image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುರುವಂಶಜರೆನ್ನಲಾಗುವ ಕೊಡವರ ವಿಶೇಷ ಹಬ್ಬ 'ಕೈಲ್ ಪೊಳ್ದ್' ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ....

ಕುರುವಂಶಜರೆನ್ನಲಾಗುವ ಕೊಡವರ ವಿಶೇಷ ಹಬ್ಬ 'ಕೈಲ್ ಪೊಳ್ದ್' ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ....

ಕೈಲ್‌ಪೊಳ್ದ್ ಎನ್ನುವದು ಕೊಡವರು ಪ್ರಮುಖವಾಗಿ ಆಚರಿಸುವ ಆಯುಧಪೂಜೆ ಹಬ್ಬ. ಇದಕ್ಕೆ ಮೊದಲು ಕೈದುಪೊಳ್ದ್ ಎನ್ನುತ್ತಿದ್ದ ಬಗ್ಗೆ ಉಲ್ಲೇಖವಿದೆ. ಕೈದು ಎಂದರೆ ಆಯುಧ ಎಂದರ್ಥ. ಪೊಳ್ದ್ ಎಂದರೆ  ಮುಹೂರ್ತ ಎಂಬ ಅರ್ಥಗಳೂ ಇವೆ.  ಪ್ರತಿ ವರ್ಷವೂ ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸುತ್ತಾರೆ. ಬೇಟೆಯಾಡುವದನ್ನು ನಿಷಿದ್ಧಗೊಳಿಸುವ ಮುನ್ನ ಕೈಲ್ ಪೊಳ್ದ್ ಹಬ್ಬದ ಬಳಿಕ ಕೊಡವರು ಸಾಮೂಹಿಕ ಬೇಟೆಗೆ ಹೋಗುತ್ತಿದ್ದರು. ಇದಕ್ಕೆ ಊರಬೇಟೆ ಎನ್ನುವರು.

ಕೊಡವರು ಮೂಲತಃ ಕುರು ವಂಶದವರು ಎನ್ನಲಾಗಿದ್ದು, ಕುರುಕ್ಷೇತ್ರ ಯುದ್ಧದ ನಂತರ ಚದುರಲಾರಭಿಸಿದವರಲ್ಲಿ ಕೆಲವರು ಈಗಿನ ಕೊಡಗಿನಲ್ಲಿ ನೆಲೆನಿಂತರು ಎನ್ನು ಉಲ್ಲೇಖಗಳಿದೆ. ಅವರ ಜಾನಪದ ಗೀತೆಯಲ್ಲಿ ಹನ್ನೆರಡು ವರ್ಷಗಳ ವನವಾಸದ ಬಳಿಕ ಪಾಂಡವರು ತಮ್ಮ ಅಜ್ಞಾತವಾಸದಲ್ಲಿ ಆಯುಧಗಳನ್ನು ಬಚ್ಚಿಟ್ಟು, ಅಜ್ಞಾತವಾಸದ ಕಳೆದ ಮೇಲೆ ಅವುಗಳನ್ನು ತೆಗೆದು ಪೂಜಿಸಿ, ಯುಧಿಷ್ಠಿರನಿಂದ ಇತರ ಸೋದರರು ಪಡೆದು ಗೋಗ್ರಹಣಯುದ್ಧಕ್ಕೆ ಹೋದ ಉಲ್ಲೇಖವಿದೆ. ಅಂತೆಯೇ, ವರ್ಷಕ್ಕೊಮ್ಮೆ ಆರಂಬ ಕಳೆದ ನಂತರ ಕೈಲ್ ಪೊಳ್ದ್ ಕಟ್ಟ್ ಪ್ರಕಾರ ಕರ್ಕಾಟಕ ಮಾಸಾದಿಯಲ್ಲಿ ತೆಗೆದಿರಿಸಿಟ್ಟಿದ್ದ ಆಯುಧಗಳನ್ನು ಮತ್ತೆ ತೆಗೆದು, ಶುದ್ಧಗೊಳಿಸಿ, ಪೂಜಿಸಿ, ಬಳಸುವದನ್ನು ಕೊಡವರು ಪಾಂಡವರ ವಂಶಸ್ಥರಾದ್ದರಿಂದ ಅನುಸರಿಸುತ್ತಿದ್ದಾರೆಂದು ಹೇಳಲಾಗಿದೆ.

ಜ್ಯೋತಿಷ್ಯದ ಮೂಲಕ ನಿಶ್ಚಯವಾದ ದಿನದಂದು ಬೇಟೆಗಾರರು ಊರ ಅಂಬಲದಲ್ಲಿ ಕೋವಿ, ಕತ್ತಿ, ಮೊದಲಾದ ಆಯಧ ಮತ್ತು ಬೇಟೆ ನಾಯಿಗಳೊಂದಿಗೆ  ಎಲ್ಲರೂ ಕಾಡಿಗೆ ತೆರಳಿ  ಬೇಟೆಯಾಡುತ್ತಿದ್ದರು. ದೊರೆತ ಬೇಟೆಯನ್ನು ಎಲ್ಲರೂ ಹಂಚಿಕೊಂಡು ಮನೆಗೆ ತೆರಳುವರು. ಗುಂಡು ಹೊಡೆದವನಿಗೆ, ಬಿದ್ದ ಪ್ರಾಣಿಯನ್ನು ಮೊದಲು ಮುಟ್ಟಿದವನಿಗೆ ವಿಶೇಷ ಪಾಲಿರುತಿತ್ತು. ಬೇಟೆನಾಯಿಗಳಿಗೂ ಒಂದು ಪಾಲು ಇರುತ್ತಿತ್ತಂತೆ. ಶತಮಾನಕ್ಕೂ ಹಿಂದೆ ಕೊಡವರು ತಮ್ಮ-ತಮ್ಮ  ದೇವಸ್ಥಾನಗಳಲ್ಲಿ ಸೇರಿ   ಜ್ಯೋತಿಷಿ ಅಥವಾ ಆ ದೇವಸ್ಥಾನದ ಅರ್ಚಕನು ನಿರ್ಧರಿಸಿದ ದಿನದಲ್ಲಿ ಈ ಹಬ್ಬವನ್ನು ಆಚರಿಸುತ್ತಿದ್ದರು. ಅವರಿಂದಲೇ ಪೂಜೆಯ ಮುಹೂರ್ತ, ಬೇಟೆಯಾಡಬೇಕಾದ ದಿಕ್ಕು, ಯಾವ ನಕ್ಷತ್ರದಲ್ಲಿ ಹುಟ್ಟಿದವನಿಗೆ ಬೇಟೆ ಫಲಿಸುತ್ತದೆ, ಇತ್ಯಾದಿ ವಿಷಯಗಳೂ ನಿಗದಿತವಾಗುತ್ತಿದ್ದಿದ್ದು ವಿಶೇಷ.

 ಕೃಷಿ ಕೆಲಸಗಳು ಬಿರುಸಾಗುವ ಸಮಯದಲ್ಲಿ  ಕೋವಿ, ಕತ್ತಿ, ಒಡಿಕತ್ತಿ, ಪೀಚೆಕತ್ತಿ ಮುಂತಾದ ಆಯುಧಗಳನ್ನೆಲ್ಲ  ತಮ್ಮ ಮನೆಯ ಕನ್ನಿಕೋಂಬರೆ ಎಂದು ಕರೆಯಲ್ಪಡುವ ದೇವರ ಕೋಣೆಯಲ್ಲಿಟ್ಟು ಬಿಡುತ್ತಾರೆ. ಹೀಗೆ ಆಯುಧಗಳನ್ನಿಡುವಾಗ ಕೆಲವು ನೇಮ-ಪದ್ಧತಿಗಳನ್ನು ಅನುಸರಿಸಿ ಇವುಗಳಿಗೆ ಕೈಲ್‌ಪೊಳ್ದ್ ಕಟ್ಟ್ ಎನ್ನುವರು. ಇದರ ಪ್ರಕಾರ ಎಂತಹದ್ದೇ ಸಂದರ್ಭದಲ್ಲೂ ಈ ಆಯುಧಗಳನ್ನು ಮುಟ್ಟುವಂತಿಲ್ಲ.ಸಿಂಹ ಮಾಸದ ಹದಿನೇಳರೊಳಗೆ ಎಲ್ಲರೂ ತಮ್ಮ ಗದ್ದೆಗಳಲ್ಲಿ ನಾಟಿ ಕೆಲಸವನ್ನು ಮುಗಿಸಲೇಬೇಕು ಎನ್ನುವ ಪದ್ದತಿ ಇದೆ. ಒಂದು ವೇಳೆ  ಕೆಲಸ ಮುಗಿಯುವ ಲಕ್ಷಣ ಇಲ್ಲದಿದ್ದಲ್ಲಿ ಈ ದಿನಕ್ಕೆ ಎರಡು-ಮೂರು ದಿನ ಮುಂಚಿತವಾಗಿ ಊರವರು ಮುಯ್ಯಾಳಾಗಿ ಹೋಗಿ ಕೆಲಸವನ್ನು ಮುಗಿಸುವ ಪದ್ದತಿಯೂ ಇದೆ. 

ನಂತರ ಈ ಮೊದಲು ತೆಗೆದಿರಿಸಿದ ಆಯುಧಗಳನ್ನು ನೇಮಾನುಸಾರ ಧಾರಣ ಮಾಡಬೇಕು. ಸ್ನಾನಾದಿ ಕೆಲಸಗಳ ನಂತರ ಕನ್ನಿಕೋಂಬರೆಯಲ್ಲಿಟ್ಟಿರುವ ಕೈದುಗಳನ್ನು ಅಂದರೆ ಆಯುಧಗಳನ್ನು ಹೊರತೆಗೆದು ಸ್ವಚ್ಛಗೊಳಿಸಿ, ಕನ್ನಿಕೋಂಬರೆಯಲ್ಲಿ ತಾಳೆಯೋಲೆಯ ಚಾಪೆಯ ಮೇಲೆ ಪೂರ್ವಕ್ಕೆ ಅಭಿಮುಖವಾಗಿ ಓರಣವಾಗಿ ಇಟ್ಟು, ಅಲ್ಲಿರುವ ತೂಗುದೀಪವನ್ನು ಹಚ್ಚಿ, ಆಯುಧಗಳನ್ನು ವಿವಿಧ ಹೂವುಗಳಿಂದ ಸಿಂಗರಿಸುತ್ತಾರೆ. ವಿಶೇಷವಾಗಿ ಕೋವಿಯನ್ನು ತೋಕ್ ಪೂ ಅಂದರೆ ಗೌರಿ ಹೂಗಳಿಂದ  ಅಲಂಕರಿಸಿ,  ತುದಿಬಾಳೆಯೆಲೆಯಲ್ಲಿ ಮಾಡಿದ ಅಡಿಗೆಯನ್ನೆಲ್ಲಾ ಸ್ವಲ್ಪ-ಸ್ವಲ್ಪ ಹಾಕಿ, ಅದನ್ನು ಆಯುಧಗಳ ಪಕ್ಕದಲ್ಲಿಟ್ಟು, ಮನೆಯ ಯಜಮಾನನು ಆಯುಧಗಳನ್ನು ಗಂಧ, ಧೂಪ, ದೀಪಾದಿಗಳಿಂದ ಪೂಜಿಸುತ್ತಾರೆ.  ಎಲ್ಲರೂ ತೂಗುದೀಪವನ್ನೂ, ಆಯುಧಗಳಿಗೆ  ನಮಸ್ಕರಿಸಿ,  ಕಿರಿಯರು ಹಿರಿಯರ ಕಾಲಿಗೆ ನಮಸ್ಕರಿಸುವುದು ಪದ್ದತಿ.

ಆಮೇಲೆ ಸಂಭ್ರಮದ ಔತಣದೂಟ. ಊಟದ ನಂತರ ಸುಮಾರು  ಮನೆಯ ಗಂಡಸರೆಲ್ಲರೂ ಆಯುಧಗಳ ಬಳಿ ನಿಲ್ಲುವರು. ಮನೆಯ ಯಜಮಾನನು ಒಂದು ಕೋವಿಯನ್ನು ಕೈಯಲ್ಲೆತ್ತಿಕೊಂಡು, "ಹುಲಿ ಮತ್ತು ಕಾಡುಹಂದಿಗಳು ಓಡುವ ದಾರಿಗೆದುರಾಗಿ ನಿಲ್ಲದೆ ಎದುರಿಸು, ಶತ್ರುವನ್ನು ಕೆಣಕದಿರು, ಶತ್ರುವನ್ನು ಎದುರಿಸುವ ಸಂದರ್ಭ ಬಂದರೆ ಅವನ ದಾರಿ ತಡೆದು ಹೋರಾಡು, ಮಿತ್ರನ ಸಹಾಯಕ್ಕೆ ನಿಲ್ಲು, ರಾಜನ ಮೇಲೆ ಮುನಿಯಬೇಡ, ದೇವರನ್ನು ಮರೆಯಬೇಡ ಎಂದು ಹೇಳಿ ನೆರೆದವರಲ್ಲಿ ಹಿರಿಯನೆದುರು ಹಿಡಿಯುವನು. ಅವನು ಯಜಮಾನನ ಕಾಲು ಮುಟ್ಟಿ ನಮಸ್ಕರಿಸಿ ಆ ಕೋವಿಯನ್ನು ತೆಗೆದುಕೊಳ್ಳುವನು. ಹೀಗೆಯೇ ಎಲ್ಲಾ ಆಯುಧಗಳನ್ನೂ ಉಳಿದ ಗಂಡಸರಲ್ಲಿ ಹಂಚುವನು.

ಎಲ್ಲರೂ ಊರ ಮೈದಾನಕ್ಕೆ ಹೋಗುವರು. ಅಲ್ಲಿ ಇತರ ಮನೆಗಳಿಂದ ಬಂದ ಪುರುಷರೊಡಗೂಡಿ ಎಲ್ಲರೂ ದೇವಸ್ಥಾನಕ್ಕೆ ಹೋಗಿ, ದೇವಸ್ಥಾನದ ಅರ್ಚಕನು ಗ್ರಾಮ ದೇವತೆ ಹಾಗೂ ಗ್ರಾಮದ ದೇವರಕಾಡಿನ ಬೇಟೆ ದೇವರಾದ ಅಯ್ಯಪ್ಪನ ಪೂಜೆ ಮಾಡಿ ಎಲ್ಲರಿಗೂ ತೀರ್ಥ-ಪ್ರಸಾದ ನೀಡುತ್ತಾರೆ. ಒಂದು ಎತ್ತರದ ಮರದಲ್ಲಿ ಎತ್ತರಕ್ಕೆ ಬೆಳೆದು ನಿಂತ ಕೊಂಬೆಗೆ ತೆಂಗಿನಕಾಯಿಗಳನ್ನು ಕಟ್ಟಿರುತ್ತಾರೆ. ಆ ಮರದ ಬುಡಕ್ಕೆ ಎಲ್ಲರೂ ಹೋಗುವರು. ಊರಿನ ತಕ್ಕನು (ಮುಖ್ಯಸ್ಥ) ಮೊದಲು ಒಂದು ತೆಂಗಿನಕಾಯಿಯ ಈಡಿಗೆ ಗುಂಡು ಹೊಡೆಯುವನು. ಬಳಿಕ ಒಬ್ಬೊಬ್ಬರಾಗಿ ಗುಂಡು ಹೊಡೆಯುವರು. ಗುಂಡು ಹೊಡೆದು ಕಾಯನ್ನು ಉರುಳಿಸಿದವರಿಗೆ ಸ್ವಲ್ಪ ಹಣವನ್ನು ಸಾಂಕೇತಿಕ ಬಹುಮಾನವನ್ನಾಗಿ ಕೊಡುವರು.  ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಬೇಟೆಯ ಸಾಂಕೇತಿಕವಾಗಿ ಈ ಪದ್ದತಿ ನಡೆಯುತ್ತದೆ.

 ಆ ನಂತರ ಓಟ, ಜಿಗಿತ, ಭಾರದ ಕಲ್ಲೆತ್ತುವದು ಮೊದಲಾದ ಕ್ರೀಡಾಸ್ಪರ್ಧೆಗಳು ನಡೆಯುತ್ತದೆ. ಇಂದಿಗೂ ಕೊಡವರು ತಮ್ಮ ಈ ಆಚರಣೆಯನ್ನು ವಿಧಿವತ್ತಾಗಿ ಆಚರಿಸುವುದು ಕಾಣಬಹುದು.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ