ಜನಪದ ಕಲೆಗಳಲ್ಲಿ ಗಂಡುಕಲೆ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮಿಸಲಾದ ಕಲೆ. ಆದರೆ ಇಂದು ಮಹಿಳೆಯರು ಕೂಡ ಡೊಳ್ಳು ಕುಣಿತದಲ್ಲಿ ಬಾಗಿಯಾಗುತ್ತಿದ್ದಾರೆ. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳೂ ಕುಣಿತ ತನ್ನ ವಿಶಿಷ್ಟವಾದ ನೃತ್ಯ ಶೈಲಿಗಳಿಂದ ಉಳಿದುಕೊಂಡು ಬಂದಿದೆ. ಡೊಳ್ಳಿನ ಹಿಂದೆ ಒಂದು ಕತೆ ಇದೆ. ಡೊಳ್ಳು ಸುರನೆಂಬ ರಕ್ಕಸ ತಪಸ್ಸಿನಿಂದ ಪರಶಿವನನ್ನು ಮೆಚ್ಚಿಸಿ ಪರಶಿವನು ತನ್ನ ಹೊಟ್ಟೆಯಲ್ಲಿಯೆ ನೆಲೆಸಬೇಕೆಂದು ವರಪಡೆದ. ಅದರಂತೆ ಶಿವನು ಗಂಗೆ, ಗೌರಿಯನ್ನು ಆತ ತೊರೆದು ರಕ್ಕಸನ ಹೊಟ್ಟೆಯನ್ನು ಸೇರಿದ. ಶಿವನಿಲ್ಲದ ಕೈಲಾಸ ಕಳೆಗುಂದಿತು. ದುಃಖಿತರಾದ ಶಿವಗಣಗಳು ವಿಷ್ಣುವಿನ ಮೊರೆಹೊಕ್ಕರು ವಿಷ್ಣುವಿನ ನಿರ್ದೇಶನದಂತೆ ಪಂಚ ರಾತ್ರಿಗಳು ಸೇರುವುದು. ಶಿವನು ಕೋಪದಿಂದ ಕಣ್ಣು ತೆರೆದರೆ ಪ್ರಳಯವೆ ಉಂಟಾಗುವುದೆಂದು ಅರಿತ ವಿಷ್ಣು ಡೊಳ್ಳಾಸುರನ ಹೊಟ್ಟಯನ್ನೆ ವಾದ್ಯವಿಶೇಷವಾಗಿ ಮಾಡಿಕೊಂಡು ಅವನ ಮೂಳೆಗಳಿಂದ ಡೊಳ್ಳು ಬಾರಿಸಲು ಆರಂಬಿಸಿದ. ಶಿವನು ಆ ವಾದ್ಯದ ದನಿಗೆ ಮಾರು ಹೋಗಿ ಲಾಸ್ಯದಲ್ಲಿ ತೊಡಗಿದ. ಈ ವೇಳೆಗೆ ತೊಡೆಯ ಗೌರಿ, ಜಡೆಯ ಗಂಗೆಯರು ಬಂದು ಶಿವನನ್ನು ಸೇರಿದರು. ಶಿವ ಸುಪ್ರಿತನಾದ. ಮುಂದೆ ಡೊಳ್ಳು ಶಿವಸ್ತುತಿಯ ವಿಶೇಷ ವಾದ್ಯವಾಯಿತು. ಡೊಳ್ಳು ಮರ ಮತ್ತು ಚರ್ಮದಿಂದ ಮಾಡಿದ ಒಂದು ದೊಡ್ಡ ಆಕಾರದ ವಾದ್ಯವನ್ನು ಡೊಳ್ಳು ಎನ್ನಬಹುದು. ತಾಳೆ ಅಥವಾ ಹಗುರವಾದ ಮರದಿಂದ ಎರಡುವರೆ ಇಂದ ಮೂರುವರೆ ಅಡಿ ಉದ್ದದ ಹಾಗೂ ಎರಡು ಅಡಿ ವ್ಯಾಸವಿರುವ ಪಿಪಾಯಿ ಆಕಾರದ ಡೊಳ್ಳನ್ನು ಸಿದ್ದಪಡಿಸಿರುತ್ತಾರೆ. ಇದರ ಎಡಬಾಗಕ್ಕೆ ಆಡಿನ ಚರ್ಮವನ್ನು ಬಲಬಾಕ್ಕೆ ಕುರಿಯ ಚರ್ಮವನ್ನು ಬಿಗಿಯಾಗಿ ಬಿಗಿಯುತ್ತಾರೆ. ಬಳಿಕ ಡೊಳ್ಳುನ್ನು ಬಡಿಯಲು ಬಳಸುವುದು ಸುಮಾರು ಒಂದುವರೆ ಅಡಿ ಉದ್ದದ ಬಿದಿರು ಕೋಲು. ಇದಕ್ಕೆ 'ಗಣಿ' ಎಂದು ಕರೆಯುತ್ತಾರೆ. ಡೊಳ್ಳು ಕುಣಿತದ ತಂಡದಲ್ಲಿ ಸಾಮಾನ್ಯವಾಗಿ ನಾಲ್ಕು ಜನರಿರುತ್ತಾರೆ ಕೆಲವು ಬಾರಿ ಇಷ್ಟೆ ಜನರಿರಬೇಕು ಎಂಬ ನಿಯಮವಿಲ್ಲ. ಹಿನ್ನೆಲೆಯಲ್ಲಿ ತಾಳ, ತಪ್ಪಡಿ, ಕಹಳೆ, ಜಾಗಟೆ, ಕೊಳಲುಗಳನ್ನು ಬಳಸುತ್ತಾರೆ. ಪದ ಹೇಳಿಕೊಂಡು ಡೊಳ್ಳನ್ನು ಬಾರಿಸುತ್ತಾರೆ. ಕುಳಿತು ಭಾರಿಸುವುದು, ಲಾಗ ಹಾಕುವುದು, ಹಾರಿ ಬಾರಿಸುವುದು, ಮಂಡಿ ಬಡಿತ, ಮರಗಾಲು ಬಡಿತ, ಗಾಡಿ ಚಕ್ರದ ಬಡಿತ ಹೀಗೆ ಹಲವಾರು ರೀತಿಯ ಡೊಳ್ಳು ಕುಣಿತವಿದೆ. ಇಂತಹ ಜನಪದ ಕಲೆ ಸವಿ ಮುಂದಿನ ಪೀಳಿಗೆಗೂ ಪಸರಿಸಬೇಕೆನ್ನುವುದು ಕರಾವಳಿ ತರಂಗಿಣಿ ಯ ಆಶಯ.
✍ ಲಲಿತಶ್ರೀ ಪ್ರೀತಂ ರೈ