ತುಳುನಾಡಿನಲ್ಲಿ ದೈವಾರಾಧನೆಗೆ ಧರ್ಮ, ಜಾತಿಗಳ ಹಂಗಿಲ್ಲ. ಅದಕ್ಕೆ ಉದಾರಣೆಯಾಗಿ ಎಲ್ಲಾ ಧರ್ಮದವರು ದೈವರಾಧನೆಯಲ್ಲಿ ಪಾಲ್ಗೊಳ್ಳುವುದನ್ನು ನಾವು ನೋಡಿದ್ದೇವೆ. ಅದರೊಂದಿಗೆ ಅನ್ಯಧರ್ಮೀಯರೂ ಕೂಡ ಅವರ ಸಾವಿನ ನಂತರ ದೈವತ್ವಕ್ಕೆ ಏರಿ ಆರಾಧಿಸ್ಪಡುತ್ತಿರುವುದನ್ನು ಕಾಣಬಹುದು. ಅಂತಹ ದೈವಗಳ ಸಾಲಿನಲ್ಲಿ ಬರುವುದೇ “ಆಲಿ ಭೂತ” ಆಲಿ ಭೂತ ಕುಂಬಳೆಯ ಪಾರೆ ಸ್ಥಾನದಲ್ಲಿ ಆರಾಧಿಸಲ್ಪಡುವ ದೈವ. ಕುಂಬಳೆ ಅರಿಕ್ಕಾಡಿನಲ್ಲಿ ಆಲಿ ಎಂಬ ಮುಸ್ಲಿಂ ಮಂತ್ರವಾದಿ ಇದ್ದು, ಅವನು ದಿಯು ದ್ವೀಪದಿಂದ ಬಂದವನು ಮತ್ತು ವ್ಯಾಪಾರಕ್ಕಾಗಿ ತುಳುನಾಡಿನಲ್ಲಿದ್ದನೆಂದು ಪುರಾಣಗಳು ಹೇಳುತ್ತವೆ. ಅವನಿಗೆ “ಮಂತ್ರವಾದ” ಅಥವಾ ತಾಂತ್ರಿಕ ಶಕ್ತಿಗಳ ಪರಿಚಯವಿತ್ತು. ಊರೂರು ತಿರುಗುವ ಇವನಿಗೆ ಅಲ್ಲಿನ ಕುಟುಂಬವೊಂದು ಮನೆಯನ್ನು ನೀಡಿತ್ತು. ಸಜ್ಜನನಂತೆ ತೋರುತ್ತಿದ್ದ ಆಲಿ ಬೇಗನೇ ಊರವರನ್ನು ಆಕರ್ಷಿಸಿದ. ಊರವರೂ ಅವನನ್ನು ನಂಬಿದರು. ಆಲಿಗೆ ಅಲ್ಲಿಯ ಹೆಣ್ಣೋಬ್ಬಳ ಮೇಲೆ ಕಣ್ಣು ಬಿತ್ತು. ಆಕೆಯನ್ನು ವಶೀಕರಣ ಮಾಡಿ ಕೆಡಿಸಿದ. ಇದು ಮನೆವರಿಗೂ, ಊರವರಿಗೂ ಗೊತ್ತಾದರೂ ಇವನನ್ನು ಮಟ್ಟ ಹಾಕಲು ಸಾದ್ಯವಾಗಲಿಲ್ಲ. ಅಂತಹ ಸಂದರ್ಭದಲ್ಲಿ ಅವರು ನಂಬುತಿದ್ದ ಮಂತ್ರಮೂರ್ತಿ ಲೆಕ್ಕೆ ಸಿರಿಯ ಮೊರೆ ಹೋಗುತ್ತಾರೆ. ಆದರೆ ದೈವಕ್ಕೆ ಅಷ್ಟು ಸುಲಭದಲ್ಲಿ ಆಲಿಯನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವನ ಸೊಂಟದಲ್ಲಿ ಒಂದು ರಕ್ಷಣಾ ತಾಯತ ಇತ್ತು. ಹಾಗಾಗಿ ದೈವ ಅವನ ಹತ್ತಿರಕ್ಕೂ ಸುಳಿಯಲು ಅಸಾಧ್ಯವಾಗಿತ್ತು. ಒಂದು ದಿನ ಕೆಲಸ ಬಿಟ್ಟು ಬರುತ್ತಿದ್ದ ಆಲಿಗೆ ಅರಿಕ್ಕಾಡಿನ ಪದವಿನ ಕೆರೆಯಲ್ಲಿ ಚೆಲುವೆಯೊಬ್ಬಳು ಸ್ನಾನ ಮಾಡುವುದು ಕಾಣಿಸುತ್ತದೆ. ಇವಳನ್ನು ನೋಡಿದ ಅಲಿ ಚಪಲದಿಂದ ಅವಳ ಹತ್ತಿರ ಹೋಗುತ್ತಾನೆ, ಅದನ್ನು ನೋಡಿದ ಆ ಹೆಣ್ಣು ನೀನೂ ಬೆತ್ತಲಾಗಿ ನೀರಿಗಿಳಿ ಎಂದು ಎಂದು ಕರೆಯುತ್ತಾಳೆ. ಅದನ್ನು ಕೇಳಿದ ಅಲಿ ಹಿಂದೂ ಮುಂದೂ ನೋಡದೆ ಬೆತ್ತಲಾಗುತ್ತಾನೆ.
ಆಗ ಹೆಣ್ಣು ನಿನ್ನ ಸೊಂಟದಲ್ಲಿ ಇರುವ ತಾಯತವನ್ನೂ ಕಳಚು ಎಂದಾಗ ಕಾಮೋನ್ಮತ್ತನಾಗಿದ್ದ ಆಲಿ ಅದನ್ನು ಕಳಚಿ ಕಲ್ಲಿನ ಮೇಲಿಟ್ಟು ಲಗುಬಗೆಯಿಂದ ನೀರಿಗಿಳಿಯುತ್ತಾನೆ. ಹೆಣ್ಣಿನ ರೂಪದಲ್ಲಿದ್ದ ಮಂತ್ರಮೂರ್ತಿ ಲೆಕ್ಕೆಸಿರಿ ಅವನನ್ನು ನೀರಿನಲ್ಲಿ ಮುಳುಗಿಸಿ ಅವನ ಪ್ರೇತದೊಂದಿಗೆ ಕೆರೆಯಿಂದ ಮೇಲೆ ಬರುತ್ತದೆ. ಅದೇ ವೇಳೆ ಅಂಬಲಡ್ಕದಲ್ಲಿ ಉಳ್ಳಾಕುಲುಗಳ ನೇಮ ನಡೆಯುತ್ತಿತ್ತು. ಪೂಮಾಣಿಯ ನೇಮಕ್ಕೆ ಮುನ್ನ ಪಾದೆಸ್ಥಾನದ ಐವೆರ್ ದೈಯೊಂಕುಳು ಅಂಬಲಡ್ಕದ ಒಡೆಯರ ಬೇಟಿ ಮಾಡಲು ಬರುತ್ತವೆ. ಬೇಟಿಯಾಗಿ ಹಿಂತಿರುಗಿ ಬರುವಾಗ ಪ್ರೇತ ಸಹಿತ ಲೆಕ್ಕಿಸಿರಿಯನ್ನು ನೋಡುತ್ತಾರೆ.
ಆಗ ಲೆಕ್ಕೆಸಿರಿ ನನಗೂ ನನ್ನ ಸೇವಕ ಆಲಿಗೂ ನಿಮ್ಮ ಜೊತೆಗೆ ನಿಲ್ಲಲು ಜಾಗಕೊಡಿ ಎಂದು ಐವೆರ್ ದೈಯೊಂಕುಳನ್ನು ಕೇಳುತ್ತಾರೆ ಮುಂದೆ ಆಲಿಯು ಚಾಮುಂಡಿಯ ಜೊತೆಯಲ್ಲಿ ಅರೆಕ್ಕಾಡುವಿನಲ್ಲಿ ಆರಾದಿಸಲ್ಪಡುತ್ತಾನೆ. ದೇವಸ್ಥಾನವನ್ನು ‘ಪಾರೆ ಅಲಿ ಭೂತಸ್ಥಾನ’ ಎಂದೂ ಕರೆಯಲಾಗುತ್ತದೆ. ಹಬ್ಬದ ಸಮಯದಲ್ಲಿ ಮುಸ್ಲಿಂ ಮತ್ತು ಹಿಂದೂ ಭಕ್ತರು ಅಲಿ ಭೂತಕ್ಕೆ ಕೋಳಿ ಮತ್ತು ಮಲ್ಲಿಗೆ ಹೂವುಗಳನ್ನು ನೀಡುತ್ತಾರೆ. ಅಲಿಭೂತವನ್ನು ಚಾಮುಂಡಿ ಭೂತದ 'ಕಾರ್ಯಕಾರನ್' ಎಂದರೆ ಕೆಲಸದವನು ಎಂದೂ ಕರೆಯುವುದುಂಟು.
✍ಲಲಿತಶ್ರೀ ಪ್ರೀತಂ ರೈ