image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತುಳುವರ ವಿಶೇಷ ಆಚರಣೆಗಳಲ್ಲಿ ಒಂದಾದ 'ಆಟಿಕಳೆಂಜ' ನ ಬಗ್ಗೆ ನಿಮಗೆಷ್ಟು ತಿಳಿದಿದೆ....

ತುಳುವರ ವಿಶೇಷ ಆಚರಣೆಗಳಲ್ಲಿ ಒಂದಾದ 'ಆಟಿಕಳೆಂಜ' ನ ಬಗ್ಗೆ ನಿಮಗೆಷ್ಟು ತಿಳಿದಿದೆ....

ತುಳುನಾಡು ಹಲವಾರು ಜನಪದ ಆಚರಣೆ ಗಳಿಗೆ ಪ್ರಸಿದ್ಧಿಯಾಗಿದೆ. ಇಲ್ಲಿನ ಜನಪದ ಆಚರಣೆಗಳು, ಸಂಸ್ಕೃತಿ, ಸಂಪ್ರದಾಯವೇ ವಿಭಿನ್ನ. ಅಂತಹ ಆಚರಣೆಗಳಲ್ಲಿ "ಆಟಿ ಕಳೆಂಜ' ಕೂಡ ಒಂದು. ಆಟಿ ಮಾಸದಲ್ಲಿ ವಾತಾವರಣ ಮತ್ತು ಪ್ರಕೃತಿಯಲ್ಲಾಗುವ ಬದಲಾವಣೆಯ ಸಂಕೇತವಾಗಿಯೇ ಹುಟ್ಟಿಕೊಂಡ ಒಂದು ನಂಬಿಕೆಯೇ ಆಟಿ ಕಳೆಂಜ ಎನ್ನಬಹುದು.  ಆಟಿ ಮಾಸದಲ್ಲಿ ಕರಾವಳಿ ಜಿಲ್ಲೆಯಲ್ಲಿ ಯಾವುದೇ ಹಬ್ಬ, ಶುಭ ಕಾರ್ಯಗಳನ್ನು ಹಮ್ಮಿಕೊಳ್ಳುವುದಿಲ್ಲ. ಕಳೆಂಜ ಭೇಟಿ ನೀಡುವ ಪ್ರತಿ ಮನೆಯವರು ಅಕ್ಕಿ, ಫಲವಸ್ತುಗಳು, ತೆಂಗಿನ ಕಾಯಿ, ಎಲೆ-ಅಡಿಕೆ, ಹಣವನ್ನು ದಾನವಾಗಿ ನೀಡುತ್ತಾರೆ. ಸಾಮಾನ್ಯವಾಗಿ ನಲಿಕೆ ಸಮುದಾಯದವರಿಗೆ ಊರಿನಲ್ಲಿ ನಡೆಯುವ ನೇಮ ಕೋಲಗಳಲ್ಲಿ ದೈವ ನರ್ತನವೇ ಕಾಯಕವಾಗಿರುತ್ತದೆ. ಆಟಿ ತಿಂಗಳಲ್ಲಿ ಅಥವಾ ಮಳೆಗಾಲದಲ್ಲಿ  ತುಳುನಾಡಿನಲ್ಲಿ ನೇಮ ಕೊಲಗಳಿರುವುದಿಲ್ಲ. ಹಾಗಾಗಿ ಆಟಿಕಳೆಂಜ ನರ್ತನ ಅವರ ಅದಾಯದ ಮೂಲವೂ ಆಗಿರುತ್ತದೆ. 

ಆಟಿ ಅಂದರೆ ಆಷಾಡ, ಕಳೆಂಜ ಅಂದರೆ ಕಳೆಯುವವನು ಎಂದರ್ಥ. ದುಷ್ಟ ಶಕ್ತಿಯನ್ನು ಹೋಗಲಾಡಿಸುವ ಒಂದು ಆಶಯವನ್ನು ಈ ನೃತ್ಯದ ಮೂಲಕ ಪಾಡ್ದನ ಹೇಳುತ್ತಾ ಪ್ರಸ್ತುತ ಪಡಿಸುತ್ತಾರೆ. ಈ ಸಾಂಪ್ರದಾಯಿಕ ನೃತ್ಯವನ್ನು ನಲಿಕೆ ಸಮುದಾಯದವರು ಮಾಡುತ್ತಾರೆ. ಅವರು ಆಟಿ ಕಳೆಂಜದ ವೇಷವನ್ನು ಹಾಕಿ ಮನೆ ಮನೆಗೆ ಹೋಗುವುದರಿಂದ ಮನೆಯನ್ನು ಸೇರಿಕೊಂಡಿರುವ ಮಾರಿ (ದುಷ್ಟ ಶಕ್ತಿ) ಓಡಿಹೋಗುತ್ತದೆ ಎನ್ನುವುದು ತುಳುವರ ನಂಬಿಕೆ. ಕಳೆಂಜದ ವೇಷ ಧರಿಸುವವರು ತೆಂಗಿನ ಎಳೆಯ ಗರಿಗಳಿಂದ ಹೆಣೆದು ಮಾಡಿದ ಉಡುಗೆ, ಕಾಲ್ಗೆಜ್ಜೆ, ಗಾಢ ವರ್ಣದ ಕೆಂಪು ಬಟ್ಟೆ, ಅಡಿಕೆ ಮರದ ಹಾಳೆಯಿಂದ ಮಾಡಿದ ಟೋಪಿಯನ್ನೇ ವೇಷ ಕ್ಕೆ ಬಳಸಿಕೊಳ್ಳುತ್ತಾರೆ. ಮುಖಕ್ಕೆ ಬಿಳಿ ಬಣ್ಣವನ್ನು ಬಳಿದುಕೊಂಡು ಹೂವು-ಎಲೆಗಳಿಂದ ಅಲಂಕರಿಸಿಕೊಳ್ಳುತ್ತಾರೆ. ತೆಂಗಿನ ಗರಿಯಿಂದ ಮಾಡಿದ ಕೊಡೆಯನ್ನು ತಿರುಗಿಸುತ್ತಾ ಮನೆ ಮನೆಗೆ ತೆರಳಿ ಅಲ್ಲಿ ನೃತ್ಯ ಮಾಡಿದರೆ ಮಕ್ಕಳಿಗೆ ಅದೇನೋ ಖುಷಿ. ಇವರ ಜೊತೆ ಪಾಡ್ದನ ಹೇಳಲು ಒಬ್ಬ ಸಹಾಯಕ ಜತೆಗಿರುತ್ತಾನೆ. ಹೆಚ್ಚಾಗಿ ಮನೆಯ ಹೆಂಗಸರೇ ಆಗಿರುತ್ತಾರೆ.  ತೆಂಬರೆಯನ್ನು ಬಾರಿಸುತ್ತಾ ಪಾಡ್ದನದ ಮೂಲಕ ಕಳೆಂಜದ ಕಥೆಯನ್ನು ವಿವರಿಸುತ್ತಾ ಸಾಗುತ್ತಾನೆ. ಕಳೆಂಜ ವೇಷಧಾರಿ ನೃತ್ಯ ಕೂಡ ಮಾಡುತ್ತಾನೆ. ಈ ರೀತಿ ಆಟಿ ಕಳೆಂಜ ಮನೆಗೆ ಸೋಕಿದ ದುಷ್ಟ ಶಕ್ತಿಯನ್ನು ಕಳೆಯುತ್ತಾನೆ ಎನ್ನುವುದು ದೃಡವಾದ ನಂಬಿಕೆ. ಕಳೆಂಜನಿಗೆ ದೈವದ ನೆಲೆ ಇಲ್ಲದಿರುವುದರಿಂದ ಗುಡಿಗಳನ್ನು ಕಟ್ಟಿಸಿ ಆರಾಧಿಸುವ ಕ್ರಮ ಇಲ್ಲ. ಆಷಾಢ ತಿಂಗಳಲ್ಲಿ ನಲಿಕೆಯವರು ಕಳೆಂಜದ ವೇಷ ಹಾಕಿ ಕಳೆಂಜದ ಇರುವಿಕೆಯನ್ನು ಪ್ರಸ್ತುತ ಪಡಿಸುತ್ತಾರೆ. ಇಂದಿನ‌ ಆದುನಿಕ ಯುಗದಲ್ಲಿ ಇಂತಹ ಜನಪದ ಕಲೆಗಳು ನಶಿಸುತ್ತಾ ಬಂದಿರುವುದು ವಿಷಾದನೀಯ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ