ಅದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ಭೋಗ ನಂದೀಶ್ವರ ದೇವಾಲಯವು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದ ನಂದಿ ಬೆಟ್ಟದ ಕೆಳಗೆ ಇದೆ. ಇಲ್ಲಿಗೆ ಬೆಂಗಳೂರಿನಿಂದ 60 ಕಿ.ಮಿ ದೂರದಲ್ಲಿದೆ. ಸುಂದರವಾದ ಭೋಗನಂದೀಶ್ವರ ದೇವಾಲಯವು ಅತ್ಯಂತ ಪುರಾತನವಾದ ದೇವಾಲಯವಾಗಿದ್ದು, 9ನೇ ಶತಮಾನದಲ್ಲಿ ನಲಂಬ ವಂಶದವರು ನಿರ್ಮಾಣ ಮಾಡಿದ್ದಾರೆ. ವಿಶೇಷವೇನೆಂದರೆ ಈ ದೇವಾಲಯವು ಗಂಗಾ, ಚೋಳ, ರಾಷ್ಟ್ರಕೂಟರು, ಹೊಯ್ಸಳ ಮತ್ತು ವಿಜಯನಗರ ರಾಜವಂಶಗಳಿಂದ ದೊಡ್ಡ ಕೊಡುಗೆಗಳನ್ನು ಪಡೆದುಕೊಂಡಿದೆ. ಈ ಭೋಗ ನಂದೀಶ್ವರ ದೇವಾಲಯದ ಪ್ರಮುಖವಾದ ಆಕರ್ಷಣೆ ಎಂದರೆ ವಸಂತ ಮಂಟಪ. ಸುಂದರವಾದ ಮಂಟಪವನ್ನು ಅರ್ಥನಾರೀಶ್ವರ ದೇವಾಲಯದ ಮುಂದೆ ನಿರ್ಮಾಣ ಮಾಡಲಾಗಿದ್ದು, ಹೊಯ್ಸಳರ ಕಾಲದಲ್ಲಿ ನಿರ್ಮಾಣ ಮಾಡಿದ ಕಲ್ಯಾಣ ಮಂಟಪದಲ್ಲಿ ಕಲಾತ್ಮಕವಾದ ಛಾವಣಿಗಳು, ಸೂಕ್ಷ್ಮವಾದ ಕೆತ್ತನೆಯ ಸ್ತಂಭಗಳನ್ನು ಕಾಣಬಹುದು.
ಈ ದೇವಾಲಯದಲ್ಲಿ ಶಿವ, ಪಾರ್ವತಿ, ವಿಷ್ಣು, ಮಹಾಲಕ್ಷ್ಮೀ, ಬ್ರಹ್ಮ, ಸರಸ್ವತಿ, ಸೂರ್ಯ ಮತ್ತು ಮಂಟಪದ ವಿವಿಧ ಮೂಲೆಗಳಲ್ಲಿ ಇನ್ನು ಹಲವಾರು ಸಂಕೀರ್ಣವಾದ ಕೆತ್ತನೆಗಳ ಚಿತ್ರಗಳು ಇಲ್ಲಿವೆ. ದೇವಾಲಯದ ಹೊರಗಿನ ಗೋಡೆಗಳ ಮೇಲೆ ಸಪ್ತ ಋಷಿಗಳ ಕೆತ್ತನೆಗಳು ದೇವಾಲಯಕ್ಕೆ ಮತ್ತಷ್ಟು ಸೊಬಗನ್ನು ಹೆಚ್ಚಿಸುತ್ತದೆ. ಭೋಗನಂದೀಶ್ವರ ದೇವಾಲಯಕ್ಕೆ ಎದುರಾಗಿ ದೊಡ್ಡ ನಂದಿಯು ಸಣ್ಣದಾದ ಮಂಟಪದಲ್ಲಿ ನೆಲೆಸಿದ್ದಾನೆ. ಮುಖ್ಯವಾದ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಾಲಯಕ್ಕೆ ಹೊಸದಾಗಿ ಮದುವೆಯಾದ ದಂಪತಿಗಳು ಭೇಟಿ ನೀಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗೆಯೇ ಹಾಗಾಗಿ ಇಲ್ಲಿಗೆ ಹಲವಾರು ದಂಪತಿಗಳು ಭೇಟಿ ನೀಡುತ್ತಾರೆ. ಭಾರತದ ಪುರಾತತ್ವ ಇಲಾಖೆ ಪ್ರಕಾರ ಈ ಶಿವನ ದೇವಾಲಯವನ್ನು ನಲಂಬಾ ರಾಜ ವಂಶದ ನಲಂಬಾದಿರಾಜ ಮತ್ತು ರಾಷ್ಟ್ರಕೂಟ ಚಕ್ರವರ್ತಿ ಗೋವಿಂದ III ಸ್ಥಾಪಿಸಲು ಶುರು ಮಾಡಿದರು. ಆನಂತರ ದೇವಾಲಯದ ಅಭಿವೃದ್ಧಿಯನ್ನು ನಲಂಬ ರಾಜವಂಶದ ನಂತರ ಬಂದ ರಾಜವಂಶದವರು ಗಂಗಾ ರಾಜವಂಶ, ಚೋಳ ರಾಜವಂಶ, ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯದವರು ಮಾಡತೊಡಗಿದರು.
ಮಧ್ಯಯುಗದ ನಂತರ ಈ ದೇವಾಲಯದ ಆಳ್ವಿಕೆಯನ್ನು ಚಿಕ್ಕಬಳ್ಳಾಪೂರ ಸ್ಥಳೀಯ ಮುಖ್ಯಸ್ಥರು ಮತ್ತು ಮೈಸೂರು ಸಾಮ್ರಾಜ್ಯದ ರಾಜರು ನಡೆಸಿದ್ದರು. 1799ನಲ್ಲಿ ಟಿಪ್ಪು ಸುಲ್ತಾನ್ ಮರಣದ ನಂತರ ದೇವಾಲಯದ ಆಳ್ವಿಕೆಯು ಬ್ರಿಟಿಷ್‌ರ ಸರ್ಕಾರಕ್ಕೆ ಸೇರಿಕೊಂಡಿತ್ತು. ಸ್ವಾತಂತ್ರದ ನಂತರ ಭಾರತದ ಪುರಾತತ್ವ ಇಲಾಖೆ ಮೂಲಕ ಈ ದೇವಾಲಯವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿ ರಕ್ಷಿಸಲಾಯಿತು.ದೇವಾಲಯದ ಸಂಕೀರ್ಣದಲ್ಲಿ ಎರಡು ದೇವಾಲಯಗಳಿದ್ದು, ಒಂದು ಅರುಣಾಚಲೇಶ್ವರ ದೇವಾಲಯ, ಈ ದೇವಾಲಯವು ದಕ್ಷಿಣ ದಿಕ್ಕಿನಲ್ಲಿದೆ. ಇದನ್ನು ತಲಕಾಡಿನ ಗಂಗಾ ರಾಜವಂಶದವರು ಸ್ಥಾಪಿಸಿದರು. ಮತ್ತೊಂದು ದೇವಾಲಯ ಭೋಗ ನಾಗೇಶ್ವರ ದೇವಾಲಯ. ಈ ದೇವಾಲಯವು ಉತ್ತರದ ದಿಕ್ಕಿನಲ್ಲಿದೆ. ಇದನ್ನು ಚೊಳಾ ರಾಜವಂಶದವರು ಸ್ಥಾಪಿಸಿದರು. ಇವೆಲ್ಲಾವುದರ ನಡುವೆ "ಉಮಾ-ಮಹೇಶ್ವರ" ದೇವಾಲಯವಿದೆ. ಕಪ್ಪು ಕಲ್ಲಿನ ಅಲಂಕೃತ ಸ್ತಂಭ ಗಳಿಂದ ಬೆಂಬಲಿಸಲ್ಪಟ್ಟ ಕಲ್ಯಾಣ ಮಂಟಪವು ಈ ದೇವಾಲಯವಾಗಿದೆ. ಕಾರ್ತಿಕ ಮಾಸ ಮತ್ತು ದೀಪಾವಳಿಯ ವಿಶೇಷ ಸಂದರ್ಭದಲ್ಲಿ ಪೂಜಾ ಕೈಂಕರ್ಯಗಳು ಬಹಳ ವಿಜೃಂಭಣೆಯಿಂದ ಕೂಡಿರುತ್ತದೆ. ನಮ್ಮ ಬದುಕಿನ 4 ಹಂತಗಳಾದ ಬಾಲ್ಯ, ಯೌವ್ವನ, ಮಧ್ಯ ವಯಸ್ಸು, ಮುಪ್ಪಿಗೆ ಅನುಗುಣವಾಗಿ ಇಲ್ಲಿ ದೇವತಾ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಬಾಲ್ಯ ಎಂದರೆ ಕಮಟೇಶ್ವರ, ಯವ್ವನ ಎಂದರೆ ಅರುಣಾಚಲೇಶ್ವರ, ಮಧ್ಯ ವಯಸ್ಸು ಎಂದರೆ ಭೋಗ ನಂದೀಶ್ವರ ಮತ್ತು ಪಾರ್ವತಿ ದೇವಿ ಹಾಗೆ ಮುಪ್ಪಿನ ಸಂಕೇತವಾಗಿ ಬೆಟ್ಟದ ಮೇಲೆ ಯೋಗ ನಂದೀಶ್ವರನನ್ನು ಸ್ಥಾಪಿಸಲಾಗಿದೆ. ಇಲ್ಲಿ ಲಿಂಗದ ರೂಪದಲ್ಲಿರುವ ಭೋಗ ನಂದೀಶ್ವರ ನೆಲೆಸಿರುವುದೇ ವಿಶಿಷ್ಟ ಈ ಸ್ವಾಮಿಯ ಹಿಂದೆ ಶ್ರೀಚಕ್ರವಿದೆ. ಈ ಪವಿತ್ರ ಸ್ಥಳಕ್ಕೆ ಒಮ್ಮೆ ಬೇಟಿ ನೀಡಲು ಮರೆಯದಿರಿ.
✍ ಲಲಿತಶ್ರೀ ಪ್ರೀತಂ ರೈ