image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತುಳುನಾಡಿನ ಧರ್ಮದೈವ ಪಂಜುರ್ಲಿ...

ತುಳುನಾಡಿನ ಧರ್ಮದೈವ ಪಂಜುರ್ಲಿ...

ತುಳುನಾಡಿನಲ್ಲಿ ದೈವಾರಾಧನೆಗೆ ವಿಶೇಷ ಮಹತ್ವವಿದ್ದು, ಕೆಲವು ಸಲ ಧರ್ಮವನ್ನೂ ಮೀರಿ ಜನ ಇಲ್ಲಿ ಧೈವಗಳಿಗೆ ಪೂಜೆ ಸಲ್ಲಿಸುತ್ತಾರೆ. ಹಾಗೇ ನೋಡಿದರೆ ನಮ್ಮಲ್ಲಿ ಇರುವ ಹಾಗೆ ಘಟ್ಟ ಪ್ರದೇಶದಲ್ಲೂ ಇಂತಹ ನಂಬಿಕೆಗಳು ಇರುವುದನ್ನು ನಾವು ಕಾಣಬಹುದು. ಈಶ್ವರನ ದೈವಾರಾಧನೆ ಪ್ರತಿಯಾಗಿ ಬೆಂಗಳೂರು, ಹಾಸನ ಮುಂತಾದ ಕಡೆ ಮುನೇಶ್ವರನನ್ನು ಪೂಜೆ ಮಾಡುತ್ತಾರೆ. ಈಶ್ವರನಿಗೆ ದೇವಕ್ರೀಯೆಯಾದರೆ ಮುನೇಶ್ವರನಿಗೆ ಅಸುರ ಕ್ರೀಯೆಯ ರೀತಿಯಲ್ಲಿ ಮಾಂಸಾಹಾರವನ್ನು ಕಾಣಬಹುದು. ಹೆಣ್ಣು ದೇವರುಗಳಾದ ಅಣ್ಣಮ್ಮ, ಚೌಡಮ್ಮಗೂ ಮಾಂಸಾಹಾರ ಬಡಿಸುವುದನ್ನು ನೋಡಬಹುದು. ಕೇರಳದ ಕೆಲವು ಭಾಗ ಗಳಲ್ಲಿಯೂ ದೈವಾರಾಧನೆ ಕಾಣ ಸಿಗುತ್ತದೆ.  ದೈವಾರಾಧನೆಯಲ್ಲಿ ಪಂಜುರ್ಲಿ ದೈವವು ಹಂದಿಯ ರೂಪದ ದೈವವೆಂದು ಅಥವಾ ವರಹಾವತಾರ ಪ್ರತೀಕವಾಗಿ ಪರಿಗಣಿಸಲಾಗಿದೆ. ಇಲ್ಲಿ ಮೈಸಂದಾಯ (ಮಹಿಷ), ನಂದಿಗೋಣೆ (ಹೋರಿ) ಹಾಗೂ ಗೋಳಿ (ಹಾಯುವ ಗೂಳಿ), ಪಿಲ್ಚಂಡಿ (ಹುಲಿ) ಆನೆ, ಕುದುರೆ ಇವೆಲ್ಲವೂ ಒಂದಲ್ಲ ಒಂದು ರೂಪದಲ್ಲಿ ಪೂಜೆ ಪಡೆಯುತ್ತಿವೆ.

ಪಂಜುರ್ಲಿ (ಹಂದಿಯ ಮರಿ) ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ. ಇದರ ಬಗ್ಗೆ ಹಿರಿಯರು ಹೇಳುವ ಕಥೆಯನ್ನರಸಿ ಹೊರಟರೆ - ತುಳುನಾಡಿನ ಪಕ್ಕದ ಘಟ್ಟದಲ್ಲಿ ಎರಡು ಕಾಡು ಹಂದಿಗಳು ವಾಸಿಸುತ್ತಿದ್ದವು. ಈ ಹಂದಿಗಳಿಗೆ ಮುಂದೆ ಸತಿಪತಿಗಳಾಗಿ ಸಂತಾನವೃದ್ಧಿಗೊಳಿಸಬೇಕೆಂಬ ಇಚ್ಛೆಯಾಯಿತು. ಗಂಡು ಹೆಣ್ಣು ಹಂದಿಗಳು ತಮ್ಮೊಳಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದು, ಅವು ನೇರವಾಗಿ ಕುಕ್ಕೆಯ ಕ್ಷೇತ್ರಕ್ಕೆ ತೆರಳಿದವು. ಅಲ್ಲಿ ಸುಬ್ರಹ್ಮಣ್ಯನನ್ನು ದೇವರನ್ನು ಭೇಟಿ ಆಗಿ ತಮ್ಮಲ್ಲಿ ಗಂಡ-ಹೆಂಡತಿಯಾಗಿ ಬಾಳುವಂತೆ ಕರುಣಿಸಬೇಕೆಂದು ಭಕ್ತಿಯಿಂದ ಬೇಡಿಕೊಂಡವು. ಅವುಗಳ ಇಚ್ಛೆಯಂತೆ ಸುಬ್ರಹ್ಮಣ್ಯ ಅವುಗಳಿಗೆ ಸತಿಪತಿಗಳಾಗುವಂತೆ ವರವಿತ್ತರಂತೆ, ಇದರಿಂದ ಹಂದಿಗಳು ಸಂತಸದಿಂದ ಕಾಡನ್ನು ಪ್ರವೇಶಿಸಿದವು. ಅವುಗಳ ಅನ್ಯೋನ್ಯ ಬದುಕಿನ ಸಂಕೇತವಾಗಿ ಆ ಹಂದಿಗಳಿಗೆ ನಾಲ್ಕು ಮರಿಗಳು ಹುಟ್ಟಿಕೊಂಡವು. ಮರಿಗಳು ಬೆಳೆಯುತ್ತಿದ್ದಂತೆ ಅವುಗಳಲ್ಲಿ  ಒಂದು ಮರಿ ಆಟವಾಡುತ್ತಾ  ಈಶ್ವರ ದೇವರ ಹೂದೋಟವನ್ನು ಪ್ರವೇಶಿಸಿತು. ಆ ಹಂದಿ ಮರಿಯ ಅಂದ ಚೆಂದದ ರೂಪವನ್ನು ಕಂಡು ಆಕರ್ಷಿತರಾದ ಪಾರ್ವತಿದೇವಿ ಪ್ರೀತಿಯಿಂದ ಸಲಹ ತೊಡಗಿದರಂತೆ. ಆ ಮರಿಯು ಬೆಳೆಯ ತೊಡಗಿದಂತೆ ಎಲ್ಲೆಂದರಲ್ಲಿ ತಿರುಗಾಡತೊಡಗಿತು. ಕೊನೆಗೆ ತನ್ನದಾಡೆ(ಕೋರೆ)ಯಿಂದ ಈಶ್ವರ ದೇವರ ಹೂದೋಟವನ್ನು ಹಾಳುಗೆಡವಲು ಪ್ರಾರಂಭಿಸಿತು. ಹಂದಿಯ ಉಪಟಳವು ಸಹಿಸಲು ಅಸಾಧ್ಯವಾಯಿತು. ಇದರಿಂದ ಕುಪಿತಗೊಂಡ ಶಿವ ಅದನ್ನು ಕೊಂದುಬಿಡುತ್ತಾರೆ. ಈ ವಿಷಯ ತಿಳಿದಾಗ ಪಾರ್ವತಿದೇವಿ ಬಹಳ ದುಃಖ ಪಡುತ್ತಾರೆ. ತಾನೇ ಪ್ರೀತಿಯಿಂದ ಸಾಕಿ ಸಲಹಿದ ಹಂದಿಮರಿಗೆ ಜೀವದಾನ ಮಾಡುವಂತೆ ಬಹುವಾಗಿ ಪತಿಯನ್ನು ಪ್ರಾರ್ಥಿಸುತ್ತಾರೆ. ಮಡದಿಯ ಇಚ್ಛೆಯಂತೆ ಪರಮೇಶ್ವರ ಹಂದಿಗೆ ಜೀವದಾನ ಮಾಡಿ, ಆ ಹಂದಿಯ ಮರಿಗೆ ದೈವಶಕ್ತಿಯನ್ನು ಕರುಣಿಸುತ್ತಾರೆ. ನೀನು ವರಾಹ ರೂಪಿಯಾದ "ಪಂಜುರ್ಲಿ" ದೈವವಾಗಿ ಭೂಲೋಕವನ್ನು ಪ್ರವೇಶಿಸು. ಅಲ್ಲಿ ಸತ್ಯ, ಧರ್ಮ, ನ್ಯಾಯವನ್ನು ರಕ್ಷಿಸುವ ದೈವವಾಗಿ ಮೆರೆದಾಡಿಕೊಂಡಿರು. ಭೂಲೋಕದಲ್ಲಿ ಮಾನವರು ನಿನಗೆ ಅರ್ಪಿಸುವ ನೈವೇದ್ಯಾದಿಗಳನ್ನು ಸ್ವೀಕರಿಸು. ಅವರ ಬೆಳೆಯನ್ನು ರಕ್ಷಣೆ ಮಾಡುವ, ಕಷ್ಟ, ಕಾರ್ಪಣ್ಯಗಳನ್ನು, ರೋಗರುಜಿನಗಳನ್ನು ಪರಿಹರಿಸಿ ಕಾಯುವ ರಕ್ಷಣೆಯ ದೈವವಾಗಿ ಕೀರ್ತಿಯನ್ನು ಬೆಳಗಿಕೊಂಡಿರು. ಅದೇ ರೀತಿ ನಿನ್ನನ್ನು ಧಿಕ್ಕರಿಸಿ ಅಹಂಕಾರದಿಂದ ನಡೆಯುವವರನ್ನು ಶಿಕ್ಷಿಸಿ, ಸರಿದಾರಿಗೆ ತಿರುಗಿಸಿ ನಿನ್ನಲ್ಲಿ ಭಕ್ತಿ ಹುಟ್ಟುವಂತೆ ಮಾಡು' ಎಂದು ವರಪ್ರಧಾನ ಮಾಡಿ ಕಳುಹಿಸಿದರು. ದೇವರ ಅಪ್ಪಣೆ ಪ್ರಕಾರ ಪಂಜುರ್ಲಿಯು ದೈವಶಕ್ತಿಯಾಗಿ ಭೂಲೋಕ ಪ್ರವೇಶಿಸಿತು ಎನ್ನುವ ಕಥೆ ಇದೆ.

ಪಂಜುರ್ಲಿಯು ಧರ್ಮಸ್ಥಳದಲ್ಲಿ ಅಣ್ಣಪ್ಪ ಪಂಜುರ್ಲಿಯಾಗಿ ಅರಾಧಿಸಲ್ಪಡುತ್ತಾನೆ ಜೊತೆಗೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಅಂಗಣ ಪಂಜುರ್ಲಿ, ವರ್ನರ ಪಂಜುರ್ಲಿ, ಬಗ್ಗು ಪಂಜುರ್ಲಿ, ತೇಂಬೈಲು ಪಂಜುರ್ಲಿ, ವರ್ತೆ ಪಂಜುರ್ಲಿ, ಕುಪ್ಪೆಟ್ಟು ಪಂಜುರ್ಲಿ, ಗೋಲಿದಡಿ ಪಂಜುರ್ಲಿ, ಬೊಲ್ಯಲ ಪಂಜುರ್ಲಿ, ಮಲಾರ ಪಂಜುರ್ಲಿ, ದೆಂದೂರ ಪಂಜುರ್ಲಿ, ಪಾಜೈ ಪಂಜುರ್ಲಿ, ಬೈಕಾಡ್ದಿ ಪಂಜುರ್ಲಿ, ಬತ್ತಿ ಪಂಜುರ್ಲಿ, ಕಲ್ಯಬೂಡು ಪಂಜುರ್ಲಿ, ಕದ್ರಿ ಪಂಜುರ್ಲಿ, ಕುಕ್ಕೆ ಪಂಜುರ್ಲಿ, ಕಾಂತಾವರ ಪಂಜುರ್ಲಿ, ಅಂಬದಾಡಿ ಪಂಜುರ್ಲಿ ಮುಂತಾದ ಹೆಸರಿನಲ್ಲಿ ತುಳುನಾಡಿನಲ್ಲಿ ಪಂಜುರ್ಲಿ ಧರ್ಮಧೈವವಾಗಿ ಆರಾದಿಸಲ್ಪಡುತ್ತಾನೆ.

ಸಾಮಾನ್ಯವಾಗಿ ಜಿಮಾದಿ (ಧೂಮಾವತಿ ದೈವ), ಪಿಲ್ಚಂಡಿ, ಪಂಜುರ್ಲಿ, ಜಾರಂದಾಯ ಮೊದಲಾದ ದೈವಗಳ ಮಣೆ-ಮಂಚದಲ್ಲಿ ವ್ಯತ್ಯಾಸ ಇಲ್ಲ. ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸ ಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುತ್ತಾರೆ. ಹಲಸು, ಸಾಗುವಾನಿ, ಮೊದಲಾದ ಧೀರ್ಘ ಬಾಳಿಕೆ ಬರುವ ಹಲಗೆಗಳನ್ನು ಉಪಯೋಗಿಸುತ್ತಾರೆ. ಮದನಕೈಗಳನ್ನು( ಗೋಡೆಯಲ್ಲಿ ಹಲಗೆಯನ್ನು ಜೋಡಿಸಲು ಇಕ್ಕೆಲಗಳಲ್ಲಿ ಆಧಾರಕ್ಕೆ ಜೋಡಿಸುವ ರೀಪುಗಳು) ಗೋಡೆಗೆ ಜೋಡಿಸಿ ಅದರ ಮೇಲೆ ಒಂದು ಹಲಗೆಯನ್ನಿಟ್ಟು ಪೂಜಿಸುವುದು ಹಿಂದಿನ ಕಾಲದಿಂದ ತುಳುವರಲ್ಲಿ ಸಾಮಾನ್ಯವಾಗಿ ನಡೆದು ಬಂದ ಆಚರಣೆ.

ಈಗ ಕ್ರಮೇಣ ಬದಲಾವಣೆ ಕಂಡು ಬಂದಿರುವುದನ್ನು ನೋಡಬಹುದು. ಕೆಲವು ಕಡೆ ಮಂಚವನ್ನು ಮನೆಯ ಚಾವಡಿಯ ಮಾಡಿನ ತೊಲೆಯ ಸರಪಳಿಗೆ ಆಧಾರದಲ್ಲಿ ತೂಗು ಹಾಕುವುದು ಇದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಶಿಲ್ಪ ವಿನ್ಯಾಸವನ್ನು ಬಿಡಿಸುತ್ತಾರೆ. ಕೋಲ ಕಟ್ಟುವ ಸಮಯದಲ್ಲಿ ತುಳುನಾಡಿನ ಬಡಗು ಭಾಗದಲ್ಲಿ ತೆಂಕಣ ಪ್ರದೇಶಕ್ಕಿಂತ ಸ್ವಲ್ಪ ಮಟ್ಟಿನ ವ್ಯತ್ಯಾಸವಿರುತ್ತದೆ. ದೈವನರ್ತಕನಿಗೆ ಮುಖಕ್ಕೆ ಹಂದಿಯ ಮುಖವಾಡವನ್ನು ತೊಡಿಸುತ್ತಾರೆ. ಮಣೆ-ಮಂಚದಲ್ಲಿ ಸಾಧಾರಣವಾಗಿ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ (ಮೂರ್ತಿ) ಪಾಪೆಯನ್ನು ಇಡುವ ಕ್ರಮವಿದೆ ಎನ್ನುತ್ತಾರೆ ದೈವದ ಚಾಕರಿ ಮಾಡುವ ಹಿರಿಯರು.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ