ಹಿಂದೂ ಧರ್ಮದಲ್ಲಿ ಸೀತಾ ನವಮಿಯು ಅತ್ಯಂತ ಪವಿತ್ರವಾದ ಹಬ್ಬಗಳಲ್ಲಿ ಒಂದಾಗಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುವ ಈ ದಿನವನ್ನು ಜಗನ್ಮಾತೆ ಸೀತಾ ದೇವಿಯ ಜನ್ಮಜಯಂತಿಯನ್ನಾಗಿ ಆಚರಿಸಲಾಗುತ್ತದೆ. ಶ್ರೀರಾಮ ನವಮಿಯಷ್ಟೇ ಪ್ರಾಮುಖ್ಯತೆಯನ್ನು ಹೊಂದಿರುವ ಈ ದಿನವು ಸ್ತ್ರೀ ಶಕ್ತಿ, ತಾಳ್ಮೆ ಮತ್ತು ನೈತಿಕ ಮೌಲ್ಯಗಳ ಪರಮೋನ್ನತ ಸಂಕೇತವಾಗಿದೆ.
ಪುರಾಣಗಳ ಪ್ರಕಾರ, ಸೀತಾ ದೇವಿಯು ಭೂಮಿಯಿಂದ ಜನಿಸಿದವಳು. ವಿದೇಹದ ರಾಜನಾದ ಜನಕ ಮಹಾರಾಜನು ಯಜ್ಞಕ್ಕಾಗಿ ಭೂಮಿಯನ್ನು ಉಳುತ್ತಿದ್ದಾಗ, ನೇಗಿಲಿನ ತುದಿಗೆ ಒಂದು ಪೆಟ್ಟಿಗೆಯು ತಗುಲಿತು. ಆ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅಲ್ಲಿ ನಗುಮುಖದ ಸುಂದರ ಹೆಣ್ಣು ಮಗು ಕಂಡಿತು. ನೇಗಿಲಿನ ತುದಿಗೆ ಸಂಸ್ಕೃತದಲ್ಲಿ 'ಸೀತ' ಎಂದು ಕರೆಯುವ ಕಾರಣದಿಂದ, ಆ ಮಗುವಿಗೆ 'ಸೀತೆ' ಎಂದು ನಾಮಕರಣ ಮಾಡಲಾಯಿತು. ಭೂದೇವಿಯ ಪುತ್ರಿಯಾದ ಕಾರಣ ಆಕೆಗೆ ಭೂಮಿಜಾ ಎಂಬ ಹೆಸರೂ ಇದೆ. ಅಯೋನಿಜೆಯಾಗಿ ಜನಿಸಿದ ಸೀತೆಯು ಮುಂದೆ ಅಯೋಧ್ಯೆಯ ರಾಜಕುಮಾರ ಶ್ರೀರಾಮನನ್ನು ವರಿಸುವ ಮೂಲಕ ಆದರ್ಶ ದಂಪತಿಗಳ ಪರಂಪರೆಗೆ ನಾಂದಿ ಹಾಡಿದಳು.
ಸೀತೆಯ ಜೀವನವು ಕೇವಲ ಒಂದು ರಾಜಕುಮಾರಿಯ ಅಥವಾ ಮಹಾರಾಣಿಯ ವೈಭವದ ಕಥೆಯಲ್ಲ; ಬದಲಾಗಿ ಅದು ಕಷ್ಟಗಳ ಮಡುವಿನಲ್ಲಿಯೂ ಧರ್ಮವನ್ನು ಬಿಡದ ಮಹಾನ್ ಚೇತನದ ಹೋರಾಟವಾಗಿದೆ. ಪತಿಯೊಂದಿಗೆ ವನವಾಸಕ್ಕೆ ತೆರಳುವುದು, ರಾವಣನ ಸೆರೆಯಲ್ಲಿದ್ದಾಗಲೂ ತನ್ನ ಚಾರಿತ್ರ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಅಗ್ನಿಪರೀಕ್ಷೆಯಂತಹ ಕಠಿಣ ಸವಾಲುಗಳನ್ನು ಎದುರಿಸುವುದು ಸೀತೆಯ ಅಪ್ರತಿಮ ಮನೋಬಲಕ್ಕೆ ಸಾಕ್ಷಿಯಾಗಿದೆ. ಸೀತೆ ಕೇವಲ ರಾಮನ ಪತ್ನಿಯಲ್ಲ, ಅವಳು ಸಮಸ್ತ ಸೃಷ್ಟಿಯ ತಾಯಿ. ಆಕೆಯ ಸಹನೆ ಮತ್ತು ಕ್ಷಮಾಪಣಾ ಗುಣವು ಇಂದಿನ ಆಧುನಿಕ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ.
ಸೀತಾ ನವಮಿಯ ದಿನದಂದು ಭಕ್ತರು ವಿಶೇಷವಾಗಿ ಸೀತಾ-ರಾಮರ ಆರಾಧನೆ ಮಾಡುತ್ತಾರೆ. ಈ ದಿನ ಮಹಿಳೆಯರು ಉಪವಾಸ ವ್ರತವನ್ನು ಆಚರಿಸುವುದರಿಂದ ಸಂಸಾರದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಸೀತೆಯ ಆರಾಧನೆಯು ಕೇವಲ ದೈಹಿಕ ಶಕ್ತಿಯನ್ನಲ್ಲದೆ, ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ದೇವಸ್ಥಾನಗಳಲ್ಲಿ ಸೀತಾ ಕಲ್ಯಾಣ ಮತ್ತು ಭಜನೆಗಳ ಮೂಲಕ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಒಟ್ಟಾರೆಯಾಗಿ, ಸೀತಾ ನವಮಿಯು ನಮಗೆ ಬದುಕಿನ ಪಾಠಗಳನ್ನು ಕಲಿಸುತ್ತದೆ. ಕಷ್ಟಗಳು ಬಂದಾಗ ಧೃತಿಗೆಡದೆ, ಸತ್ಯ ಮತ್ತು ಧರ್ಮದ ಹಾದಿಯಲ್ಲಿ ಹೇಗೆ ಸಾಗಬೇಕು ಎಂಬುದಕ್ಕೆ ಸೀತೆಯ ಜೀವನವೇ ಅತ್ಯುತ್ತಮ ಉದಾಹರಣೆ. ಸ್ತ್ರೀ ಅಬಲೆಯಲ್ಲ, ಅವಳು ಭೂಮಿಯಂತೆ ಸರ್ವವನ್ನೂ ಸಹಿಸಿಕೊಳ್ಳುವ ಮತ್ತು ಪೋಷಿಸುವ ಶಕ್ತಿ ಎಂಬುದನ್ನು ಈ ದಿನವು ಜಗತ್ತಿಗೆ ಸಾರುತ್ತದೆ. ಸೀತಾ ದೇವಿಯ ಕೃಪೆ ಎಲ್ಲರ ಮೇಲಿರಲಿ ಮತ್ತು ಸಮಾಜದಲ್ಲಿ ನೈತಿಕ ಮೌಲ್ಯಗಳು ಬೆಳಗಲಿ ಎಂಬುದೇ ಈ ಶುಭ ದಿನದ ಆಶಯವಾಗಿದೆ.
✍ ಲಲಿತಶ್ರೀ ಪ್ರೀತಂ ರೈ