image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪೂರ್ವಜರ ಆತ್ಮದ ಶಾಂತಿಗಾಗಿ ಮಾಡುವ ಶ್ರಾದ್ಧ ಕಾರ್ಯಗಳಲ್ಲಿ ಒಂದಾದ 'ಭರಣಿ ಶ್ರಾದ್ಧ'ದ ಮಹತ್ವ ತಿಳಿದುಕೊಳ್ಳೋಣ...

ಪೂರ್ವಜರ ಆತ್ಮದ ಶಾಂತಿಗಾಗಿ ಮಾಡುವ ಶ್ರಾದ್ಧ ಕಾರ್ಯಗಳಲ್ಲಿ ಒಂದಾದ 'ಭರಣಿ ಶ್ರಾದ್ಧ'ದ ಮಹತ್ವ ತಿಳಿದುಕೊಳ್ಳೋಣ...

ಹಿಂದೂ ಧರ್ಮದಲ್ಲಿ, ಪೂರ್ವಜರ ಋಣವನ್ನು ತೀರಿಸುವುದು ಪ್ರಮುಖ ಕರ್ತವ್ಯವೆಂದು ಪರಿಗಣಿಸಲಾಗುತ್ತದೆ. ಶ್ರಾದ್ಧವು ಈ ಋಣವನ್ನು ತೀರಿಸಲು ಒಂದು ಮಾರ್ಗವಾಗಿದ್ದು, ಶ್ರಾದ್ಧ ಕರ್ಮವು ಮೃತರ ಆತ್ಮಕ್ಕೆ ಶಾಂತಿ ಮತ್ತು ಮುಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಇಂತಹ ಶ್ರಾದ್ಧ ಕರ್ಮ ಮಾಡುವಾಗ ಹಲವಾರು ವಿದಗಳಿವೆ. ಅವುಗಳಲ್ಲಿ  ಮೊದಲಿಗೆ "ಏಕಾದಶ ಶ್ರಾದ್ಧ" ಎಂದರೆ ಮೃತರಾದ ಹನ್ನೊಂದನೇ ದಿನ ಮಾಡುವ ಶ್ರಾದ್ಧಾ ಕಾರ್ಯ. ಎರಡನೆಯದು "ದಶೋದಕ" ಶ್ರಾದ್ಧ ಅಂದರೆ ಹನ್ನೆರಡನೇ ದಿನ ಮಾಡುವ ಶ್ರಾದ್ಧ. ಮೂರನೆಯದೇ "ಮಾಸಿಕ ಶ್ರಾದ್ಧ", ಇದು ಪ್ರತಿ ತಿಂಗಳ ಅಮಾವಾಸ್ಯೆಯಂದು ಮಾಡುವ ಶ್ರಾದ್ಧ. ಇನ್ನು "ವಾರ್ಷಿಕ ಶ್ರಾದ್ಧ"ವು ಮೃತರಾದ ದಿನಾಂಕದಂದು ಪ್ರತಿ ವರ್ಷ ಆಚರಿಸುವ ಶ್ರಾದ್ಧ ಕಾರ್ಯ. "ನವ ಶ್ರಾದ್ಧ"ವು ಒಂಬತ್ತು ದಿನಗಳ ಕಾಲ ಆಚರಿಸುವ ಶ್ರಾದ್ಧ. "ಪಿತೃಪಕ್ಷ" ಶ್ರಾದ್ಧವನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಶ್ರಾದ್ಧವಾಗಿದ್ದು, ಸಾಮಾನ್ಯವಾಗಿ ಇದನ್ನು ಆಚರಿಸುತ್ತಾರೆ.

ಇದರೊಂದಿಗೆ "ಭರಣಿ ಶ್ರಾದ್ಧ"ವು ಪಿತೃಪಕ್ಷದ ಸಮಯದ ಒಂದು ಶುಭ ಆಚರಣೆಯಾಗಿದ್ದು, ಈ ದಿನ ಮೃತರ ಆತ್ಮಕ್ಕೆ ಶಾಶ್ವತ ಶಾಂತಿಯನ್ನು ನೀಡುವುದೆಂಬುದು ಜನರ ನಂಬಿಕೆ. ಸಾಮಾನ್ಯವಾಗಿ ಕಾಶಿ, ಗಯಾ ಮತ್ತು ರಾಮೇಶ್ವರದಲ್ಲಿ ಭರಣಿ ಶ್ರಾದ್ಧವನ್ನು ಮಾಡುತ್ತಾರೆ. ಭರಣಿ ನಕ್ಷತ್ರ ಶ್ರಾದ್ಧವನ್ನು ವ್ಯಕ್ತಿಯ ಮರಣದ ನಂತರ ಒಂದು ಬಾರಿ ಮಾಡಲಾಗುತ್ತದೆ. ಈ ಆಚರಣೆಯನ್ನು ಅತ್ಯಂತ ಮಂಗಳಕರ ಮತ್ತು ಮಹತ್ವಪೂರ್ಣವೆಂದು ಪರಿಗಣಿಸಲಾಗಿದೆ. ವಿಶೇಷವಾಗಿ ಕುಟುಂಬದ ಪುರುಷ ಮುಖ್ಯಸ್ಥರು ಮೃತ ಆತ್ಮದ ತೃಪ್ತಿ ಮತ್ತು ಮುಕ್ತಿಗಾಗಿ ಹಲವಾರು ಪೂಜಾ ಕೈಂಕರ್ಯಗಳನ್ನು ಪುರೋಹಿತರ ಮಾರ್ಗ ದರ್ಶನದಲ್ಲಿ ನೆರವೇರಿಸುತ್ತಾರೆ.

ಭರಣಿ ಶ್ರಾದ್ಧ ಮಾಡುವ ವ್ಯಕ್ತಿ ಇಂದ್ರಿಯಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳಬೇಕು ಎನ್ನುವುದು ನಿಯಮ. ತರ್ಪಣ ಮುಗಿದ ನಂತರ ಬ್ರಾಹ್ಮಣರಿಗೆ ಸಿಹಿ ತಿಂಡಿ, ಬಟ್ಟೆ, ದಕ್ಷಿಣೆಯನ್ನು ನೀಡುವುದು ವಾಡಿಕೆ. ಭರಣಿ ಶ್ರಾದ್ಧದ ದಿನ ಕಾಗೆಗಳಿಗೆ ಅಥವಾ ಹಸುಗಳಿಗೆ  ಆಹಾರವನ್ನು ನೀಡಬೇಕು. ಭರಣಿ ಶ್ರಾದ್ಧ ವಿಧಿಗಳನ್ನು ಧಾರ್ಮಿಕವಾಗಿ ಮತ್ತು ಪೂರ್ಣಭಕ್ತಿಯಿಂದ ನೆರವೇರಿಸುವ ಮೂಲಕ, ಮುಕ್ತಿ ಪಡೆದ ಆತ್ಮಕ್ಕೆ ಶಾಂತಿಯನ್ನು ನೀಡುವ ಮೂಲಕ, ಅವರು ತಮ್ಮ ಸಂತತಿಯನ್ನು ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ. ಭರಣಿ ಶ್ರಾದ್ಧದ ಪ್ರಾಮುಖ್ಯತೆಮತ್ತು ಶ್ರಾದ್ಧ ಪೂಜೆಯ ಇತರ ರೂಪಗಳನ್ನು 'ಅಗ್ನಿ ಪುರಾಣ', 'ಗರುಡ ಪುರಾಣ' ಮುಂತಾದ ಹಲವಾರು ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಭರಣಿ ಶ್ರಾದ್ಧಪಿತೃ ಪಕ್ಷದ ಪ್ರಮುಖ ದಿನವಾಗಿದ್ದು ಇದನ್ನು 'ಮಹಾ ಭರಣಿ ಶ್ರಾದ್ಧ' ಎಂದೂ ಕರೆಯುತ್ತಾರೆ. ಏಕೆಂದರೆ ಭರಣಿ ನಕ್ಷತ್ರವನ್ನು ಯಮದೇವನು ಆಳುತ್ತಾನೆ, ಅವನು ಮೃತ್ಯುದೇವತೆ. ಭರಣಿ ಶ್ರಾದ್ಧದ ಪ್ರಾಮುಖ್ಯತೆ ವಿಷ್ಣುಪಾದದ ಶ್ರಾದ್ದದಂತೆಯೇ ಇದೆ ಎಂದು ಹೇಳಲಾಗಿದೆ. 

✍ ಲಲಿತಶ್ರೀ ಪೀತಂ ರೈ

Category
ಕರಾವಳಿ ತರಂಗಿಣಿ