image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಲ್ಯಾಣಿ ಚಾಲುಕ್ಯರಿಂದ ನಿರ್ಮಿತವಾಗಿ ಬಳಪದ ಕಲ್ಲಿನಿಂದ ರೂಪುಗೊಂಡ ಭೀಮೇಶ್ವರದ ಬಗ್ಗೆ ತಿಳಿಯೋಣವೇ...?

ಕಲ್ಯಾಣಿ ಚಾಲುಕ್ಯರಿಂದ ನಿರ್ಮಿತವಾಗಿ ಬಳಪದ ಕಲ್ಲಿನಿಂದ ರೂಪುಗೊಂಡ ಭೀಮೇಶ್ವರದ ಬಗ್ಗೆ ತಿಳಿಯೋಣವೇ...?

ಚಾಲುಕ್ಯರ ಕಾಲದ ಹಲವಾರು ದೇವಾಲಯಗಳು ಅದ್ಭುತ ಕೆತ್ತನೆಯಿಂದ ಜಗತ್ಪ್ರಸಿದ್ಧಿಯಾಗಿದ್ದು, ಇಂದಿಗೂ ಕಣ್ಮನ ಸೆಳೆಯುತ್ತಿದೆ. ಅಂತಹ ದೇವಸ್ಥಾನಗಳಲ್ಲೊಂದು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ನೀಲಗುಂದ ಗ್ರಾಮದಲ್ಲಿರುವ "ಬೀಮೇಶ್ವರ" ದೇವಾಲಯ. ಬಳಪದ ಕಲ್ಲಿನಿಂದ ರೂಪುಗೊಂಡ ಈ ದೇಗುಲ ಅಪರೂಪದ ವಾಸ್ತುಶಿಲ್ಪದಿಂದ ಕೂಡಿದೆ. ವಿಶಾಲವಾದ ಸುಂದರವಾದ ಕೆರೆಯ ದಡದಲ್ಲಿರುವ ಕಾರಣ ಈ ಮಂದಿರವು ಮತ್ತಷ್ಟು ಆಕರ್ಷಕವಾಗಿದೆ. ಕಲ್ಯಾಣಿಯ ಚಾಲುಕ್ಯರಿಂದ ನಿರ್ಮಿತಗೊಂಡಿರುವ ಈ ದೇವಸ್ಥಾನ ಹೊಯ್ಸಳರಿಂದ ಅಭಿವೃದ್ಧಿಗೊಂಡಿತು ಎನ್ನಲಾಗುತ್ತದೆ. ಈಗ ಈ ದೇವಸ್ಥಾನ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದೆ. ಅಮೃತಕೆರೆಯ ದಿಬ್ಬದಲ್ಲಿರುವ ಈ ದೇವಾಲಯದಿಂದ ಕೆರೆಗೆ ಇಳಿಯಲು ನಾಲ್ಕೈದು ಮೆಟ್ಟಿಲುಗಳಷ್ಟೇ ಇದೆ.

ಹನ್ನೊಂದನೇ ಶತಮಾನದ ಕೊನೆಯ ಹಂತದಲ್ಲಿ ನಿರ್ಮಿತವಾದ ಈ ಭೀಮೇಶ್ವರ ದೇವಾಲಯ ತ್ರಿಕೂಟಾಚಲವಾಗಿದ್ದು ವೇಸರ ಶೈಲಿಯಲ್ಲಿದೆ. ಪೂರ್ವ-ಪಶ್ಚಿಮಾಭಿಮುಖವಾಗಿದ್ದು ಹೊಯ್ಸಳ ಶೈಲಿಯ ಪ್ರಭಾವವಿರುವ ಈ ಸುಂದರ ದೇವಾಲಯವು ತಳವಿನ್ಯಾಸದಲ್ಲಿ ಪಶ್ಚಿಮ ಉತ್ತರ ಮತ್ತು ದಕ್ಷಿಣಕ್ಕೆ 3 ಗರ್ಭಗೃಹಗಳನ್ನು ಹೊಂದಿದೆ.ಪ್ರತಿಯೊಂದು ಗರ್ಭಗೃಹವು ಅಂತರಾಳವನ್ನು ಹೊಂದಿದ್ದು ಎಲ್ಲವೂ ಸಭಾಮಂಟಪಕ್ಕೆ ತೆರೆದುಕೊಂಡಿವೆ. ಮುಖಮಂಟಪದ ಮುಂಭಾಗದಲ್ಲಿ ಪೂರ್ವಕ್ಕೆ ಸೂರ್ಯನಿಗೆ ಪ್ರತ್ಯೇಕ ಗುಡಿಯಿದೆ. ಆದರೆ ಗರ್ಭಗುಡಿಯಲ್ಲಿ ಮೂರ್ತಿಯಿಲ್ಲ. ಹೀಗಾಗಿ 4 ಗರ್ಭಗೃಹಗಳನ್ನು ಇಲ್ಲಿ ಕಾಣಬಹುದು.

ಸಭಾಮಂಟಪವು ನಯವಾದ ಹಾಗೂ ಸುಂದರ ವಿನ್ಯಾಸ ಹೊಂದಿರುವ ನಾಲ್ಕು ಸ್ಥಂಭಗಳಿಂದ ಮಾಳಿಗೆಯು ಆಧಾರಗೊಂಡಿದೆ. ಸಭಾಮಂಟಪದ ಪೂರ್ವಕ್ಕೆ ಮುಖಮಂಟಪವಿದ್ದು ಅದಕ್ಕೆ ಎರಡು ಪಾಶ್ವಗಳಲ್ಲೂ ಸೋಪಾನಗಳಿವೆ. ದೇವಾಲಯದ ಹೊರಭಿತ್ತಿಯಲ್ಲಿ ಅರ್ಧಸ್ಥಂಭಗಳನ್ನು ನಿರ್ಮಿಸಿ ಅವುಗಳ ಮೇಲೆ ವೇಸರ ಮತ್ತು ದ್ರಾವಿಡ ಶೈಲಿಯ ಕಿರು ಗೋಪುರಗಳನ್ನು ನಿರ್ಮಿಸಲಾಗಿದೆ. ಪಶ್ಚಿಮದ ಮುಖ್ಯ ಗರ್ಭಗೃಹದ ಮೇಲಿನ ಗೋಪುರದ ಮೇಲೆ ವೇಸರ ಶೈಲಿಯ ಶ್ರೇಣೀಕೃತ ಕಿರು ಗೋಪುರಗಳಿದ್ದು ತ್ರಿಕಳ ವಿಮಾನವಿದೆ. ಪ್ರತಿಯೊಂದು ತಳವೂ ಶಾಲಾ, ಕೂಟಾ, ಪಂಜರವನ್ನು ಹೊಂದಿದ್ದು ಪ್ರತಿಶಾಲಾದಲ್ಲಿ ಶಿವ ಮತ್ತು ನಟರಾಜ ಮುಂತಾದ ಮೂರ್ತಿಗಳನ್ನು ಕಾಣಬಹುದು.

ಗರ್ಭಗೃಹದ ದ್ವಾರಗಳು ಅಲಂಕೃತ ಪಂಚಶಾಖೆಗಳನ್ನು ಹೊಂದಿದ್ದು ತಳಭಾಗದಇಕ್ಕೆಲಗಳಲ್ಲಿ ಶೈವ ದ್ವಾರಪಾಲರು ಮತ್ತು ಚಾಮರಧಾರಿಣಿಯರನ್ನು ಕಾಣಬಹುದು. ಸಭಾಮಂಟಪದಲ್ಲಿ ನಯಗೊಳಿಸಿದ ನಾಲ್ಕು ಅಲಂಕೃತ ಸ್ಥಂಭಗಳಿದ್ದು, ಮಧ್ಯ ಭಾಗದಲ್ಲಿ ವೇದಿಕೆಯಿದೆ. ದೇವಾಲಯದ ಒಳ ಆವರಣದಲ್ಲಿ ದೇವಕೋಷ್ಟಕಗಳಿದ್ದು ಅವುಗಳಲ್ಲಿ ಗಣೇಶ, ಮಹಿಷಮರ್ಧಿನಿ ಸಪ್ತ ಮಾತೃಕೆಯರು ಮತ್ತು ಯಕ್ಷ ಮೂರ್ತಿಗಳಿವೆ.  ಶ್ರಾವಣ ಮಾಸದಲ್ಲಿ ಭಕ್ತಾದಿಗಳು ಹೆಚ್ಚಾಗಿ ಇಲ್ಲಿಗೆ ಬರುತ್ತಾರೆ. ಇಂತಹ ಭೀಮೇಶ್ವರ ದೇವಾಲಯಕ್ಕೆ ಒಮ್ಮೆ ಬೇಟಿ ನೀಡಿ ಮೈಮನವನ್ನು ಪಾವನಗೊಳಿಸಿಕೊಳ್ಳಲು ಮರೆಯದಿರಿ

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ