ಗುಜರಾತ್ ರಾಜ್ಯದ ಜಮನಗರ ಜಿಲ್ಲೆಯ ದ್ವಾರಕಾ ನಗರದ ಹತ್ತಿರವಿರುವ ನಾಗೇಶ್ವರದಲ್ಲಿ"ಶ್ರೀ ನಾಗೇಶ್ವರ" ಜ್ಯೋತಿರ್ಲಿಂಗವಿದೆ. ಶ್ರೀ ನಾಗೇಶ್ವರ ಜ್ಯೋತಿರ್ಲಿಂಗ ಮಂದಿರವು ನೋಡಲು ತುಂಬಾ ಸುಂದರವಾಗಿದ್ದು, ವಿವಿದ ರೀತಿಯ ಕೆತ್ತನೆಯಿಂದ ಕೂಡಿದ್ದು ಕಲಾಪೂರ್ಣವಾಗಿದೆ. ಇಲ್ಲಿ ಶ್ರೀ ನಾಗೇಶ್ವರ ಜ್ಯೋತಿರ್ಲಿಂಗದ ಪೂಜೆ ಮುಗಿಸಿ ಹತ್ತಿರ ಇರುವ. ಪಾರ್ವತಿ ಮಂದಿರಕ್ಕೆ ಹೋಗಬೇಕು. ಇಲ್ಲಿ ಪಾರ್ವತಿಗೆ "ನಾಗೇಶ್ವರಿ" ಎಂದು ಕರೆಯಲಾಗುತ್ತದೆ. ಈ ಶ್ರೀ ನಾಗೇಶ್ವರ ಜ್ಯೋತಿರ್ಲಿಂಗದ ದರ್ಶನದಂದ ಎಲ್ಲಾ ಅಭೀಷ್ಟಗಳೂ ಪೂರ್ಣಗೊಳ್ಳುತ್ತವೆ ಎಂದು ಭಕ್ತರು ನಂಬಿದ್ದಾರೆ. ಶಿವ ಪುರಾಣದ ಇನ್ನೊಂದು ಕಥೆಯಂತೆ ಇಲ್ಲಿ ದಾರುಕಾವನವಿತ್ತು. ಚಿಕ್ಕ ಶರೀರದವರಾದ ವಾಲಿಖಿಲ್ಯ ಮುನಿಗಳು ಇಲ್ಲಿ ತಪಸ್ಸು ಮಾಡುತ್ತಿದ್ದರು. ಒಮ್ಮೆ ಶಿವನು ಸರ್ಪಗಳನ್ನು ಧರಿಸಿ ದಿಗಂಬರನಾಗಿ ಆ ವನದಲ್ಲಿ ಸಂಚರಿಸುತ್ತಾನೆ. ಅವನನ್ನು ನೋಡಿದ ಮುನಿಪತ್ನಿಯರು ಮೋಹಗೊಂಡು ಅವನ ಹಿಂದೆಯೇ ಹೋಗುತ್ತಾರೆ.ಇದರಿಂದ ಕೋಪಗೊಂಡ ಮುನಿಗಳು ಶಿವನಿಗೆ ಅವನ ಲಿಂಗ ಉದುರಿ ಹೋಗಲಿ ಎಂದು ಶಾಪವಿತ್ತರು. ಹಾಗೆ ಆದಾಗ, ಜಗತ್ತೇ ನಡುಗಿ ಹೋಯಿತು. ಬ್ರಹ್ಮ ಮತ್ತು ವಿಷ್ಣು ಬಂದು ಶಿವನನ್ನು ಜಗತ್ತನ್ನು ಉಳಿಸಲು ಕೋರಿದರು. ಶಿವನು ಪುನಃ ಆ ಲಿಂಗವನ್ನು ಧರಿಸುತ್ತಾನೆ.ನಾಗಧರನಾಗಿ ಬಂದ ಶಿವನು ನಾಗೇಶ್ವರನಾಗಿಯೂ ಪಾವತಿಯು ನಾಗೇಶ್ವರಿಯಾಗಿಯೂ ಅಪಲ್ಲಿ ನೆಲೆಸಿದರು ಎನ್ನಲಾಗುತ್ತದೆ. ಶಿವ ಪುರಾಣದ ಮತ್ತೊಂದು ಕಥೆಯಂತೆ ಶಿವ ಭಕ್ತಳಾದ ಸುಪ್ರಿಯಾಳನ್ನು, ದಾರಕಾ ವನದ ರಾಜನಾದ ಶಿವ ಭಕ್ತನೂ ಆದ ದಾರುಕನೆಂಬ ನಾಗ ರಾಕ್ಷಸನು ಅನ್ಯ ಸ್ತ್ರೀಯರ ಜೊತೆ ಬಂಧಿಸಿಟ್ಟನು.ಆ ಸ್ತ್ರೀಯರೆಲ್ಲರೂ ಸುಪ್ರಿಯಾಳ ಆದೇಶದಂತೆ ಶಿವ ಮಂತ್ರವನ್ನು ಭಕ್ತಿಯಿಂದ ಜಪಿಸಿದರು. ಶಿವನು ಪ್ರತ್ಯಕ್ಷನಾಗಿ ದಾರುಕನನ್ನು ವಧಿಸಿ ಅವರನ್ನು ಬಿಡುಗಡೆಗೊಳಿಸಿ ಅಲ್ಲಿಯೇ ಜ್ಯೋತಿರ್ಲಿಂಗ ರೂಪದಲ್ಲಿ ನೆಲಸಿದನಂತೆ. ರಾಕ್ಷಸ ದಾರುಕನ ಪತ್ನಿ ದಾರುಕಾಳು ಪಾರ್ವತಿಯನ್ನು ಕುರಿತು ತಪಸ್ಸುಮಾಡಿ ಅವಳಿಂದ ವರ ಪಡೆದು ದಾರುಕವನದ ರಾಣಿಯಾದಳು. ಅವಳು ತನ್ನತಪ: ಶಕ್ತಿಯಿಂದ ದಾರಕ ವನವನ್ನು ಸಮುದ್ರದಲ್ಲಿ ಇರಿಸಿಕೊಂಡು ತನ್ನ ಅನುಚರರಾದ ರಾಕ್ಷಸರ ಮೂಲಕ ತಪಸ್ವಿಗಳನ್ನು ಅಪಹರಿಸಿ ಬಂಧಿಸಿಡುತ್ತಿದ್ದಳು. ಒಮ್ಮೆ ಶಿವ ಭಕ್ತೆ ಸುಪ್ರಿಯಾಳನ್ನು ಅಪಹರಿಸಿ ಅವರೊಡನೆ ಇವಳನ್ನೂ ಕೂಡಿ ಹಾಕಿದಳು. ಸುಪ್ರಿಯಾಳು ಎಲ್ಲರೊಡನೆ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿದಳು. ದಾನವರು ಸುಪ್ರಿಯಾಳನ್ನು ವಧಿಸಲು ಮುಂದಾದರು. ಆಗ ಶಿವನು ಪ್ರತ್ಯಕ್ಷನಾಗಿ ಅವಳನ್ನು ಕಾಪಾಡಿದನು ದಾನವರು ತಮ್ಮ ತಪ್ಪನ್ನು ಅರಿತುಕೊಂಡರು. ಶಿವನು ನಂತರ ನಾಗೇಶ್ವರನಾಗಿ ಜ್ಯೋತಿರ್ಲಿಂಗರೂಪದಲ್ಲಿ ಅಲ್ಲಿಯೆ ನೆಲಸಿದನು. ಪಾರ್ವತಿಯೂ ನಾಗೇಶ್ವರಿಯಾಗಿ ನೆಲಸಿದಳು ಎನ್ನುವುದಕ್ಕೆ ಸ್ಥಳ ಪುರಾಣಗಳು ದೊರೆಯುತ್ತವೆ. ಇಂತಹ ಪುಣ್ಯ ಕ್ಷೇತ್ರವನ್ನು ಒಮ್ಮೆಬೇಟಿ ನೀಡಿ ಪುನೀತರಾಗಲು ಮರೆಯದಿರಿ.
✍ ಲಲಿತಶ್ರೀ ಪ್ರೀತಂ ರೈ