ಹೆಣ್ಣಿಗೆ ವಿಶೇಷವಾದ ಸ್ಥಾನಮಾನ ಇರುವ ತುಳುನಾಡಿನಲ್ಲಿ ಹೆಣ್ಣು ದೈವಗಳ ಆರಾಧನೆ ಕೂಡ ಅಂತದೇ ಮಹತ್ವವನ್ನು ಪಡೆದಿದೆ. ಅಂತಹ ದೈವಗಳಲ್ಲಿ “ಕೊರತಿ” ದೈವವು ಒಂದು. ಜಾತಿ ಪದ್ದತಿ ಉಚ್ಚಾçಯ ಸ್ಥಿತಿಯಲ್ಲಿದ್ದ ಕಾಲದಲ್ಲಿ, ಅಂತಹ ಅನಿಷ್ಟ ಪದ್ದತಿಯಿಂದ ತುಳಿತಕ್ಕೊಳಗಾದವರು ಕಾಲಾನಂತರ ದೈವತ್ವಕ್ಕೆ ಏರಿ ಮನುಷ್ಯನಿಂದ ಆರಾದಿಸಲ್ಪಟ್ಟ ದೈವಗಳ ಬಗ್ಗೆ ಕೇಳಿದ್ದೇವೆ ಅಂತಹ ದೈವಗಳಲ್ಲಿ ಕೊರತಿಯು ಸೇರಿದೆ ಎನ್ನಬಹುದು. ಕೆಲವರು ಈ ದೈವವನ್ನು ಪಾರ್ವತಿಯ ಅವತಾರ ಅಂತ ಪಾಡ್ಧನದಲ್ಲಿ ಹೇಳುವುದನ್ನು ಕಾಣಬಹುದು. ಕೊರತಿ ಎಂದರೆ ಮನೆ ಕಾಯುವ ದೈವ, ಮನೆಯ ಅಡುಗೆ ಕೋಣೆಯಲ್ಲಿಯೇ ಮರದ ಹಲಗೆ ಇಟ್ಟು ಆರಾದಿಸಲಾಗುತ್ತದೆ. ಇದಕ್ಕೆ ಅನ್ನಪೂರ್ಣೇಶ್ವರಿ ಅಂತ ಕರೆಯುವುದೂ ಉಂಟು. ಮನೆಯಲ್ಲಿ ಮಾಡಿದ ಅಡುಗೆಯನ್ನು ಪ್ರತಿದಿನ ತಾಯಿಯ ಮುಂದೆ ಇಟ್ಟು ನಂತರ ಮನೆ ಮಂದಿ ತಿನ್ನುವ ವಾಡಿಕೆಯನ್ನು ಕೂಡ ಕೆಲವು ಕಡೆ ನೋಡಬಹುದು. ಹಾಗೆ ಮಾಡದಿದ್ದಲ್ಲಿ ದೈವವು ಅಡುಗೆ ಮನೆ ಬಾಗಿಲಲ್ಲಿ ನಿಂತು ನನ್ನನ್ನು ಮರೆತಿದ್ದಿದ್ದಿರಾ? ಅಂತ ಕೇಳುತ್ತಿದ್ದಳು ಎಂದು ಹಿರಿಯರು ಹೇಳುತ್ತಿದ್ದರು ಮತ್ತು ನಂಬಿದ್ದರು. ಮನೆ ಹೆಣ್ಣು ಮಕ್ಕಳಿಗೆ ಬಹಳ ಹತ್ತಿರದ ದೈವ ಅಂತನೂ ಹೇಳಲಾಗುತ್ತದೆ. ಮೇಯಲು ಹೋದ ದನಕರುಗಳು ಕಾಣಿಸಲಿಲ್ಲ ಅಂದರೆ “ಕೊರತಿ ದನಕರುಗಳು ಮನೆಗೆ ಬಂದಿಲ್ಲ” ಅಂತ ಹೇಳಿಕೊಂಡರೆ ಸ್ವಲ್ಪ ಸಮಯದಲ್ಲಿ ದನಕರುಗಳು ಕೊಟ್ಟಿಗೆಗೆ ಬರುತ್ತಿದ್ದವು ಎನ್ನುವ ನಂಬಿಕೆಯೂ ಕೂಡ ಜೀವಂತವಾಗಿದೆ. ಮನೆ ಕಾಯುವ ದೈವ ಆಗಿರುವುದರಿಂದ ಇದಕ್ಕೆ ಅಮೆ ಸೂತಕ ಇರುವುದಿಲ್ಲ, ಮನೆಯ ಹೆಣ್ಣುಮಕ್ಕಳು ಅಡುಗೆ ಮಾಡಿ ಅಗೆಲು ಬಡಿಸುವ ಕ್ರಮವಿದೆ. ಹೀಗೆ ಅಗೆಲು ಬಡಿಸುವಾಗ ದಿನ ನೋಡುವ ಕ್ರಮವಿಲ್ಲ. ಇನ್ನು ಕೊರತಿ ನೇಮದಲ್ಲಿ ಕೈಯಲ್ಲಿ ಗೆಜ್ಜೆಕತ್ತಿ, ಪೊರಕೆ, ಮೊರ(ತಡಪೆ) ಹಿಡಿದಿರುವುದನ್ನು ಕೂಡ ನೋಡಬಹುದು. ಮನೆಯಲ್ಲಿ ಇರುವ ಈ ಕೊರತಿಗೆ ಅಗ್ನಿ ಕೊರತಿ ಅಂತಲೂ ಕರೆಯುತ್ತಾರೆ. ಕತೆಗಳ ಪ್ರಕಾರ ಕೆಳಜಾತಿಯ ಹೆಣ್ಣುಮಗಳು ದೊಡ್ಡವಳಾದ ನಂತರದ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗುತ್ತಾಳೆ. ದೇವಸ್ಥಾನಕ್ಕೆ ಬಂದ ಹೆಣ್ಣುಮಗಳನ್ನು ನೋಡಿದ ದೇವಸ್ಥಾನದ ಬ್ರಾಹ್ಮಣ ಬಾಗಿಲು ಹಾಕುತ್ತಾನೆ, ಇದರಿಂದ ಭಯಗೊಂಡ ಹೆಣ್ಣು ಮಗಳು ತಪ್ಪಿಸಿಕೊಂಡು ಓಡಿ ಅಲ್ಲೆ ಇದ್ದ ಅಗ್ನಿ ಕುಂಡಕ್ಕೆ ಹಾರುತ್ತಾಳೆ. ಅಗ್ನಿ ಕುಂಡಕ್ಕೆ ಹಾರಿದ ಹೆಣ್ಣು ಮಗಳು ಮುಂದೆ ಅಗ್ನಿ ಕೊರತಿಯಾಗಿ ಆರಾದಿಸ್ಪಟ್ಟಳು ಎನ್ನಲಾಗುತ್ತದೆ. ಇನ್ನೊಂದು ವಿಮರ್ಶೆಯ ಪ್ರಕಾರ ಅಡುಗೆ ಮನೆಯಲ್ಲಿ ಆರಾಧಿಸಲ್ಪಡುವ ಕಾರಣ ಈ ದೈವಕ್ಕೆ ಅಗ್ನಿ ಕೊರತಿ ಎನ್ನುವ ಹೆಸರು ಬಂತು ಎನ್ನಲಾಗುತ್ತದೆ. ಕೊರತಿಯಲ್ಲಿಯೇ “ಜಾಲ ಕೊರತಿ” ಇನ್ನು ಇನ್ನೊಂದು ಆರಾಧನೆಯೂ ಇದೆ. ಇದನ್ನು ಮನೆಯಿಂದ ಹೊರಗೆಅರಾಧಿಸುತ್ತಾರೆ.