ದೈವಾರಧನೆಗೆ ಕರಾವಳಿಯಲ್ಲಿ ಮಹತ್ವದ ಸ್ಥಾನ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ದಕ್ಷಿಣ ಕನ್ನಡ, ಉಡುಪಿ, ಕಾಸರಗೊಡುಗಳ ಆರಾಧನಾ ಶೈಲಿಗಳಲ್ಲಿ ವಿಭಿನ್ನತೆಯನ್ನು ಕಾಣಬಹುದು. ಹಾಗೇ ಆರಾಧಿಸಲ್ಪಡು ದೈವಗಳಲ್ಲಿ ಕೊರಗ ತನಿಯ ದೈವವು ಒಂದು. ಜಾತಿ ವ್ಯವಸ್ಥೆಯು ಉತ್ತುಂಗದಲ್ಲಿ ಇದ್ದ ಕಾಲದಲ್ಲಿ ಈ ಸಮಾಜದ ನಿಷ್ಕೃಷ್ಟತೆಗೆ ಒಳಗಾದವರು ದೈವತ್ವ ಸ್ಥಾನಕ್ಕೆ ಏರಿರುವವರಲ್ಲಿ ಕೊರಗ ತನಿಯ ಕೂಡ ಒಂದು. ಕೊರಗಜ್ಜ ಅಂತಲೂ ಕೊರಗ ತನಿಯನನ್ನು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಹಳ ವೇಗವಾಗಿ ಯುವ ಪೀಳಿಗೆಗೆ ಸೆಲೆಬ್ರಿಟಿಗಳಿಗೆ ಬಹು ಹತ್ತಿರವಾಗಿರುವ ದೈವಗಳಲ್ಲಿ ಕೊರಗಜ್ಜನು ಒಬ್ಬ.
ಪಾಡ್ದನಗಳ ಪ್ರಕಾರ ಏಳು ಕೊಪ್ಪದ ಓಡಿ ಮತ್ತು ಕೊರಪ್ಪೊಲು ದಂಪತಿಗಳಿಗೆ ಹುಟ್ಟಿದ ಮಗುವೇ ಕೊರಗ ತನಿಯ. ಮುಂದೆ ಏಳು ಕೊಪ್ಪದ ಕೊರಗರ ಹಾಡಿಗೆ ಮಹಾಮಾರಿಯೊಂದು ಬಂದು ತನಿಯನ ತಾಯಿ ಕೊರಪೊಲು ಹಾಗೂ ಕಾಲಾನಂತರ ತಂದೆ ಓಡಿಯೂ ದೈವಾದೀನರಾಗುತ್ತಾರೆ. ಮುಂದೆ ಹಾಡಿಗೆ ಹಾಡಿಯೇ ಮಹಾಮಾರಿಗೆ ತುತ್ತಾಗುತ್ತದೆ. ಅಂತಹ ಸಂದರ್ಭದಲ್ಲಿ ಏಳೆಂಟು ವಯಸ್ಸಿನ ತನಿಯ ಕೇರಿ ಬಿಟ್ಟು ಕಾಡದಾರಿಯಲ್ಲಿ ಬರುತ್ತಾನೆ. ಇವನ ಮೈಯಲ್ಲಿ ಬಟ್ಟೆಯು ಇರುವುದಿಲ್ಲ. ಕಾಡು ಸುತ್ತಿ ಬರಬೇಕಾದರೆ ಅದೇ ದಾರಿಯಲ್ಲಿ ಕಲಿ ಅಂದರೆ ಕಳ್ಳು (ಶೇಂದಿ) ತರುತ್ತಿದ್ದ ಬೈದೆದಿ ಮತ್ತು ಮಗ ಚೆನ್ನಯನ ಜೊತೆ ಕಾಣುತ್ತಾರೆ. ದೂರದಲ್ಲಿ ಗಿಡ ಅಡ್ಡದಿಂದ ಅಳುತ್ತಾ ಇಣುಕುವ ಹುಡುಗನ್ನು ಬೈದೆದಿ ನೋಡಿ ಕರೆದಾಗ ತನಿಯ ನನಗೊಂದು ಬಟ್ಟೆ ಕೊಟ್ಟರೆ ಬರುತ್ತೇನೆ ಎನ್ನುತ್ತಾನೆ.
ಬೈದೆದಿ ತಲೆಯಲ್ಲಿದ್ದ ಬಟ್ಟೆಯನ್ನು ಹುಡುಗನ ಕಡೆ ಬಿಸಾಕುತ್ತಾಳೆ. ಆ ಬಟ್ಟೆಯಿಂದ ಮಾನ ಮುಚ್ಚಿಕೊಂಡ ಹುಡುಗ ಅವರ ಮುಂದೆ ಬರುತ್ತಾನೆ. ನೀನು ಯಾರು? ಯಾವ ಊರು ಎಂದು ವಿಚಾರಿಸಿದಾಗ ತಾನು ಏಳು ಕೊಪ್ಪದ ಕೊರಗರ ಪಿಳ್ಳೆ. ನನಗೆ ಯಾರು ಇಲ್ಲ, ನಮ್ಮ ಹಾಡಿಗೆ ಮಹಾಮಾರಿ ಬಂದು ಎಲ್ಲರನ್ನು ಕಳೆದುಕೊಂಡಿರುವ ಕಥೆಯನ್ನು ಅಳುತ್ತಾ ಹೇಳುತ್ತಾನೆ, ಆಗ ಬೈದೆದಿಗೆ ಮರುಕ ಉಂಟಾಗಿ ತನ್ನ ಜೊತೆ ಕರೆದುಕೊಂಡು ಹೋಗಿ ತಾನು ಸಾಕಿಕೊಳ್ಳುತ್ತಾರೆ. ಕೊಟ್ಟಿಗೆಯ ಹಸುಗಳನ್ನು ಸಾಕುವ ಕೆಲಸ ಜೊತೆ ಮನೆಯ ಹೊರಗಿನ ಕೆಲಸವೆಲ್ಲವನ್ನು ಮಾಡುತ್ತಾ ತನಿಯ ಗಟ್ಟಿ ಮುಟ್ಟಾಗಿ ಬೆಳೆಯುತ್ತಾನೆ. ನಾಲ್ಕಾಳು ಮಾಡುವ ಕೆಲಸವನ್ನು ಒಬ್ಬನೇ ಮಾಡುತ್ತಾನೆ ಎನ್ನುವುದು ಕೂಡ ಪಾಡ್ದಾನದಲ್ಲಿ ಉಲ್ಲೇಖವಿದೆ.
ಒಂದು ದಿನ ಬೈದೆದಿಯು ತನಿಯನಿಗೆ ಕಳ್ಳು ತುಂಬಿಸಲು ಹೇಳುತ್ತಾಳೆ ಆದರೆ ತನಿಯ ತುಂಬಿಸಿದ ಕಳ್ಳು ಎಷ್ಟೇ ಖರ್ಚು ಮಾಡಿದರೂ ಖಾಲಿಯಾಗುವುದಿಲ್ಲ. ಇದರಿಂದ ಚಿಂತಿತಳಾದ ಬೈದೆದಿ ಕದ್ರಿ ಮಂಜುನಾಥನಿಗೆ ಹರಕೆ ಹೊತ್ತುಕೊಳ್ಳುತ್ತಾಳೆ, ಹರಕೆ ಹೊತ್ತುಕೊಂಡ ನಂತರ ಕಳ್ಳು ಖಾಲಿ ಆಗುತ್ತದೆ. ಈ ಹರಕೆಯನ್ನು ತೀರಿಸುವ ಸಲುವಾಗಿ ಹರಕೆಗೆ ಹೇಳಿದ ವಸ್ತುವನ್ನು ಸಿದ್ದಪಡಿಸುತ್ತಾಳೆ ಆದರೆ ಅದನ್ನು ಹೊರಲು ಏಳು ಜನರ ಅಗತ್ಯವಿರತ್ತದೆ. ಅದೆಲ್ಲವನ್ನೂ ತನಿಯ ಒಬ್ಬನೇ ಒತ್ತುಕೊಂಡು ಹೋಗುತ್ತಾನೆ.
ಹಾಗೆ ಹೊತ್ತುಕೊಂಡು ಹೋದ ಹರಕೆಯನ್ನು ದೇವಸ್ಥಾನದ ಹೊರ ಅಂಗಣದಲ್ಲಿಸಿ ಮೇಲೆ ನೋಡಿದಾಗ ಅಂಗಣಕ್ಕೆ ಬಾಗಿದ ಮಹಾಫಲ ಮರದಲ್ಲಿ ಹಣ್ಣು ಕಾಣಿಸುತ್ತದೆ ಆಗ ಅವನಿಗೆ ತನ್ನ ಸಾಕು ತಾಯಿಗೆ ಇದು ಇಷ್ಟ, ತೆಗೆದುಕೊಂಡು ಹೋದರೆ ಉಪ್ಪಿನಕಾಯಿ ಮಾಡಿ ತಿನ್ನುತ್ತಾರೆ ಎಂದು ಅನಿಸುತ್ತದೆ. ಹಾಗೆ ದೇವಸ್ಥಾನದ ಹಿಂದಿನಿAದ ಮರಕ್ಕೆ ಹತ್ತಿ ಕೊಯ್ಯುವಾಗ ಅಲ್ಲಿಂದಲೇ ಮಾಯವಾದ ಎನ್ನುವುದನ್ನು ಕೂಡ ಪಾಡ್ದನದಲ್ಲಿ ಗಮಸಿಸಬಹುದು. ಬ್ರಾಹ್ಮಣ್ಯ ಉತ್ತುಂಗದಲ್ಲಿದ್ದ ಕಾಲದಲ್ಲಿ ನಡೆದ ಈ ಮಾಯ ಎನ್ನುವ ಪದದ ಬಗ್ಗೆ ಹಲವಾರು ಜಿಜ್ಜಾಸೆಗಳಿದ್ದರೂ, ಕೊರಗತನಿಯ ಮುಂದೆ ಕೊರಗಜ್ಜನಾಗಿ ಕರಾವಳಿಯಾದ್ಯಂತ ಆರಾದಿಸಲ್ಪಡುತ್ತಿದ್ದಾನೆ.
✍ ಲಲಿತಶ್ರೀ ಪ್ರೀತಂ ರೈ