ವಿಘ್ನಹರ್ತನ ಆರಾಧನೆ ಮತ್ತು ಚಂದ್ರನ ಶಾಪ ವಿಮೋಚನೆಯ ಪುಣ್ಯದಿನ
ಸಂಕಷ್ಟಗಳನ್ನು ಹರಿಸುವ, ವಿಘ್ನಗಳನ್ನು ನಿವಾರಿಸುವ ಗಣಪತಿಯ ಆರಾಧನೆಯಲ್ಲಿ ಸಂಕಷ್ಟ ಚತುರ್ಥಿಗೆ ವಿಶೇಷ ಸ್ಥಾನವಿದೆ. ಚೈತ್ರ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಚತುರ್ಥಿಯನ್ನು 'ಬಾಲಚಂದ್ರ ಸಂಕಷ್ಟ ಚತುರ್ಥಿ' ಎಂದು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಈ ದಿನದ ವ್ರತವು ಭಕ್ತರ ಬದುಕಿನಲ್ಲಿ ಹೊಸ ಬೆಳಕನ್ನು ನೀಡುತ್ತದೆ ಎಂಬ ನಂಬಿಕೆಯಿದೆ.
'ಬಾಲಚಂದ್ರ' ಎಂದರೆ ಚಂದ್ರನನ್ನು ತನ್ನ ಹಣೆಯ ಮೇಲೆ ಧರಿಸಿದವನು ಎಂದರ್ಥ. ಪುರಾಣದ ಪ್ರಕಾರ, ಚಂದ್ರನು ತನ್ನ ಸೌಂದರ್ಯದ ಗರ್ವದಿಂದ ಗಣೇಶನನ್ನು ನೋಡಿ ನಕ್ಕಾಗ, ಗಣೇಶನು ಅವನಿಗೆ ಶಾಪ ನೀಡುತ್ತಾನೆ. ನಂತರ ಚಂದ್ರನು ತನ್ನ ತಪ್ಪಿನ ಅರಿವಾಗಿ ಚೈತ್ರ ಮಾಸದ ಈ ದಿನದಂದೇ ಗಣೇಶನನ್ನು ಕುರಿತು ಕಠಿಣ ತಪಸ್ಸು ಮಾಡುತ್ತಾನೆ. ಚಂದ್ರನ ಭಕ್ತಿಗೆ ಮೆಚ್ಚಿದ ಗಣಪತಿ, ಶಾಪ ವಿಮೋಚನೆ ಮಾಡಿ ಚಂದ್ರನನ್ನು ತನ್ನ ಮಸ್ತಕದ ಮೇಲೆ ಧರಿಸುತ್ತಾನೆ. ಅಂದಿನಿಂದ ಗಣೇಶನಿಗೆ 'ಬಾಲಚಂದ್ರ' ಎಂಬ ಹೆಸರು ಬಂದಿದೆ.
ಈ ದಿನ ಭಕ್ತರು ಮುಂಜಾನೆಯೇ ಎದ್ದು ಸ್ನಾನಾದಿ ಕರ್ಮಗಳನ್ನು ಮುಗಿಸಿ ಗಣೇಶನಿಗೆ ದೂರ್ವ(ಗರಿಕೆ) ಮತ್ತು ಕೆಂಪು ಹೂವುಗಳಿಂದ ಪೂಜೆ ಸಲ್ಲಿಸುತ್ತಾರೆ. ದಿನವಿಡೀ ಉಪವಾಸವಿದ್ದು ಗಣೇಶ ಅಷ್ಟೋತ್ತರ ಅಥವಾ ಸಂಕಟನಾಶನ ಸ್ತೋತ್ರಗಳನ್ನು ಪಠಿಸುತ್ತಾರೆ. ರಾತ್ರಿ ಚಂದ್ರೋದಯದ ನಂತರ ಚಂದ್ರನಿಗೆ ಅರ್ಘ್ಯ ನೀಡಿ, ಗಣೇಶನಿಗೆ ಪ್ರಿಯವಾದ ಮೋದಕ ಅಥವಾ ಕಡುಬನ್ನು ನೈವೇದ್ಯವಾಗಿ ಅರ್ಪಿಸಿ ನಂತರ ಉಪವಾಸ ಮುರಿಯುವುದು ಈ ವ್ರತದ ವಿಶೇಷ.
ಮಾನಸಿಕ ಗೊಂದಲವಿರುವವರು ಮತ್ತು ಕೆಲಸ ಕಾರ್ಯಗಳಲ್ಲಿ ಅಡೆತಡೆ ಅನುಭವಿಸುತ್ತಿರುವವರು ಬಾಲಚಂದ್ರ ಸಂಕಷ್ಟ ಚತುರ್ಥಿಯ ವ್ರತ ಮಾಡಿದರೆ ಮನಸ್ಸಿಗೆ ಶಾಂತಿ ದೊರೆಯುವುದಲ್ಲದೆ, ಚಂದ್ರನಂತೆ ಶೀತಲವಾದ ಮತ್ತು ಸ್ಪಷ್ಟವಾದ ಆಲೋಚನಾ ಶಕ್ತಿ ಲಭಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಎನ್ನುವುದು ನಂಬಿಕೆ.
✍ಲಲಿತಶ್ರೀ ಪ್ರೀತಂ ರೈ