image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

24 ಏಕಾದಶಿಗಳನ್ನು ಆಚರಿಸಿದ ಪುಣ್ಯ ಫಲ ಪಡೆಯಬಲ್ಲ ‘ಪಾಂಡವ ಭೀಮ ಏಕಾದಶಿ’ ಬಗ್ಗೆ ನಿಮಗೆ ತಿಳಿದಿದೆಯೇ...?

24 ಏಕಾದಶಿಗಳನ್ನು ಆಚರಿಸಿದ ಪುಣ್ಯ ಫಲ ಪಡೆಯಬಲ್ಲ ‘ಪಾಂಡವ ಭೀಮ ಏಕಾದಶಿ’ ಬಗ್ಗೆ ನಿಮಗೆ ತಿಳಿದಿದೆಯೇ...?

ಆಹಾರ ಪ್ರಿಯನಾದ ಭೀಮನು ಎಲ್ಲಾ ಏಕಾದಶಿ ಉಪವಾಸಗಳನ್ನು ಆಚರಿಸಲು ಬಯಸುತ್ತಾನೆ. ಆದರೆ ಅವನಿಗೆ ತನ್ನ ಹಸಿವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಆಗ ಅದರ  ಪರಿಹಾರಕ್ಕಾಗಿ ತಮ್ಮ ಅಜ್ಜ ವ್ಯಾಸ ಋಷಿಯನ್ನು ಸಂಪರ್ಕಿಸಿಸುತ್ತಾನೆ. ಆಗ ಋಷಿಗಳು ವರ್ಷದಲ್ಲಿ ಒಂದು ದಿನ ಸಂಪೂರ್ಣ ಉಪವಾಸವನ್ನು ಆಚರಿಸಬೇಕಾಗಿರುವ ನಿರ್ಜಲ ಏಕಾದಶಿಯನ್ನು ಆಚರಿಸಲು ಸಲಹೆ ನೀಡುತ್ತಾರೆ. ಇದರಿಂದ ಖುಷಿಗೊಂಡ ಭೀಮನು ನಿರ್ಜಲ ಏಕಾದಶಿಯನ್ನು ಆಚರಿಸುವ ಮೂಲಕ ಎಲ್ಲಾ 24 ಏಕಾದಶಿಗಳ ಪುಣ್ಯವನ್ನು ಪಡೆಯುತ್ತಾನೆ ಎನ್ನುವುದನ್ನು ಬ್ರಹ್ಮ ವೈವರ್ತ ಪುರಾಣದಲ್ಲಿ ವಿವರಿಸಲಾಗಿದೆ. 

ಇತರ ಏಕಾದಶಿಗಳಲ್ಲಿ ಆಹಾರ ವರ್ಜನೆಯನ್ನು ಆಚರಿಸಿದರೆ ನಿರ್ಜಲ ಏಕಾದಶಿಯಂದು ನೀರನ್ನು ಸಹ ಸೇವಿಸದೆ ಸಂಪೂರ್ಣ ಉಪವಾಸವನ್ನು ಆಚರಿಸಲಾಗುತ್ತದೆ. ಭಾರತೀಯ ಕಾಲಮಾನದ ಪ್ರಕಾರ ಬೇಸಿಗೆಯಲ್ಲಿ ಈ ದಿನ ಬರುವುದರಿಂದ ನೀರಿಲ್ಲದ ಉಪವಾಸವನ್ನು ಆಚರಿಸುವುದು ಅತ್ಯಂತ ಕಷ್ಟಕರವೆಂದು ಪರಿಗಣಿಸಲಾಗುತ್ತದೆ. ನಿರ್ಜಲ ಏಕಾದಶಿಯಂದು ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ 24 ಗಂಟೆಗಳ ಕಾಲ ಉಪವಾಸವನ್ನು ಆಚರಿಸಲಾಗುತ್ತದೆ. ಕೆಲವರು ಇದನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಆಚರಿಸುವುದೂ ಉಂಟು.  ನಿರ್ಜಲ ಏಕಾದಶಿಯ ಹಿಂದಿನ ದಿನ, ಭಕ್ತರು ಸಂಧ್ಯಾವಂದನೆ ಮಾಡಿ, ಅನ್ನವಿಲ್ಲದೆ (ಫಲಹಾರ) ಊಟವನ್ನು ಮಾತ್ರ ಸೇವಿಸುತ್ತಾರೆ. ಏಕೆಂದರೆ ಅನ್ನ ತಿನ್ನುವುದನ್ನು ಇಲ್ಲಿ  ನಿಷೇಧಿಸಲಾಗಿದೆ.  ಈ ದಿನ ಇತರ ಏಕಾದಶಿಗಳಂತೆ ವಿಷ್ಣುವಿಗೆ ಪೂಜೆ ಸಲ್ಲಿಸಲಾಗುತ್ತದೆ.  ವಿಷ್ಣುವಿನ ಪ್ರತಿಮೆ ಅಥವಾ ಶಾಲಿಗ್ರಾಮ ಕಲ್ಲಿಗೆ  ಪಂಚಾಮೃತದಿಂದ ಅಭಿಷೇಕ  ಮಾಡಲಾಗುತ್ತದೆ. ನಂತರ ನೀರಿನಿಂದ ಅಭಿಷೇಕ ಮಾಡಿಸಿ ವಿಶೇಷ  ಅಲಂಕಾರವನ್ನು ಮಾಡಿ, ಹೂವುಗಳು, ಧೂಪದ್ರವ್ಯ, ನೀರು ಮತ್ತು ಆರತಿ ಅರ್ಪಿಸಬೇಕು. ಅದರ ನಂತರ ಭಕ್ತರು ದೇವರ ಪ್ರತಿಮೆಯ ಮೇಲೆ ಧ್ಯಾನ ಮಾಡಬೇಕು. ಸಂಜೆ, ಗರಿಕೆ ಹುಲ್ಲಿನಿಂದ ವಿಷ್ಣುವನ್ನು ಪೂಜಿಸಿ, ಇಡೀ ರಾತ್ರಿ ಜಾಗರಣೆಯಲ್ಲಿದ್ದು, ವಿಷ್ಣುವನ್ನು ಸ್ತುತಿಸಲಾಗುತ್ತದೆ. ಪಾಂಡವ ಏಕಾದಶಿಯ ಮತ್ತೊಂದು ವೈಶಿಷ್ಟ್ಯವೆಂದರೆ ಬಡವ ಬಲ್ಲಿದರಿಗೆ ಬಟ್ಟೆ, ಆಹಾರ ಧಾನ್ಯಗಳು, ಛತ್ರಿಗಳು, ಬೀಸಣಿಗೆಗಳು, ನೀರಿನಿಂದ ತುಂಬಿದ ಹೂಜಿಗಳು, ಚಿನ್ನ ಇತ್ಯಾದಿಗಳನ್ನು ದಾನ ಮಾಡುವುದು.

ಮಾರ್ಕೆಂಡೇಯಾ ಪುರಾಣದ ಪ್ರಕಾರ ವಿಷ್ಣುವಿಗೆ ಬಲು ಪ್ರೀಯವಂತೆ ಏಕಾದಶಿ. ಪಾಂಡವ ಭೀಮ ಏಕಾದಶಿ ವ್ರತವು ಎಲ್ಲಾ ಪಾಪಗಳನ್ನು ತೊಳೆಯುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಉಪವಾಸ ಮಾಡುವವರು ದೇವರ ಆಶೀರ್ವಾದವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಈ ಉಪವಾಸವನ್ನು ಆಚರಿಸುವವರು ಬೇಗನೆ ಫಲಿತಾಂಶಗಳನ್ನು ಪಡೆಯುತ್ತಾರೆ. ಅವಿವಾಹಿತರು ಮತ್ತು ಮಕ್ಕಳಿಲ್ಲದವರು ನಿರ್ಜಲ ಏಕಾದಶಿಯಂದು ಉಪವಾಸವನ್ನು ಆಚರಿಸುತ್ತಾರೆ. ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಅವರ ಬಯಕೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಜಾತಕದಲ್ಲಿ ಯಾವುದೇ ದೋಷಗಳಿದ್ದರೆ, ಆ ದೋಷಗಳು ನಿವಾರಣೆ ಆಗುತ್ತದೆ. ಭಗವಂತನನ್ನು ಪೂಜಿಸುವಾಗ "ಓಂ ನಮೋ ಭಗವತೇ ವಾಸುದೇವಾಯ" ಮಂತ್ರವನ್ನು ಪಠಿಸುವುದರಿಂದ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೇವೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ