image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷನು ಯಜ್ಜ ಮಾಡಿದ ಸ್ಥಳವೆನ್ನಲಾಗುವ 'ಕೊಟ್ಟಿಯೂರು' ದೇವಾಲಯದ ವೈಶಾಖ ಮಹೋತ್ಸವದ ಹಿನ್ನಲೆ ಮತ್ತು ಆಚರಣೆಯ ಬಗ್ಗೆ ತಿಳಿದುಕೊಳ್ಳೋಣ...

ದಕ್ಷನು ಯಜ್ಜ ಮಾಡಿದ ಸ್ಥಳವೆನ್ನಲಾಗುವ 'ಕೊಟ್ಟಿಯೂರು' ದೇವಾಲಯದ ವೈಶಾಖ ಮಹೋತ್ಸವದ ಹಿನ್ನಲೆ ಮತ್ತು ಆಚರಣೆಯ ಬಗ್ಗೆ ತಿಳಿದುಕೊಳ್ಳೋಣ...

ಕೇರಳದ ಕಣ್ಣೂರಿನ ಕೊಟ್ಟಿಯೂರಿನಲ್ಲಿರುವ “ವಡಕ್ಕೇಶ್ವರಂ” ದೇವಾಲಯವನ್ನು ಕೆಲವು ಸ್ಥಳೀಯ ಜನರು ಈ ದೇವಾಲಯವನ್ನು “ಇಕ್ಕರೆ ಕೊಟ್ಟಿಯೂರು” ಎಂದು ಕರೆಯುತ್ತಾರೆ. ಕೊಟ್ಟಿಯೂರಿನಲ್ಲಿ ಎರಡು ದೇವಾಲಯಗಳಿದ್ದು, ಒಂದು ವಾವಲಿ ನದಿಯ ಪಶ್ಚಿಮ ದಂಡೆಯಲ್ಲಿ ಮತ್ತು ಇನ್ನೊಂದು ಪೂರ್ವ ದಂಡೆಯಲ್ಲಿದೆ. ಪೂರ್ವ ದಂಡೆಯಲ್ಲಿರುವ ದೇವಾಲಯ 'ಕಿಳಕ್ಕೇಶ್ವರಂ' ಅಥವಾ ಅಕ್ಕರೆ ಕೊಟ್ಟಿಯೂರು. ಇದು ತಾತ್ಕಾಲಿಕ  ಆಶ್ರಮ,  ವೈಶಾಖ ಮಹೋತ್ಸವದ ಸಮಯದಲ್ಲಿ ಮಾತ್ರ ತೆರೆಯಲ್ಪಡುತ್ತದೆ. ನದಿಯ ಪಶ್ಚಿಮ ದಂಡೆಯಲ್ಲಿರುವ ವಡಕ್ಕೇಶ್ವರಂ ಅಥವಾ ಇಕ್ಕರೆ ಕೊಟ್ಟಿಯೂರು ಇತರ ಎಲ್ಲಾ ದೇವಾಲಯಗಳಂತೆ ಶಾಶ್ವತ ದೇವಾಲಯ ಸಂಕೀರ್ಣವಾಗಿದೆ. ಇದು ವೈಶಾಖ ಹಬ್ಬದ 27 ದಿನಗಳನ್ನು ಹೊರತುಪಡಿಸಿ ವರ್ಷವಿಡೀ ತೆರೆದಿರುತ್ತದೆ. ಈ ದೇವಾಲಯವು ಸುಮಾರು 80 ಎಕರೆಗಳನ್ನು ಒಳಗೊಂಡಿರುವ ದಟ್ಟವಾದ ಪವಿತ್ರ ಅರಣ್ಯ ಪ್ರದೇಶದಲ್ಲಿದೆ. ನದಿಯ ಪೂರ್ವ ದಂಡೆಯಲ್ಲಿರುವ ದೇವಾಲಯವಾದ ಅಕ್ಕರೆ ಕೊಟ್ಟಿಯೂರು ದಕ್ಷ ಯಾಗದ ಸ್ಥಳವಾಗಿತ್ತು ಎಂದು ಪುರಾಣ ಹೇಳುತ್ತದೆ. ಕೊಟ್ಟಿಯೂರು ಶಕ್ತಿದೇವತೆಯ ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ . ಭಾರತದಲ್ಲಿ ಸತಿ ದೇವಿಗೆ ಕೆಲವೇ ದೇವಾಲಯಗಳಿವೆ, ಅವುಗಳಲ್ಲಿ ಕೊಟ್ಟಿಯೂರು ಕೂಡ ಒಂದು.  ಸ್ವಯಂಭೂ ಲಿಂಗದ ಪಕ್ಕದಲ್ಲಿರುವ ಎತ್ತರದ ವೇದಿಕೆಯಾದ ‘ಅಮ್ಮರಕ್ಕಲುಥರ'ದಲ್ಲಿ ಸತಿಯನ್ನು ಶಕ್ತಿಯಾಗಿ ಪೂಜಿಸಲಾಗುತ್ತದೆ. ಇದು ಶಕ್ತಿಪೀಠಗಳ ಮೂಲದ ದೇವಾಲಯ ಎಂದು ನಂಬಲಾಗಿದೆ.   

 ವೈಶಾಖ ಮಹೋತ್ಸವ ಹಬ್ಬವು ಎಡವಂ (ಋಷಭಂ) ನ “ಚೋಡಿ” ದಿನದಂದು “ನೆಯ್ಯಟ್ಟಂ'” ಆಚರಣೆಯೊಂದಿಗೆ ಪ್ರಾರಂಭಗೊಂಡು ತ್ರಿಕಲಶಾಟ್ಟುವಿನೊಂದಿಗೆ ಕೊನೆಗೊಳ್ಳುತ್ತದೆ. ವೈಶಾಖ ಮಹೋತ್ಸವ ಆಚರಣೆಗಳು ವಯನಾಡಿನಿಂದ ಮುತ್ತಿರೇರಿಕಾವುನಿಂದ ಕತ್ತಿಯನ್ನು ತರುವ ಆಚರಣೆಯೊಂದಿಗೆ ಪ್ರಾರಂಭವಾಗುತ್ತದೆ. ಮರುದಿನ, ವಿಶಾಖಂ ನಕ್ಷತ್ರದಂದು, "ಭಂಡಾರಮ್ ಎಳುನ್ನಲ್ಲತ್" ಆಚರಣೆಯನ್ನು ನಡೆಸಲಾಗುತ್ತದೆ. ಶುದ್ಧ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಮತ್ತು ಪೂಜಾ ಪಾತ್ರೆಗಳನ್ನು ಹತ್ತಿರದ ಮನಾಥನ ಗ್ರಾಮದಿಂದ ಕೊಟ್ಟಿಯೂರ್‌ಗೆ ತರಲಾಗುತ್ತದೆ. ಹಬ್ಬದ ಸಮಯದಲ್ಲಿ ಒಂದು ಪ್ರಮುಖ ಆಚರಣೆಯೆಂದರೆ 'ಎಳನೀರು ವೇಪ್ಪು'. ಇದು ಸ್ವಯಂಭು ಶಿವಲಿಂಗದ ಮುಂದೆ ಎಳನೀರು ತೆಂಗಿನಕಾಯಿಗಳನ್ನು ಸಲ್ಲಿಸುವ ಆಚರಣೆ. ಈ ವಿಶೇಷ ದಿನದಂದು, ಭಕ್ತರು ಕೇರಳದ ವಿವಿಧ ಭಾಗಗಳಿಂದ ತಂದ ಸಾವಿರಾರು ಎಳನೀರುಗಳನ್ನು ಸಲ್ಲಿಸಲಾಗುತ್ತದೆ. ಮರುದಿನ, ದೇವಾಲಯದ ನಂಬೂದರಿಗಳು ಶುದ್ಧ ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳಲ್ಲಿ ಎಳನೀರನ್ನು ಸಂಗ್ರಹಿಸುತ್ತಾರೆ ಮತ್ತು ನಂತರ ಮುಖ್ಯ ಅರ್ಚಕ ಸಂಗ್ರಹಿಸಿದ ತೆಂಗಿನ ನೀರನ್ನು “ಎಳನೀರಾಟ್ಟಂ”  ವಿಗ್ರಹಕ್ಕೆ ಅಬಿಷೇಕ ಮಾಡಲಾಗುತ್ತದೆ. ಇದನ್ನು 'ರಾಶಿ ವೆಲ್ಲಿ' ಎಂದೂ ಕರೆಯುತ್ತಾರೆ. ರೋಹಿಣಿ ಆರಾಧನೆಯು ಬೇರೆ ಯಾವುದೇ ದೇವಾಲಯದಲ್ಲಿ ಕಂಡುಬರದ ಒಂದು ಪ್ರಮುಖ ಆಚರಣೆಯಾಗಿದೆ. ಕುರುಮತ್ತೂರು ಬ್ರಾಹ್ಮಣ (ಆಚರಣೆಯಲ್ಲಿ ವಿಷ್ಣುವಿನ ಸಾಕಾರವೆಂದು ಪರಿಗಣಿಸಲಾದ ಕುರುಮತ್ತೂರು ಕುಟುಂಬದ ಹಿರಿಯ ಸದಸ್ಯ) ಸ್ವಯಂಭು ಶಿವಲಿಂಗವನ್ನು ಆಚರಣೆಯ ಭಾಗವಾಗಿ ಅಪ್ಪಿಕೊಳ್ಳುತ್ತಾನೆ. ಇದು ಸತಿಯ ಸಾವಿನಿಂದ ದುಃಖಿತನಾದ ಶಿವನನ್ನು ವಿಷ್ಣು ಸಮಾಧಾನಪಡಿಸುವ ಸಂಕೇತವಾಗಿದೆ. ಈ ಹಬ್ಬದ ಅಂಗವಾಗಿ, ಎರಡು ಆನೆಗಳು ಶಿವ ಮತ್ತು ಪಾರ್ವತಿಯ ವಿಗ್ರಹಗಳನ್ನು ಹೊತ್ತೊಯ್ಯುವ ಮೆರವಣಿಗೆ "ಎಳುನ್ನಲ್ಲಿಪ್ಪು" ನಡೆಯುತ್ತದೆ. ಮೆರವಣಿಗೆಯ ನಂತರ, ಆನೆಗಳಿಗೆ ಚೆನ್ನಾಗಿ ಆಹಾರ ನೀಡಲಾಗುತ್ತದೆ. ಇದನ್ನು "ಆನಯೂಟು" ಎನ್ನಲಾಗುತ್ತದೆ.  ಈ ರೀತಿಯಲ್ಲಿ ಔಪಚಾರಿಕ ವಿದಾಯ ನೀಡಲಾಗುತ್ತದೆ.  ಕೊಟ್ಟಿಯೂರಿನ ಈ ಆಚರಣೆಗಳನ್ನು ಶ್ರೀ ಶಂಕರಾಚಾರ್ಯರು ರೂಪಿಸಿದ್ದಾರೆ. ತಮ್ಮ ಆಧ್ಯಾತ್ಮಿಕ ದೃಷ್ಟಿಯಿಂದ, ಅವರು 'ಅಕ್ಕರೆ ಕೊಟ್ಟಿಯೂರು' ನಲ್ಲಿ ಶಿವನ ಉಪಸ್ಥಿತಿ ಇದೆ ಎಂದು ತಿಳಿದುಕೊಂಡರಂತೆ.  

ದೇವಾಲಯದಲ್ಲಿ ಕೊಟ್ಟಿಯೂರು ಉತ್ಸವಕ್ಕೆ ಟನ್‌ಗಟ್ಟಲೆ ಉರುವಲುಗಳನ್ನು ಬಳಸಲಾಗುತ್ತದೆ. ಇಲ್ಲಿಯವರೆಗೆ ಒಂದು ವರ್ಷವೂ ಬಲಿಪೀಠದಿಂದ ಹೆಚ್ಚುವರಿ ಬೂದಿಯನ್ನು ತೆಗೆಯುವ ಅಗತ್ಯ ಬಂದಿಲ್ಲ. ಅಮ್ಮರಕ್ಕಲ್ ತಾರಾಗೆ ಬೇಕಾದ ಎಲ್ಲಾ ವಸ್ತುಗಳನ್ನು ಮನಾಥನ ದೇವಾಲಯದಿಂದ ತರಲಾಗುತ್ತದೆ. ಪವಿತ್ರ ಕತ್ತಿಗಳು ಸಹ ಚಪ್ಪರಂ ಭಗವತಿ ದೇವಾಲಯದಿಂದ ಬರುತ್ತವೆ . ಪೂಜಾ ಪಾತ್ರೆಗಳು, ಆಭರಣಗಳು ಇತ್ಯಾದಿಗಳು ಕರಿಂಬನಗೋಪುರದಿಂದ ಬರುತ್ತವೆ.

ಕೊಟ್ಟಿಯೂರು ದೇವಾಲಯವು ವಯನಾಡ್ ಜಿಲ್ಲೆಯ ತಿರುನೆಲ್ಲಿ ಮಹಾವಿಷ್ಣು ದೇವಸ್ಥಾನದೊಂದಿಗೆ ನಿಕಟ ಸಂಬಂಧ ಹೊಂದಿದೆ. ಕೊಟ್ಟಿಯೂರಿನಿಂದ ಸುಮಾರು 54 ಕಿ.ಮೀ ದೂರದಲ್ಲಿದೆ. ತಿರುನೆಲ್ಲಿಯಿಂದ ವೈಶಾಖ ಮಹೋತ್ಸವಕ್ಕಾಗಿ ಕೊಟ್ಟಿಯೂರ್‌ಗೆ ಅಕ್ಕಿಯನ್ನು ನೀಡಲಾಗುತ್ತಿತ್ತು. ಹಬ್ಬದ ನಂತರ ಹಿಂತಿರುಗಿಸಲಾಗುತ್ತಿತ್ತು. ಇದನ್ನು ನಿಲ್ಲಿಸಲಾಗಿದೆ ಆದರೆ ಸಂಪ್ರದಾಯವನ್ನು ಮುಂದುವರಿಸಲು ಎರಡೂ ದೇವಾಲಯಗಳಲ್ಲಿ ವಿಧಿಗಳನ್ನು ನಡೆಸಲಾಗುತ್ತದೆ.

ಭೂತ ಗಣಗಳು ತಿರುನೆಲ್ಲಿ ಪೆರುಮಾಳ್‌ನ ಉಡುಗೊರೆಗಳನ್ನು ವೈಶಾಖ ಮಹೋತ್ಸವಕ್ಕೆ ಕೊಂಡೊಯ್ಯುತ್ತವೆ ಎಂದು ನಂಬಲಾಗಿದೆ.  ಈಗ ಕೊಟ್ಟಯೂರಿನಲ್ಲಿ ವೈಶಾಖ ಮಹೋತ್ಸವ ನಡೆಯುತ್ತಿದ್ದು, ಲಕ್ಷಾಂತರ ಜನರು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. 

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ