ, ಮರುದಿನದಿಂದ ಕ್ರಮವಾಗಿ ಕಾಂತೇರಿ ಧೂಮಾವತಿ, ಸರಳ ಧೂಮಾವತಿ, ಜಾರಂದಾಯ ದೈವ, ಕೈಯೂರು ಧೂಮಾವತಿ ಮತ್ತು ಪಿಲಿಚಾಮುಂಡಿ ದೈವದ ನೇಮೋತ್ಸವಗಳು ನಡೆದು ಧ್ವಜಾರೋಹಣ ನಡೆಯುತ್ತದೆ. ಧ್ವಜಾರೋಹಣದಿಂದ ಧ್ವಜಾವರೋಹರಣದವರೆಗೆ ಪ್ರತಿನಿತ್ಯ ಅನ್ನಸಂತರ್ಪಣೆ ಜರಗಲಿದೆ.
ಶ್ರೀಕ್ಷೇತ್ರ ಕಟೀಲಿಗೂ ಶಿಬರೂರಿ(ತಿಬಾರ್)ನ ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೂ ಸಂಬಂಧ ಇರುವುದನ್ನು ನೋಡಬಹುದು. ಪ್ರತಿ ವಾರ್ಷಿಕ ಜಾತ್ರೆಯ ಸಂದರ್ಭ ಶ್ರೀ ಕೊಡಮಣಿತ್ತಾಯ ದೈವವು ಕಟೀಲಿಗೆ ಭೇಟಿ ಮಾಡುವಂತಹ ಒಂದು ಸಂಪ್ರದಾಯವಿದೆ. ಮಂಗಳೂರಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಇಂತಹ ಕಾರಣಿಕದ ದೈವಸ್ಥಾನಕ್ಕೆ ಬೇಟಿ ನೀಡಲು ಮರೆಯದಿರಿ.
✍ಲಲಿತಶ್ರೀ ಪ್ರೀತಂ ರೈ