image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತುಳು ನಾಡಿನಲ್ಲಿ ರಕ್ಷಕನಾಗಿ ಮೆರೆಯುತ್ತಿರುವ ಗುಳಿಗ...

ತುಳು ನಾಡಿನಲ್ಲಿ ರಕ್ಷಕನಾಗಿ ಮೆರೆಯುತ್ತಿರುವ ಗುಳಿಗ...

ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಒಂದು ಜಾನಪದ ಧಾರ್ಮಿಕ ಆಚರಣೆಯೇ ದೈವಾರಾಧನೆ ಅಥವಾ ಭೂತಾರಾಧನೆ. ಈ ದೈವಾರಾಧನೆಗೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಕೇರಳದ ಕೆಲವು ಭಾಗಗಳಲ್ಲಿಯೂ ದೈವಾರಾಧನೆಯನ್ನು ನೋಡಬಹುದು. ಕೇರಳದ ಆರಾಧನಾ ಪದ್ದತಿ ಹಾಗೂ ತುಳುನಾಡಿನ ಆರಾಧಾನ ಪದ್ದತಿಯಲ್ಲಿ ಸ್ವಲ್ಪ ಮಟ್ಟಿನ ಸಾಮ್ಯತೆಯನ್ನು ಕೂಡ ಕಾಣಬಹುದು. ತುಳುನಾಡಿನ ಸಂಶೋಧಕರ ಪ್ರಕಾರ ಸಾವಿರಕ್ಕೂ ಹೆಚ್ಚಿನ ದೈವಗಳಿವೆ ಎನ್ನಲಾಗುತ್ತದೆ. ಅದರಲ್ಲಿ ಕೆಲವು ಪ್ರಾಣಿರೂಪದ ದೈವಗಳಾದರೆ ಇನ್ನು ಕೆಲವು ಮನುಷ್ಯರಾಗಿ ಹುಟ್ಟಿ ಮರಣಾನಂತರ ದೈವತ್ವಕ್ಕೆ ಏರಿದವುಗಳು, ಇನ್ನೂ ಕೆಲವು ದೇವರ ಅಂಶಗಳೆನ್ನುತ್ತಾರೆ. ಅಂತಹ ದೈವಗಳ ಸಾಲಿಗೆ ಬರುವುದೇ ಗುಳಿಗ ದೈವ. ಗುಳಿಗನನ್ನು ಕ್ಷೇತ್ರ ರಕ್ಷಣ ದೈವ ಎನ್ನುವುದುಂಟು. ಕೆಲವು ಪೌರಾಣಿಕ ಕಥೆಗಳ ಪ್ರಕಾರ ಪಾರ್ವತಿ ದೇವಿ ಸಪ್ತಕನ್ನಿಕೆಯರ ರೂಪತಾಳಿ ಭೂಲೋಕ ಸಂಚಾರಕ್ಕೆ ಹೊರಟಾಗ  ಕರ್ಮಭೂಮಿಗೆ ಬರಲು ಸುರಗಂಗೆಯ ಮಾರ್ಗವಾಗಿ ಪಯಣವನ್ನು ಪ್ರಾರಂಭಿಸುತ್ತಾಳೆ. ಆಗ ಶಿವಗಣದಲ್ಲಿದ್ದ ಗುಳಿಗನನ್ನು ನಾವಿಕನನ್ನಾಗಿ ನಿಯಮಿಸಿ ಶಿವಗಂಗೆಯಿಂದ ಹೊರಟು ಸಪ್ತಸಾಗರವನ್ನು ದಾಟಿ ಪವಿತ್ರವಾದ ತುಳುನಾಡಿಗೆ ಬರುವಾಗ ಇಲ್ಲಿಯ ಪವಿತ್ರತೆಯನ್ನು ಕಂಡು ವಿವಿಧ ಸ್ಥಳಗಳಲ್ಲಿ ಲಿಂಗರೂಪಿಯಾಗಿ ನೆಲೆ ನಿಲ್ಲುತ್ತಾಳೆ. ಗುಳಿಗನಿಗೆ ತಾನಿರುವ ಕಡೆಯಲ್ಲಿ ಕ್ಷೇತ್ರ ರಕ್ಷಕನಾಗಿ ನೀನು ನೆಲೆ ನಿಲ್ಲು ಎಂದು ಅಪ್ಪಣೆ ಮಾಡುತ್ತಾಳೆ. ಈ ಹಿನ್ನಲೆಯಲ್ಲಿ ದೇವಿಯ ಸನ್ನಿಧಿಯ ಕ್ಷೇತ್ರಪಾಲನನ್ನು ಕೂಡ "ಗುಳಿಗ" ಎಂದು ನಂಬುತ್ತಾರೆ. ಗುಳಿಗ ದೈವವನ್ನು ಹಲವು ಹೆಸರುಗಳಿಂದ ಕರೆಯುವುದನ್ನು ನಾವು ನೋಡಬಹುದು. ಗುಳಿಗನನ್ನು ಜಾಗದ ಗುಳಿಗ, ಸಂಕೊಲಿಗೆ ಗುಳಿಗ, ಜೋಡು ಗುಳಿಗ, ಮಂತ್ರ ಗುಳಿಗ, ಚಾಮುಂಡಿ ಗುಳಿಗ, ರಾಹುಗುಳಿಗ, ಮಾರಣ ಗುಳಿಗ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ ಮತ್ತು ನಂಬಿಕೊಂಡು ಬಂದಿದ್ದಾರೆ. ಇದು ಭಾರೀ ಕೋಪದ ದೈವವೆಂದೇ ಹೆಸರುವಾಸಿ. ಗುಳಿಗನ ಆಹಾರ ಪದ್ದತಿ ಅನ್ಯ ದೈವಗಳಿಗಿಂತ ವಿಭಿನ್ನವಾಗಿದೆ. ಇವನ ಕೃಪೆಯನ್ನು ಪಡೆಯಲು ಭಕ್ತರು ಬಂಟ ಕೋಳಿಯನ್ನು ಹರಕೆಯಾಗಿ ಕೊಡುತ್ತಾರೆ. ಕೆಲವು ಕಡೆಗಳಲ್ಲಿ ಕೋಲದಲ್ಲಿ ಹರಕೆಯ ಕೋಳಿಗಳನ್ನು ಹಸಿಯಾಗಿಯೇ ಕೊಂದು ರಕ್ತ ಹೀರಿ ಮಾಂಸ ತಿನ್ನುವ ದೈವ ಇದಾಗಿದೆ. ಕೋಳಿ ಕೊಡದಿದ್ದಲ್ಲಿ ಗುಳಿಗ ಭೂತ ಓಡಲು ಪ್ರಾರಂಬಿಸುತ್ತಾರೆ. ಆಗ ಜನರು ಹಿಡಿದು ನಿಲ್ಲಿಸಿ ಕೋಳಿ ಕೊಟ್ಟು ಸಮಾಧಾನಪಡಿಸುವುದನ್ನು ನಾವು ಭೂತದಕೋಲದಲ್ಲಿ ನೋಡಬಹುದಾಗಿದೆ. ಈ ಹರಕೆಯ ಫಲವಾಗಿ ಮನೆಯ ಪಶು ಪಕ್ಷಿಗಳನ್ನು ಮತ್ತು ಕುಟುಂಬದವರನ್ನು ಹೊರಗಿನ ಕೆಟ್ಟ ಶಕ್ತಿಗಳು ಬಾಧಿಸದಂತೆ ರಕ್ಷಣೆ ಕೊಡುತ್ತಾನೆಂಬುದು ನಂಬಿಕೊಂಡು ಬಂದಿರುವವರ ಧೃಡ ವಿಶ್ವಾಸ. ರೋಗ ರುಜಿನದಿಂದ ಊರನ್ನು ಪಾರುಮಾಡುವ ದೈವವೆಂದು ನಂಬಿಕೊಂಡು ಬಂದಿರುವ ದೈವ ಗುಳಿಗ. ತನ್ನ ಕಾರ್ಣಿಕದ ಮೂಲಕ ಸ್ಥಳದ ಹೆಸರನ್ನು ತನ್ನ ಹೆಸರೊಂದಿಗೆ ವಿಶೇಷವಾಗಿ ಪಡೆದ, ಒಡೆಯನಿಗೆ ದೂತನಾಗಿ, ನಂಬಿದ ಭಕ್ತರಿಗೆ ದಾತನಾಗಿ ಇಂದಿಗೂ ದುಷ್ಟ ಜನರ ಎದೆ ನಡುಗಿಸುವ ಭಕ್ತರ ಎದೆಯಾಂತರಾಳದ ಆಸೆ ಆಕಾಂಕ್ಷೆಗಳನ್ನು ಪೂರೈಸುವ ಶಕ್ತಿಯಾಗಿ ಮೆರೆಯುತ್ತಿರುವ ದೈವ "ಗುಳಿಗ" ಎನ್ನುವ ನಂಬಿಕೆ ತುಳುವರಲ್ಲಿದೆ.

✍ ಲಲಿತಶ್ರೀ ಪ್ರೀತಂ ರೈ

 

Category
ಕರಾವಳಿ ತರಂಗಿಣಿ