ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು 1500 ವರ್ಷಕೂ ಮಿಗಿಲಾದ ಇತಿಹಾಸ ಹೊಂದಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ರಾ.ಹೆ. 22 ಕೀ.ಮಿ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ. ಈ ದೇವಸ್ಥಾನವನ್ನು ಸಾಮಾನ್ಯವಾಗಿ "ಇಡಗುಂಜಿ ದೇವಸ್ಥಾನ" ಹಾಗೇ ಹಿಂದೆ ಈ ಕ್ಷೇತ್ರಕ್ಕೆ ಇಡಕುಂಜಾವನ, ಕುಂಜವನ, ಗುಂಜಾವನ ಎಂದು ಕರೆಯುತ್ತಿದ್ದರು ಎನ್ನಲಾಗುತ್ತದೆ. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ "ದ್ವಿ ಭುಜ" ಭಂಗಿಯಲ್ಲಿ ಸುಮಾರು 88 ಸೆ.ಮೀ ಎತ್ತರ ಮತ್ತು 59 ಸೆ.ಮೀ ಅಗಲವನ್ನು ಹೊಂದಿದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ವೋದಕವಿದೆ. ಪುರಾತನ ಹಿನ್ನೆಲೆಯ ಪ್ರಕಾರ, ಒಮ್ಮೆ ಲೋಕಸಂಚಾರಿಯಾದ ನಾರದರು ಪರಶುರಾಮ ಕ್ಷೇತ್ರಗಳಲ್ಲಿ ಅಡ್ಡಾಡುವಾಗ ಅಲ್ಲಿನ ಕ್ಷೇತ್ರ, ತೀರ್ಥ, ತಪೋವನಗಳು ಅವರ ಕಣ್ಣಿಗೆ ಬಿದ್ದವು. ಆದರೆ ಈ ಕ್ಷೇತ್ರಗಳ ಮಹತ್ವವನ್ನು ವರ್ಣಿಸುವವರು ಬಹಳ ವಿರಳವಾಗಿದ್ದರು. ನಂತರ ನಾರದರು ಹಿಮಾಲಯದ ಕಡೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರಿಗೆ ವಾಲಖಿಲ್ಯ ಋಷಿಗಳ ಭೇಟಿಯಾಯಿತು. ಅನೇಕ ವರ್ಷಗಳಿಂದ ಉಗ್ರ ತಪಸ್ಸು ಮಾಡಿದ್ದರೂ, ಸಿದ್ಧಿ ಇಲ್ಲದೆ ಅತೃಪ್ತರಾಗಿ ಬಳಲುತ್ತಿದ್ದರು. ಇದಕ್ಕೆ ಕಾರಣವನ್ನು ನಾರದ ಮುನಿಗಳು ಕೇಳಿದಾಗ ’ನನ್ನ ತಪಸ್ಸು ಪ್ರಖ್ಯಾತಿಯನ್ನು ಪಡೆದಿದ್ದರೂ ಸಿದ್ಧಿ ಪಡೆಯಲಾಗಲಿಲ್ಲ. ತಮ್ಮ ಸಲಹೆಯನ್ನು ನೀಡಿ ಎಂದು ವಿನಂತಿಸಿಕೊಂಡರು.
ನಾರದರು ಧ್ಯಾನ ಮಗ್ನರಾದಾಗ ಅವರ ಮನಸ್ಸಿಗೆ ಮೂಡಿದ್ದು ಶ್ರೀ ರಾಮನ ಶರದಿಂದ ಉದ್ಭವಿಸಿದ ಶರಾವತಿ ನದಿಯ ತೀರದೊಳಗಿನ ಪ್ರದೇಶಗಳು. ಅಂತೆಯೇ ವಾಲಖಿಲ್ಯ ಮುನಿಯನ್ನು ಅಲ್ಲಿಗೆ ಕರೆದುಕೊಂಡು ಹೋದರು. ’ಶ್ರೀ ಮಹಾಗಣಪತಿಯನ್ನು ಇಲ್ಲಿಗೆ ಕರೆದುಕೊಂಡು ಬರುತ್ತೇನೆ’ ಎಂದು ಹೇಳಿ ವಾಲಖಿಲ್ಯರನ್ನು ಅಲ್ಲೇ ಬಿಟ್ಟು ನಾರದರು ಕೈಲಾಸದ ಕಡೆಗೆ ಹೊರಟರು. ಕೈಲಾಸಕ್ಕೆ ನಾರದರು ತಲುಪಿದರು. ಪರಶುರಾಮ ಕ್ಷೇತ್ರದಲ್ಲಿ ಶರಾವತಿ ನದಿಯ ಬಳಿ ನನ್ನ ಯೋಗದಿಂದಾಗಿ ಇಡಕುಂಜಾವನ ಎಂದು ಪ್ರಸಿದ್ಧಿಯಾಗಲಿದೆ. ಅಲ್ಲಿ ವಾಲಖಿಲ್ಯ ಮುನಿಯನ್ನು ಬಿಟ್ಟು ಬಂದಿದ್ದೇನೆ. ಅವರು ತಪೋಸಿದ್ಧಿಯಿಲ್ಲದೆ ಬಳಲುತ್ತಿದ್ದಾರೆ. ಆದ್ದರಿಂದ ವಿಘ್ನನಾಶಕನಾದ ಶ್ರೀ ಮಹಾಗಣಪತಿಯು ಅಲ್ಲಿ ಕ್ಷೇತ್ರಾಧೀಶನಾಗಿ ನಿಲ್ಲಬೇಕು ಎಂದು ಶಿವ-ಪಾರ್ವತಿಯರನ್ನು ನಾರದರು ಬೇಡಿಕೊಂಡರು. ಇದರ ಪರಿಣಾಮವಾಗಿ ಇಡಗುಂಜಿಯಲ್ಲಿ ಗಣಪತಿಯು ಕ್ಷೇತ್ರಾಧೀಶನಾದನು. ಪರಮೇಶ್ವರ ಪರಿವಾರದ ದರ್ಶನ ಭಾಗ್ಯದಿಂದ ವಾಲಖಿಲ್ಯರು ಮಹಾಗಣಪತಿಯ ಸ್ತೋತ್ರ ಮಾಡಿದರು. ಅಂತೆಯೇ ’ನಿಮ್ಮ ಕೀರ್ತಿಯು, ಈ ಸ್ಥಾನ ಮಹಿಮೆಯು ಲೋಕ ಪ್ರಸಿದ್ಧಿಯಾಗಲಿ’ ಎಂದು ಗಣಪನು ಹರಸಿದನಂತೆ. ಸುತ್ತಲೂ ಬೆಟ್ಟ- ಗುಡ್ಡಗಳಿಂದ ಕೂಡಿರುವ ಇಡಗುಂಜಿ ದೇವಸ್ಥಾನ ಇಳಿಜಾರಿನ ಪ್ರದೇಶದಲ್ಲಿದೆ. ಇಲ್ಲಿನ ಗಣಪತಿಯ ವಿಗ್ರಹವು ಪೂರ್ವಾಭಿಮುಖವಾಗಿ ಪ್ರತಿಷ್ಠಾಪನೆಗೊಂಡಿದೆ.
ಕಪ್ಪು ಕಲ್ಲಿನ ವಿಗ್ರಹ ಮೂರ್ತಿ ಇದಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ಪಾಠಶಾಲೆಯಿದೆ. ಇನ್ನೂ ಸ್ವಲ್ಪ ಮುಂದೆ ಪುಷ್ಕರಿಣಿ, ಎಡಭಾಗದಲ್ಲಿ ಯಾಗಶಾಲೆ ಇದೆಯೇ. ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಮಯೂರ ಪ್ರಸಾದ ಭೋಜನ ಶಾಲೆಯಿದೆ. ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಆಹಾರವನ್ನು ಕೊಡುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯ ಅತಿಥಿ ಗೃಹಗಳು ಕೂಡ ಇಲ್ಲಿ ಲಭ್ಯವಿವೆ. ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಬೇಕು. ದರ್ಶನದ ಸಮಯ ಬೆಳಿಗ್ಗೆ ೮ ರಿಂದ ರಾತ್ರಿ ೮ ಘಂಟೆಯವರೆಗೆ. ಮಧ್ಯಾಹ್ನ ೧೨-೩೦ ರಿಂದ ೩ ಘಂಟೆಯವರೆಗೆ ದೇವಸ್ಥಾನ ಮುಚ್ಚಿರುತ್ತದೆ. ಭಕ್ತಾದಿಗಳೆಲ್ಲರಿಗೂ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ ಇದೆ. ಮಧ್ಯಾಹ್ನ ಮಹಾಪೂಜೆಗೆ ಒಂದು ಘಂಟೆ ಮುಂಚೆ ದೇವಾಲಯದ ಸೇವಾ ಕಚೇರಿಯಲ್ಲಿ ಉಚಿತ ಊಟದ ಪಾಸುಗಳನ್ನು ವಿತರಿಸುತ್ತಾರೆ. ಅದನ್ನು ಪಡೆದು ಊಟಕ್ಕೆ ತೆರಳಬೇಕು. ದೂರದೂರಿನ ಪ್ರವಾಸಿಗರು ಉಳಿದುಕೊಳ್ಳಲು ದೇವಸ್ಥಾನದ ಅತಿಥಿ ಗೃಹವಿದೆ. ಇಲ್ಲಿನ ಅಕ್ಕಪಕ್ಕದಲ್ಲಿ ಮುರುಡೇಶ್ವರ, ಜೋಗ, ಗೋಕರ್ಣ ದಂತಹ ಸುಂದರ ಪ್ರವಾಸಿ ತಾಣಗಳಿವೆ. ಬಸ್ಸು, ರೈಲು ವ್ಯವಸ್ಥೆಯಿದೆ.