image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶ್ರೀ ಕೃಷ್ಣನು ಗೋಪಾಲರಿಗೆ ವೈಕುಂಠದ ದರ್ಶನ ತೋರಿದ ದಿನವೇ 'ವೈಕುಂಠ ಏಕಾದಶಿ'. ಈ ದಿನದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ....

ಶ್ರೀ ಕೃಷ್ಣನು ಗೋಪಾಲರಿಗೆ ವೈಕುಂಠದ ದರ್ಶನ ತೋರಿದ ದಿನವೇ 'ವೈಕುಂಠ ಏಕಾದಶಿ'. ಈ ದಿನದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ....

ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ವೈಕುಂಠ ಏಕಾದಶಿ. ವೈಕುಂಠ ಏಕಾದಶಿಯ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂಬ ಪ್ರತೀತಿ ಇದೆ. ವೈಕುಂಠ ಏಕಾದಶಿಯು ಸನಾತನ ಧರ್ಮಾನುಯಾಯಿಗಳು ಶ್ರದ್ಧಾ ಭಕ್ತಿಗಳಿಂದ ವಿಷ್ಣುವನ್ನು ಪೂಜಿಸುವ ಮಹತ್ವದ ದಿನ. ಏಕಾದಶಿ ಅಂದರೆ ಹನ್ನೊಂದು ಎಂಬ ಅರ್ಥವಿದೆ. ಒಂದು ತಿಂಗಳಲ್ಲಿ 2 ಏಕಾದಶಿಗಳಿರುತ್ತವೆ. ಈ ದಿನದಂದು ಉಪವಾಸವಿದ್ದು, ವ್ರತಾಚರಣೆ ಮಾಡುವ ಸಂಪ್ರದಾಯವಿದೆ. ಇನ್ನೂ ಕೆಲವರು ಏಕಾದಶಿಯ ದಿನದಂದು ಮೌನ ವ್ರತಾಚರಣೆ ಮಾಡುತ್ತಾರೆ. ಈ ದಿನ ವಿಷ್ಣು ದೇವಾಲಯದಲ್ಲಿ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಪೌರಾಣಿಕ ಹಿನ್ನಲೆಯ ಪ್ರಕಾರ ನಂದಗೋಪ ಶ್ರೀಕೃಷ್ಣನ ಸಾನಿಧ್ಯದಲ್ಲಿ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ತಪ್ಪದೆ ಆಚರಿಸುತ್ತಿದ್ದ ಒಮ್ಮೆ ಏಕಾದಶಿ ವ್ರತ ಆಚರಿಸಿ, ಮರುದಿನ ದ್ವಾದಶಿ ಸ್ವಲ್ಪ ಕಾಲ ಮಾತ್ರ ಇದ್ದುದ್ದರಿಂದ ಬೆಳಗಿನ ಜಾವಕ್ಕೆ ಮೊದಲು ಯಮುನಾನದಿಯಲ್ಲಿ ಸ್ನಾನಕ್ಕಿಳಿದ. ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕನಾದ ರಾಕ್ಷಸ, ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ದನು. ಇತ್ತ ನಂದನು ಎಷ್ಟು ಹೊತ್ತಾದರೂ ಸ್ನಾನಕ್ಕೆ ಹೋದವನು ಬಾರದಿರಲು, ಗೋಪಾಲ ಕುಲದವರೆಲ್ಲಾ ಬಲರಾಮಕೃಷ್ಣರಿಗೆ ಈ ಸುದ್ದಿ ಮುಟ್ಟಿಸಿದರು. ಶ್ರೀಕೃಷ್ಣ ಸಾಕು ತಂದೆಯನ್ನು ಕರೆತರುವುದಾಗಿ ಹೇಳಿ, ವರುಣ ಲೋಕಕ್ಕೆ ಬಂದನು. ದೇವದೇವನಾದ ಶ್ರೀಕೃಷ್ಣನಿಗೆ ನಮಿಸಿದ ವರುಣ ತನ್ನ ಸೇವಕನಿಂದಾದ ಅಪರಾಧ ಮನ್ನಿಸಬೇಕೆಂದು ಪ್ರಾರ್ಥಿಸಿದ. ಶ್ರೀಕೃಷ್ಣ ವರುಣನನ್ನು ಆಶೀರ್ವದಿಸಿ ತಂದೆಯೊಡನೆ ಗೋಕುಲಕ್ಕೆ ಹಿಂದಿರುಗಿದನು.

ನಂದಗೋಪನಿಗೆ ಪರಮಾನಂದವಾಯಿತು. ವರುಣನ ಲೋಕದ ವೈಭವ ಹಾಗೂ ತನ್ನ ಮಗನಾದ ಶ್ರೀಕೃಷ್ಣನಿಗೆ ಸಿಕ್ಕ ಭವ್ಯ ಸ್ವಾಗತ ಮುಂತಾದವುಗಳನ್ನು ಎಳೆಎಳೆಯಾಗಿ ಬಣ್ಣಿಸಲಾಗಿ ಗೋಪಾಲರಿಗೆಲ್ಲಾ ಹೆಮ್ಮೆ ಎನಿಸಿತು ಆದರೆ ಶ್ರೀಕೃಷ್ಣ ಸಾಕ್ಷತ್ ಪರಮೇಶ್ವರನೇ ನಿಜ ಆದರೆ ಅವನ ನಿಜರೂಪ ಅರಿಯಲಾರೆವು ಎಂದು ಪರಿತಪಿಸಿದರು. ಇದನ್ನರಿತ ಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿ ಬರುವಂತೆ ತಿಳಿಸಿದ, ಕೃಷ್ಣ ಹೇಳಿದಂತೆ ಮಾಡಿದ ಅವರಿಗೆ ವೈಕುಂಠದ ದರ್ಶನವಾಯಿತು. ಅವರ ಮನಸ್ಸು ತೃಪ್ತಿಯನ್ನು ಹೊಂದಿತು, ಶ್ರೀಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು ಎಲ್ಲರೂ ಧನ್ಯರಾದರು.ಇದೇ ಏಕಾದಶಿಯನ್ನು "ವೈಕುಂಠಏಕಾದಶಿ" ಎಂದು ಕರೆಯಲಾಗಿದೆ ಎಂಬ ನಂಬಿಕೆಯಿದೆ.

ಪದ್ಮ ಪುರಾಣದ ಪ್ರಕಾರ, ವೈಕುಂಠ ಏಕಾದಶಿಯು ವಿಷ್ಣುವಿನಿಂದ ಹೊರಹೊಮ್ಮಿದ ಶಕ್ತಿ ಮುರನನ್ನು ಕೊಂದ ದಿನವಾಗಿದೆ. ಮುರ ಎಂಬ ರಾಕ್ಷಸನ ಕ್ರೌರ್ಯವನ್ನು ಸಹಿಸಲಾರದೆ ದೇವತೆಗಳು ಭಗವಾನ್ ವಿಷ್ಣುವಿನ ಆಶ್ರಯವನ್ನು ಪಡೆದರು ಮತ್ತು ಅವನನ್ನು ಕೊಲ್ಲಲು ವಿಶೇಷ ಆಯುಧದ ಅಗತ್ಯವಿದೆ ಎಂದು ಅರಿತು ಬದರಿಕಾಶ್ರಮದ ಹೈಮಾವತಿಯ ಗುಹೆಯನ್ನು ಪ್ರವೇಶಿಸಿದರು. ಅಲ್ಲಿ ವಿಶ್ರಮಿಸುತ್ತಿದ್ದ ವಿಷ್ಣುವನ್ನು ಕೊಲ್ಲಲು ಮುರ ಯತ್ನಿಸಿದಾಗ ವಿಷ್ಣುವಿನ ದೇಹದಿಂದ ಒಂದು ಶಕ್ತಿ ಹೊಮ್ಮಿ ಕಣ್ಣುಗಳಿಂದ ಮುರನನ್ನು ಸುಟ್ಟಿತು. ಆಗ ವಿಷ್ಣುವು ಆ ಶಕ್ತಿಗೆ ಏಕಾದಶಿ ಎಂದು ಹೆಸರಿಟ್ಟು ವರ ಬೇಡುವಂತೆ ಅನುಗ್ರಹಿಸಿದನು.ಆಗ ಆ ಶಕ್ತಿ ಈ ದಿನದಂದು ಉಪವಾಸ ಮಾಡುವವರ ಪಾಪಗಳನ್ನು ತೊಲಗಿಸಬೇಕೆಂದು ಅವಳು ಕೇಳಿಕೊಂಡಳು. ಧನುರ್ಮಾಸ ಶುಕ್ಲ ಏಕಾದಶಿಯಂದು ಉಪವಾಸ ಮಾಡುವವರಿಗೆ ವೈಕುಂಠಪ್ರಾಪ್ತಿ ಬರುವಂತೆ ಭಗವಾನ್ ವಿಷ್ಣು ಅನುಗ್ರಹಿಸಿದ್ದಾನೆ. ವೈಕುಂಠ ಏಕಾದಶಿಯ ದಿನದಂದು ಮುರನು ಅನ್ನದಲ್ಲಿ ಅಡಗಿಕೊಳ್ಳುತ್ತಾನೆ, ಆದ್ದರಿಂದ ಅನ್ನದಿಂದ ಮಾಡಿದ ಯಾವುದನ್ನೂ ತಿನ್ನಬಾರದು ಎಂದು ಹೇಳಲಾಗುತ್ತದೆ. ಈ ದಿನದ ಉಪವಾಸವು ಇತರ 23 ಏಕಾದಾಗಳ ಉಪವಾಸಕ್ಕೆ ಸಮಾನವಾಗಿದೆ ಎಂದು ವಿಷ್ಣು ಪುರಾಣ ಹೇಳುತ್ತದೆ. ಮುರ ತಾಮಸಿಕ, ರಾಜಸಿಕ ಗುಣಗಳು ಮತ್ತು ಅರಿಷಡ್ವರ್ಗದ ಸಂಕೇತವಾಗಿದೆ. ಇವು ಉಪವಾಸ ಜಾಗರಣೆಗಳ ಮೂಲಕ ಜಯಿಸಿದರೆ ಸತ್ವಗುಣ ಸಿಗುತ್ತದೆ ಮತ್ತು ಇದರಿಂದ ಮುಕ್ತಿಗೆ ದಾರಿಯಾಗುತ್ತದೆ. ಅನ್ನದಲ್ಲಿ ಮುರ ವಾಸವಿರುವುದರಿಂದ ಮಡಿವಂತಿಕೆಯನ್ನು ನೀಡಿ ಜಾಗರೂಕತೆಯನ್ನು ಕುಂದಿಸುತ್ತದೆ ಎಂಬುದು ತಾತ್ಪರ್ಯ. ಏಕಾದಶಿ ದಿನ ಉಪವಾಸ ಮಾಡಿ ದ್ವಾದಶಿ ದಿನ ಅನ್ನದಾನ ಮಾಡುತ್ತಾರೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ