ನವರಾತ್ರಿಯನ್ನು ಕರ್ನಾಟಕದಲ್ಲಿ "ದಸರಾ" ಎಂದರೆ ಕರೆದರೆ, ಪಶ್ಚಿಮ ಬಂಗಾಳದಲ್ಲಿ "ದುರ್ಗಾ ಪೂಜಾ" ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ 'ವಿಜಯ ದಶಮಿ', ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವುದು ಕರ್ನಾಟಕದ ಆಚರಣೆಯ ವಿಶೇಷ ಪದ್ಧತಿ. ಇದೇ ದಿನ ಮೈಸೂರಿನಲ್ಲಿ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ.
ದುಷ್ಟರನ್ನು ಸಂಹರಿಸಲು ಅವತಾರ ತಾಳಿದ ಜಗನ್ಮಾತೆಯ ಒಂಭತ್ತು ಸ್ವರೂಪಗಳನ್ನು ಆರಾಧಿಸುವುದರಿಂದ ಸಕಲ ಸಂಕಷ್ಟಗಳು ದೂರವಾಗಿ ಸುಖ-ಶಾಂತಿ, ನೆಮ್ಮದಿಯನ್ನು ಕಾಣಬಹುದಾಗಿದೆ. ಇಂತಹ ದೇವಿಯ ಒಂಭತ್ತು ಸ್ವರೂಪಗಳು:-
ಶೈಲಪುತ್ರಿ
ನವರಾತ್ರಿಯ ಮೊದಲನೇ ದಿನ ಘಟಸ್ಥಾಪನೆಯ ಜೊತೆಗೆ ಶೈಲಪುತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಹಿಮಾಲಯ ರಾಜನ ಪುತ್ರಿಯಾದ ಕಾರಣ ಈ ದೇವಿಯನ್ನು ಶೈಲಪುತ್ರಿ ಎಂದು ಕರೆಯಲಾಗುತ್ತದೆ.
ಬ್ರಹ್ಮಚಾರಿಣಿ
ನವರಾತ್ರಿಯ ಎರಡನೇ ದಿನ ದೇವಿ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ತಪಸ್ಸನ್ನು ಕಟ್ಟುನಿಟ್ಟಾಗಿ ಆಚರಿಸಿರುವ ಕಾರಣದಿಂದ ಬ್ರಹ್ಮಚಾರಿಣಿ ಎಂದು ಕರೆಯಲಾಗುತ್ತದೆ.
ಚಂದ್ರಘಂಟಾ
ಚಂದ್ರಘಂಟಾ ದೇವಿಯನ್ನು ನವರಾತ್ರಿಯ ಮೂರನೇ ದಿನ ಪೂಜಿಸಲಾಗುತ್ತದೆ. ಹಣೆಯಲ್ಲಿ ಅರ್ಧಚಂದ್ರಾಕೃತಿಯನ್ನು ಧರಿಸಿರುವ ಕಾರಣ ಚಂದ್ರಘಂಟಾ ಎಂದು ಕರೆಯುತ್ತಾರೆ.
ಕೂಷ್ಮಾಂಡಾ
ನವರಾತ್ರಿಯ ನಾಲ್ಕನೇ ದಿನ ದೇವಿಯ ಕೂಷ್ಮಾಂಡಾ ಸ್ವರೂಪವನ್ನು ಪೂಜಿಸಲಾಗುತ್ತದೆ. ಸೃಷ್ಟಿಯಲ್ಲಿ ಎಲ್ಲೆಡೆ ಅಂಧಕಾರವಿದ್ದ ಸಮಯದಲ್ಲಿ ತನ್ನ ಮಂದಹಾಸದಿಂದ ಬ್ರಹ್ಮಾಂಡವನ್ನು ರಚಿಸಿರುತ್ತಾಳೆ ಎಂದು ಹೇಳಲಾಗುತ್ತದೆ.
ಸ್ಕಂದಮಾತಾ:
ನವರಾತ್ರಿಯ ಐದನೇ ದಿನ ದೇವಿ ದುರ್ಗೆಯನ್ನು ಸ್ಕಂದಮಾತೆಯ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ನಾಲ್ಕು ಭುಜವುಳ್ಳ ತಾಯಿಯ ಬಲಬದಿಯ ಮೇಲಿನ ಭುಜದಿಂದ ಪುತ್ರ ಸ್ಕಂದನನ್ನು ಹಿಡಿದಿರುತ್ತಾಳೆ
ಕಾತ್ಯಾಯನಿ
ನವರಾತ್ರಿಯ ಆರನೇ ದಿನ ದೇವಿಯ ಕಾತ್ಯಾಯನಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಕಾತ್ಯಾಯನ ಋಷಿಯ ಆಶ್ರಮದಲ್ಲಿ ಜನ್ಮತಾಳಿದ ಕಾರಣ ಕಾತ್ಯಾಯನಿ ಎಂದು ಕರೆಯಲಾಗುತ್ತದೆ.
ಕಾಳರಾತ್ರಿ
ನವರಾತ್ರಿಯ ಏಳನೇ ದಿನ ದೇವಿಯ ಕಾಳರಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಈ ದೇವಿಯ ಸ್ವರೂಪ ಅತ್ಯಂತ ಭಯಾನಕವಾಗಿದ್ದರೂ, ಈಕೆಯ ಆರಾಧನೆಯಿಂದ ಶುಭಫಲವನ್ನು ಪಡೆಯಬಹುದಾಗಿದೆ. ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ದೇವಿಯ ಈ ಸ್ವರೂಪ ಜಗತ್ತಿಗೆ ಕಲ್ಯಾಣಕಾರಿ ಎಂದು ಹೇಳಲಾಗುತ್ತದೆ.
ಮಹಾಗೌರಿ
ನವರಾತ್ರಿಯ ಎಂಟನೇ ದಿನ ದೇವಿಯ ಮಹಾಗೌರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಮಹಾಗೌರಿ ಸ್ವರೂಪವನ್ನು ಪೂಜಿಸುವುದರಿಂದ ಸಮಸ್ತ ಪಾಪಗಳ ನಾಶವಾಗುತ್ತದೆ. ಮಹಾಗೌರಿ ಸ್ವರೂಪವನ್ನು ಅನ್ನಪೂರ್ಣೆ ಎಂದು ಸಹ ಕರೆಯಲಾಗುತ್ತದೆ.
ಸಿದ್ಧಿಧಾತ್ರಿ
ನವರಾತ್ರಿಯ ನವಮಿಯ ಅಂದರೆ ಒಂಭತ್ತನೇ ದಿನ ದೇವಿಯ ಸಿದ್ಧಿಧಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಸಮಸ್ತ ಕಾರ್ಯಗಳಿಗೆ ಸಿದ್ಧಿಯನ್ನು ಪ್ರಧಾನ ಮಾಡುವ ಸ್ವರೂಪವಾಗಿದೆ. ದೇವಿಯ ಈ ಸ್ವರೂಪವನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ.
ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ ಎನ್ನುವುದು ನಂಬಿಕೆ.
✍ ಲಲಿತಶ್ರೀ ಪ್ರೀತಂ ರೈ