ತುಳುನಾಡಿನ ದೈವಗಳಲ್ಲಿ ಮಂತ್ರದೇವತೆ ಸಾದಾರಣವಾಗಿ ಎಲ್ಲ ಮನೆಗಳಲ್ಲಿ ಆರಾದಿಸಲ್ಪಡುವ ದೈವ. ಮಂತ್ರದೇವತೆ, ಮಂತ್ರ ಮೂರ್ತಿ ಎಂದೆಲ್ಲಾ ಕರೆಸಿಕೊಳ್ಳುವ ಈ ಶಕ್ತಿಯನ್ನು ಕೆಲವರು ಕಲ್ಲುರ್ಟಿಯ ಇನ್ನೊಂದು ಅವತಾರ ಎಂದು ಹೇಳುವುದುಂಟು. ಆದರೆ ಮಂತ್ರ ದೇವತೆಗೆ ಸಂಬಂಧಿಸಿದ ಮೂಲ ಕಥೆ ಪ್ರಕಾರ ಕೆಲವು ವರ್ಷಗಳ ಹಿಂದೆ ಕೇರಳ ರಾಜ್ಯದ ಕುಂಟಾಲ ತಂತ್ರಿ ಎಂಬ ಬ್ರಾಹ್ಮಣರೊಬ್ಬರು ಉಪ್ಪಿನಂಗಡಿ ಬಳಿಯ ತನ್ನ ಸಂಬಂದಿಕರೊಬ್ಬರ ಮನೆಗೆ ಬಂದಾಗ ಅಲ್ಲಿ ‘ವರ್ತೆ’ ಎಂಬ ಒಂದು ದೈವೀ ಶಕ್ತಿಗೆ ಪೂಜೆ ನಡೆಯುತ್ತಿರುತ್ತದೆ. ಬಳಿಕ ಆ ದೈವದ ಕಾರ್ಣಿಕದ ಕಥೆಯನ್ನು ಕೇಳಿಸಿಕೊಂಡ ತಂತ್ರಿಗಳು ತನ್ನ ಮನೆಯಲ್ಲಿಯೂ ಇಂಥದ್ದೇ ಒಂದು ದೈವ ಇರುತ್ತಿದ್ದರೆ ನನ್ನ ಭೂಮಿಯನ್ನು ಕಳ್ಳಕಾಕರಿಂದ ರಕ್ಷಿಸಿ ನಮ್ಮನ್ನು ಕಾಪಾಡುವ ಶಕ್ತಿಯನ್ನು ನಾನೂ ಪೂಜಿಸಬಹುದಿತ್ತು ಎಂದುಕೊಳ್ಳುತ್ತಾರೆ. ಪೂಜೆಯ ನಂತರ ತನ್ನ ಊರಿಗೆ ಹೊರಟು ಹೋಗುತ್ತಾರೆ. ತಂತ್ರಿಗಳು ಅಂತರಂಗದಲ್ಲಿ ಬಯಸಿದಂತೆ ಪಾರ್ವತಿ ದೇವಿಯ ಅನುಗ್ರಹದಿಂದ ದೈವಶಕ್ತಿಯು “ನಿಮ್ಮ ಮಂತ್ರ ಕಾಯಕದೊಂದಿಗೆ ನನ್ನನ್ನು ನೆನೆದು ಮುನ್ನಡೆಯಿರಿ. ತೂಗುಯ್ಯಾಲೆ ಕಟ್ಟಿಸಿ ನನ್ನನ್ನು ಅದರಲ್ಲಿ ಪ್ರತಿಷ್ಠಾಪಿಸಿ ನನಗೆ ಹಾಲು-ಹಣ್ಣು ನೀಡಿ ಭಯ ಭಕ್ತಿಯಿಂದ ಆರಾಧಿಸಿಕೊಂಡು ಬಂದರೆ ನಿಮ್ಮನ್ನು ಸಕಲ ಸಂಪತ್ತು ನೀಡಿ ರಕ್ಷಿಸಿಕೊಂಡು ಬರುತ್ತೇನೆ, ನಂಬಿಕೊಳ್ಳಿ”ಎಂಬ ಅಭಯ ನೀಡಿತು. ಮುಂದಿನ ದಿನಗಳಲ್ಲಿ ತನ್ನ ಮಂತ್ರದ ವೈದಿಕ ಕ್ರಿಯೆಗಳಲ್ಲಿ ಈ ದೈವೀಶಕ್ತಿಯನ್ನೇ ಮುಂದಿಟ್ಟುಕೊಂಡು ಈ ಶಕ್ತಿಗೆ ಮಂತ್ರದೇವತೆ ಎಂಬ ಹೆಸರಿಟ್ಟು ಭಯ-ಭಕ್ತಿಯಿಂದ ಪೂಜಿಸಿಕೊಂಡು ಬರುತ್ತಾರೆ. ಕೇರಳ ರಾಜ್ಯದಲ್ಲಿ ಮಂತ್ರ ದೇವತೆ ಎಂಬ ಶಕ್ತಿಯ ಕಾರಣಿಕ ಊರಿಂದ ಊರಿಗೆ ಹರಡುತ್ತಿರಬೇಕಾದರೆ, ಇತ್ತ ಮೂಡಬಿದಿರೆ ಇರುವೈಲು ಎಂಬ ಊರಿನ ‘ತೂತ್ನಾಡ್ ಬರ್ಕೆ’ಯ ಕಾಂತು ಬೈದ್ಯರ ಕಿವಿಗೂ ಈ ದೈವದ ಕಾರಣಿಕದ ಕಥೆಗಳು ಕೇಳಲಾರಂಬಿಸುತ್ತದೆ. ತೂತ್ನಾಡ್ ಬರ್ಕೆಯ ಕಾಂತು ಬೈದ್ಯರದ್ದು ದೊಡ್ಡ ಗುತ್ತಿನ ಮನೆ. ವಿಶಾಲವಾದ ಗದ್ದೆ, ತೋಟವಿರುವ ಭೂಮಿ. ಈ ಭೂಮಿಯಲ್ಲಿ ಯಾವುದೇ ಪಸಲು ಬಂದರೆ ಅದು ಕಳ್ಳ-ಕಾಕರ ಪಾಲಾಗುತ್ತಿತ್ತು. ಕಳ್ಳರ ಬಾಧೆ ವಿಪರೀತವಾಗಿ ಸಹಿಸಲಾಸಾಧ್ಯವಾದಾಗ ನೊಂದು ಬೆಂದು ಕಾಂತು ಬೈದ್ಯರು ಇದನ್ನು ತಡೆಯಲು ನನ್ನ ಮನೆಯಲ್ಲಿ ಒಂದು ದೈವವಾದರೂ ಇರುತ್ತಿದ್ದರೆ ಚೆನ್ನಾಗಿತ್ತು ಎಂದು ಯೋಚಿಸಿ ಕೇರಳ ರಾಜ್ಯದ ಕುಂಟಾಲ ತಂತ್ರಿಗಳನ್ನು ಬೇಟಿ ಮಾಡಿ ಹರಿಕೆ ಮಾಡಿಕೊಳ್ಳುತ್ತಾರೆ ಅದರಂತೆ ಕಾಂತು ಬೈದ್ಯರ ಜೊತೆಯಲ್ಲಿಯೇ ‘ಮಂತ್ರದೇವತೆ’ ಎಂಬ ಶಕ್ತಿ ಈ ತುಳುನಾಡಿಗೆ ಬರುತ್ತದೆ. ಇಂದು ಈ ತುಳುನಾಡಿನ ಎಲ್ಲಾ ಕಡೆ ಶಕ್ತಿಯನ್ನು ಮನೆಯ ಒಳಗೇ ನಂಬಿಕೊಂಡ ಆರಾಧಿಸುವುದನ್ನು ನಾವು ಕಾಣುತ್ತೇವೆ. ಮಂತ್ರದೇವತೆ ಎಂದರೆ ಅದೊಂದು ಮಾಯಾ ಶಕ್ತಿ. ಆದರೆ ಇದಕ್ಕೆ ಕೋಲ ನಡೆಯಬೇಕಾದರೆ ನಲಿಕೆ ಜನಾಂಗದವರು ಕೋಲ(ನರ್ತನ) ಕಟ್ಟುತ್ತಾರೆ. ಕೆಲವರು ಮಂತ್ರದೇವತೆ ಎನ್ನುವ ಶಕ್ತಿ ಅಥವಾ ದೈವ ಇಲ್ಲ ಎನ್ನುವ ವಾದ ಮಾಡುವವರು ಕೂಡ ತುಳುನಾಡಿನಲ್ಲಿ ಕಾಣಸಿಗುತ್ತಾರೆ. ಇನ್ನೂ ಕೆಲವರು ಮಂತ್ರದಿಂದ ಮೂಡಿ ಬಂದವಳು ಮಂತ್ರದೇವತೆ ಎನ್ನುವ ವಾದವನ್ನು ಮಾಡುತ್ತಾರೆ. ಇಂದಿಗೂ ಕುಂಟಾಲ ತಂತ್ರಗಳ ಮನೆಯಲ್ಲಿ ಅರಾಧಿಸಲ್ಪಡುತ್ತಿದ್ದಾಳೆ ಈ ಮಂತ್ರದೇವತೆ. ಅಷ್ಟೇ ಅಲ್ಲದೇ ಮಂತ್ರದೇವತೆ ತುಳುವರ ಆರಾಧ್ಯ ಶಕ್ತಿಯಾಗಿ ಮೆರೆಯುತ್ತಿರುವುದಂತೂ ಸತ್ಯ.
✍ಲಲಿತಶ್ರೀ ಪ್ರೀತಂ ರೈ