image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಾನ್ ಕಾಲಜ್ಞಾನಿ 'ಕೈವಾರ ತಾತಯ್ಯ'

ಮಹಾನ್ ಕಾಲಜ್ಞಾನಿ 'ಕೈವಾರ ತಾತಯ್ಯ'

ಏಕ ಚಕ್ರನಗರ ಎಂದು ಕರೆಸಿಕೊಂಡಿದ್ದ ಕೈವಾರ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಪುಣ್ಯಕ್ಷೇತ್ರ. ಸ್ಥಳ ಪುರಾಣದ ಪ್ರಕಾರ ಅಮರ ನಾರಾಯಣ ಸ್ವಾಮಿಯ ಪ್ರತಿಷ್ಠಾಪನೆಯು ದ್ವಾಪರಯುಗದಲ್ಲಿ ದೇವೇಂದ್ರನಿಂದ ಆಗಿದೆ. ಭೀಮನು ಬಕಾಸುರನೆಂಬ ರಾಕ್ಷಸನನ್ನು ಕೊಂದು ಭೀಮಲಿಂಗೇಶ್ವರ ದೇವಸ್ಥಾನ ಸ್ಥಾಪಿಸಿದನೆಂಬ ಉಲ್ಲೇಖವೂ ಕೂಡ ಇದೆ. ಮಹಾನ್ ಸಂತ ಕಾಲಜ್ಞಾನ-ಭವಿಷ್ಯ ವಾಣಿ ನುಡಿದ ಶ್ರೀ ಯೋಗಿನಾರೇಯಣ ಯತೀಂದ್ರರು ಜನ್ಮವೆತ್ತಿದ ಸ್ಥಳವಿದು. 1726 ರಲ್ಲಿ ಬಲಿಜ ಜನಾಂಗಕ್ಕೆ ಸೇರಿದ ಮುದ್ದಮ್ಮ ಕೊಂಡಪ್ಪ ದಂಪತಿಗಳಿಗೆ ಹುಟ್ಟಿದ ಯೋಗಿನಾರೇಯಣರ ಜನ್ಮನಾಮ ನಾರಾಣಪ್ಪ. ತಂದೆ ತಾಯಿ ದೈವಭಕ್ತರು. ಕುಲದೇವರಾದ ಅಮರನಾರಾಯಣನ ಕೃಪೆಯಿಂದ ಗರ್ಭವತಿಯಾದಳು ಮುದ್ದಮ್ಮ. ಸೋದರತ್ತೆ ಆಸ್ತಿಯ ದುರಾಸೆಯಿಂದ ಮುದ್ದಮ್ಮ ಗರ್ಭವತಿ ಇದ್ದಾಗಲೇ ವಿಷಕೊಟ್ಟು ಗರ್ಭಪಾತ ಮಾಡಲೆತ್ನಿಸಿದಾಗ, ಸರ್ಪ ಆದಿಶೇಷನೇ ಬಂದು ಕಾಪಾಡುತ್ತಾನಂತೆ. ಹೀಗೆ ಜನ್ಮ ತಳೆದ ನಾರಾಣಪ್ಪನ ತಂದೆ ಬಳೆ ವ್ಯಾಪಾರಿಗಳು. ಅವರು ದುಡಿಮೆಲ್ಲೇ ಸಂತೃಪ್ತ ಜೀವನ ಕಂಡವರು. ಬಾಲ್ಯದಲ್ಲೇ ಹೆತ್ತವರನ್ನು  ಕಳೆದುಕೊಂಡ ಹುಡುಗ ನಾರಾಣಪ್ಪ ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯದಲ್ಲಿ ಬೆಳೆಯುತ್ತಾನೆ. ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲದೇ ಯಾವಾಗಲೂ ಆಧ್ಯಾತ್ಮದಲ್ಲಿ ಚಿಂತನ ಮಂಥನ ನಡೆಸುವುದರಲ್ಲಿ ಮಗ್ನನಾಗಿರುತ್ತಿದ್ದನು. ಸಾಕು ತಂದೆ ತಾಯಿಗಳು ಹೇಳುತ್ತಿದ್ದ ಪುರಾಣಗಳು, ಪುಣ್ಯಪುರುಷರ ಕಥೆಗಳಿಂದ ಸ್ಫೂರ್ತಿ ಪಡೆದ ನಾರಾಣಪ್ಪನಿಗೆ ವಿಷಯೋಪ ಭೋಗಗಳೆಂದರೆ ವಿರಕ್ತಭಾವವೇ. ಊರಿನ ಕೂಲಿಮಠದಲ್ಲಿ ಸಂಸ್ಕೃತ, ಕನ್ನಡ, ತೆಲುಗು ಭಾಷೆಗಳನ್ನು ಕಲಿತು ಪಾರಂಗತನಾಗಿ ಪ್ರೌಢ ವಯಸ್ಕನಾದಾಗ, ಹಿರಿಯರು ಮುಂದೆ ನಿಂತು ಸೋದರತ್ತೆಯ ಮಗಳು ಮುನಿಯಮ್ಮನನ್ನು  ಕೊಟ್ಟು ವಿವಾಹ ನೆರವೇರಿಸಿ ಗೃಹಸ್ಥಾಶ್ರಮ ಸ್ವೀಕಾರ ಮಾಡಿಸಿದ್ದರು. ಮುದ್ದಮ್ಮ, ಪೆದ್ದಕೊಂಡಪ್ಪ, ಚಿಕ್ಕಕೊಂಡಪ್ಪ ಎಂಬ ಮೂವರು ಮಕ್ಕಳಾದರು. ಸಂಸಾರ ದೊಡ್ಡದಾಗಿತ್ತು. ಜೀವನ ನಿರ್ವಹಣೆ ಕಷ್ಟವಾಗಿ ಗಂಡ ದುಡಿಮೆಸ್ತನಲ್ಲ, ಸದಾ ಮೂಗು ಹಿಡಿದು ದೇವರ ಧ್ಯಾನ ಮಾಡುತ್ತ ಕುಳಿತರೆ ಹೊಟ್ಟೆ ತುಂಬುವುದಾದರೂ ಹೇಗೆ..? ಎನ್ನುವುದು ಮುನಿಯಮ್ಮನ ನೋವು. ಬಳೆಮಲಾರ ಕೈಗಿತ್ತು ವ್ಯಾಪಾರಕ್ಕೆ ಹೋಗಿ ದಿನಕ್ಕಿಷ್ಟು ತರಲೇ ಬೇಕೆಂದು ತಾಕೀತು ಮಾಡುತ್ತಿದ್ದಳು. ಲೋಕದ ಸ್ತ್ರೀಯರೆಲ್ಲ ತಾಯಿ ಸಮಾನರೆಂದು ಭಾವಿಸತೊಡಗಿದ್ದ ನಾರಾಣಪ್ಪ ಹೆಣ್ಣು ಮಕ್ಕಳಿಗೆ, ಸುಮಂಗಲಿಯರಿಗೆಲ್ಲ ಶುದ್ಧ ಭಾವದಿಂದ ಬಳೆತೊಡಿಸುತ್ತಿದ್ದರು. ಅವರು ಕಾಸುಕೊಟ್ಟಷ್ಟೇ. ಕೊಡದೇ ತಾತಯ್ಯ ಕಾಸಿಲ್ಲವೆಂದರೆ ಎಲ್ಲಾ ಅವನಿಚ್ಛೆ ಎಂದು ಮುನ್ನಡೆದು ಸಂಜೆ ವೇಳೆಗೆ ಬಳೆಯೆಲ್ಲ ಮಾರಿ ಬರಿ ಗೈಲಿ ಮನೆ ಸೇರುತ್ತಿದ್ದರು. ದಾಂಪತ್ಯದಲ್ಲಿ ವಿರಸವೇರ್ಪಟ್ಟಿತ್ತು. ಅದೊಂದು ದಿನ ಮೂಗೊಳಿ ವೆಂಕಟಗಿರಿ ಕಣಿವೆಯಲ್ಲಿ ಸಾಗುತ್ತಿರುವಾಗ ದಿವ್ಯ ತೇಜಸ್ಸಿನ ಪ್ರಖರತೆಯಲ್ಲಿ ಸ್ವಾಮಿಗಳೊಬ್ಬರಿಂದ ’ಓಂ ನಮೋ ನಾರಾಯ” ಎಂಬ ಬೀಜಾಕ್ಷರಿ ಮಂತ್ರೋಪದೇಶ ಪಡೆದಿದ್ದರು. ಬಾಯಲ್ಲಿ ಬೆಣಚುಕಲ್ಲು ಇಟ್ಟುಕೊಂಡು ಅದು ಕಲ್ಲು ಸಕ್ಕರೆ ಯಾಗುವವರೆಗೂ ಈ ಮಂತ್ರವನ್ನು ಜಪಿಸು ನೀನು ಶ್ರೀಹರಿಯ ಕೃಪಾಕಟಾಕ್ಷದಿಂದ ದೈವಾಂಶಸಂಭೂತನಾಗಿ ಯೋಗಸಿದ್ಧಿ ಹೊಂದುವೆ ಎಂದು ಹರಸಿದ್ದರು. ಅನಂತರ, ತಪಸ್ಸಿಗೆ ಪ್ರಶಸ್ತವೆನಿಸಿದ ನರಸಿಂಹ ಗುಹೆಯಲ್ಲಿ ಕುಳಿತು ಬೀಜಾಕ್ಷರಿ ಮಂತ್ರ ಜಪಿಸುವಾಗ ಬೆಣಚುಕಲ್ಲಿದ್ದ ಬಾಯಲ್ಲಿ “ಓಂ ನಮೋ ನಾರೇಯಣಾಯ” ಎಂಬ ಉಚ್ಛಾರವಾದಾಗ ಗಾಬರಿಯಿಂದ ಮತ್ತೆ ಧ್ಯಾನಮಗ್ನರಾಗುತ್ತಿದ್ದಂತೆ ಅದ ನ್ನೇ ಮುಂದುವರೆಸು "ನೀನು ಯೋಗಿ ನಾರೇಯಣ" ಎಂದೇ ಹೆಸರಾಗುವೆ ಎಂಬ ಅಶರೀರವಾಣಿಯಾಯಿತು. ಮೂರು ವರುಷಗಳ ಕಠಿಣ ತಪದಫಲವಾಗಿ ಬೆಣಚು ಕಲ್ಲು ಸಕ್ಕರೆಯಾಗಿತ್ತು. ಅಮರ ನಾರಾಯಣನ ಪರಮ ಭಕ್ತರಾದರು. ಆಧ್ಯಾತ್ಮಿಕ ರಹಸ್ಯಗಳನ್ನು ಅನುಭವವೇದ್ಯ ಸತ್ಯ ಸಂಗತಿಗಳನ್ನು ಅರಿತು ಜನತೆ ಗೆವೇದಾಂತದ ವಿಷಯಗಳನ್ನು ಬೋಧಿಸುತ್ತಾ ದೈವಿಕ ಪವಾಡಗಳನ್ನೆ ಮಾಡಿದರು. ಭಕ್ತಿಭಾವದ ಮೂಲಕ ಜ್ಞಾನಮಾರ್ಗ ಎಂಬಂತೆ ಜನಮಾನಸದಲ್ಲಿ ಭಕ್ತಿಭಾವ ಬಿತ್ತುವಂತಹ ಭಕ್ತಿಗೀತೆಗಳನ್ನು ರಚಿಸಿದರು. ಸನ್ಮಾರ್ಗ ತೋರುತ್ತ ಮಹಾನ್ ಭವಿಷ್ಯತ್ ಜ್ಞಾನಿಗಳಾಗಿ ಕಾಲಜ್ಞಾನವನ್ನು ರಚಿಸಿದರು. ಮಂದೆ ಕೈವಾರ ತಾತಯ್ಯ ಯೋಗಿ ನಾರೇಯಣ ಯತೀಂದ್ರರೆಂದೇ ಪ್ರಖ್ಯಾತರಾದರು. ಇಂದಿಗೂ ಕೈವಾರ ತಾತಯ್ಯನ ಸನ್ನಿದಿಯಲ್ಲಿ ಕುಳಿತು ಅಮರನಾರಾಯಣ ಸ್ವಾಮಿಯನ್ನು ಜಪಿಸಿದರೆ ಮನಸ್ಸಿಗೆ ಏನೋ ತೃಪ್ತಿ. 

✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ