image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಶೇಷವಾಗಿ ಗಿರಿಜಾ ಕಲ್ಯಾಣ ನಡೆಯುವ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ 'ಕಳಸೇಶ್ವರ' ದೇವಾಲಯ

ವಿಶೇಷವಾಗಿ ಗಿರಿಜಾ ಕಲ್ಯಾಣ ನಡೆಯುವ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ 'ಕಳಸೇಶ್ವರ' ದೇವಾಲಯ

ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಕಳಸ ಪಟ್ಟಣವು ಪಶ್ಚಿಮದ ಘಟ್ಟಗಳಿಂದ ಸುತ್ತುವರಿದಿರುವ ಒಂದು ಪ್ರಕೃತಿ ರಮಣೀಯವಾದ ಸ್ಥಳ. ಇಲ್ಲಿಯ ವಾತಾವರಣ, ಹಸಿರಿನ ವನಸಿರಿ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಅಂತಹ ಪ್ರಕೃತಿಯ ಮಡಿಲಲ್ಲಿರುವ ದೇವಸ್ಥಾನವೇ ಕಳಸೇಶ್ವರ ದೇವಸ್ಥಾನ. ಕಳಸೇಶ್ವರ ಸ್ವಾಮಿ ದೇವಾಲಯವು ಭಾರತದ ಐತಿಹಾಸಿಕ ಸ್ಥಳವಾಗಿದೆ. ಅದು ಭದ್ರಾ ನದಿಯ ಮೇಲೆ ನಿಂತಿದೆ. ಇಲ್ಲಿ ವಸಿಷ್ಠರು, ಅಗಸ್ತ್ಯರು ತಪಸ್ಸನ್ನಾಚರಿಸಿದ್ದರಂತೆ. ಇತಿಹಾಸಕಾರರ ಪ್ರಕಾರ ಹೊಯ್ಸಳ ದೇವಾಲಯವಿದ್ದು, ಅದು ಪಾಳುಬಿದ್ದ ನಂತರ ನಾಯಕರ ಕಾಲದಲ್ಲಿ ಈಗಿನ ಕಟ್ಟಡಗಳು ನಿರ್ಮಿತವಾಗಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ 9 ಅಂಗುಲ ಎತ್ತರದ ಲಿಂಗವು ಉತ್ತರಕ್ಕೆ ಬಾಗಿದೆ. ಗರ್ಭಗುಡಿಯ ಮೇಲಿನ ಶಿಖರಕ್ಕೆ ಲೋಹದ ಕಲಶವಿದ್ದು, 16 ಕಲ್ಲಿನ ಕಂಬಗಳಿರುವ ನವರಂಗಕ್ಕೆ ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ದ್ವಾರಗಳಿವೆ. ಮುಖಮಂಟಪದ ಒಳಪಕ್ಕದಲ್ಲಿ ನಾಲ್ಕು ಕಂಬಗಳೂ ಮುಂಭಾಗದಲ್ಲಿ ದ್ರಾವಿಡ ಶೈಲಿಯ, ಅಡಿಯಲ್ಲಿ ಸಿಂಹಗಳಿರುವ ಎರಡು ಕಂಬಗಳೂ ಇವೆ. ಪಕ್ಕದಲ್ಲಿ ದೇವಿ ಮಂದಿರವಿದೆ. ಈ ಮಂದಿರದ ಮಹಾದ್ವಾರದ ಇಕ್ಕೆಲಗಳಲ್ಲಿ ಸಿಂಹವಾಹಿನಿಯರಾದ ಸ್ತ್ರೀದ್ವಾರಪಾಲಕರಿದ್ದಾರೆ. ಪುರಾಣ ಕಥೆಯ ಪ್ರಕಾರ, ಮೈತ್ರಾವರ್ಣರು ಎನ್ನುವ ಐವರು ಋಷಿಗಳು ತಪಸ್ಸಿಗಾಗಿ ಶಾಂತವಾದ ಸ್ಥಳದ ಹುಡುಕಾಟದಲ್ಲಿದ್ದಾಗ ಭದ್ರಾನದಿಯ ದಡದಲ್ಲಿ ತಪಸ್ಸು ಮಾಡುವ ಮನಸ್ಸಾಗಿ ಅಲ್ಲೇ ತಪಸ್ಸನ್ನಾಚರಿಸಿದರು ಎನ್ನಲಾಗುತ್ತದೆ. ಇಂದ್ರನು ಮೈತ್ರಾವರ್ಣರ ತಪೋಭಂಗ ಮಾಡಲು ಅಪ್ಸರ ಸ್ತ್ರೀಯರನ್ನು ಕಳಿಸುತ್ತಾರೆ. ತಪೋಭಂಗವಾಗಿ ಅವರ ರೇತಸ್ಸು ಸ್ಕಲನವಾಗುತ್ತದೆ. ಋಷಿ ಮುನಿಗಳ ರೇತಸ್ಸು ವ್ಯರ್ಥವಾಗಬಾರದೆಂದು ದೇವತೆಗಳು ಅದನ್ನು ಒಂದು ಕಲಶದಲ್ಲಿ ಶೇಖರಿಸಿಟ್ಟರಂತೆ. ರೇತಸ್ಸನ್ನು ಶೇಖರಿಸಿಟ್ಟ ಸ್ಥಳವೇ ಭದ್ರಾದಂಡೆ. ಆ ಕಳಸದಿಂದ ಅಗಸ್ತ್ರ‍್ಯರು ಹುಟ್ಟಿ ಕೊಂಡರು ಎನ್ನಲಾಗುತ್ತದೆ. ಪೂರ್ವದಲ್ಲಿ ಪಾರ್ವತಿ ಪರಮೇಶ್ವರರಿಗೆ ವಿವಾಹ ನಡೆಯುವಾಗ ಎಲ್ಲಾ ದೇವಾನುದೇವತೆಗಳು ನೆರೆದಿದ್ದರು, ಅಗಸ್ತ್ಯ ಮುನಿಗಳೂ ಹೋಗಿದ್ದರು. ಆಗ ಭೂಮಿಯ ಭಾರ ಹೆಚ್ಚಾಗಿ ಒಂದು ಕಡೆಗೆ ವಾಲಿತ್ತಂತೆ. ಆಗ ಶಿವನು ಅಗಸ್ತ್ಯರಿಗೆ ದಕ್ಷಿಣಕ್ಕೆ ಹೋಗುವಂತೆ ತಿಳಿಸಿದರಂತೆ, ಅದರಿಂದ ಶಿವ-ಪಾರ್ವತಿ ಕಲ್ಯಾಣ ನೋಡಲು ಸಾಧ್ಯವಿಲ್ಲವೆಂದು ಬೇಸರ ಪಟ್ಟ ಅಗಸ್ತ್ಯರಿಗೆ ಪರಮೇಶ್ವರನು ಕಳಸದಲ್ಲೇ ವಿವಾಹದ ದೃಶ್ಯವನ್ನು ತೋರಿಸುವಂತೆ ವರ ನೀಡುತ್ತಾರೆ. ಹಾಗಾಗಿ ಇಲ್ಲಿ ಗಿರಿಜಾ ಕಲ್ಯಾಣ ನಡೆಯುತ್ತದೆ. ಮಹಾದ್ವಾರದಿಂದ ಮೆಟ್ಟಿಲು ಹತ್ತಿ ಹೋದರೆ ಶಿವನ ದರ್ಶನವಾಗುತ್ತದೆ. ಅಲ್ಲಿಯೇ ಆನೆ ಗಣಪತಿ ಇದೆ. ಕಾಳಾಸುರನನ್ನು ಸಂಹರಿಸಿ ದಂತಹ ಗಣಪತಿ ಇದಾಗಿದ್ದು, ಇಲ್ಲಿ ಗಂಡು ಆನೆ ಗಣಪತಿ ಹಾಗು ಹೆಣ್ಣು ಆನೆ ಗಣಪತಿ ಇದೆ. ಇವೆರಡನ್ನೂ ಪೂಜಿಸಲಾಗುತ್ತದೆ. ಕಳಸದಲ್ಲೇ ಒಡಮೂಡಿದ ಶಿವನ ದೇವಾಲಯ ಇಲ್ಲಿ ಮಾತ್ರ ಕಾಣಸಿಗುವುದು. ಕಾಶಿಗೆ ಹೋದಷ್ಟೇ ಪುಣ್ಯ ಇಲ್ಲಿ ಸಿಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಈ ದೇವಸ್ಥಾನದಲ್ಲಿ ಪ್ರತಿ ದಿನ ಯಾತ್ರಾರ್ಥಿಗಳಿಗೆ ಮಧ್ಯಾಹ್ನ 1 ರಿಂದ 2 ಘಂಟೆಯವರೆಗೆ ಭೋಜನಕ್ಕೆ ವ್ಯವಸ್ಥೆ ಇದೆ. ಚಿಕ್ಕಮಂಗಳೂರಿನ ಪ್ರಕೃತಿಯ ಸವಿಯನ್ನು ಸವಿಯಲು ಹೋಗುವಾಗ ಒಮ್ಮೆ ಪುರಾಣ ಪವಿತ್ರವಾದ ಕಳಸನಾಥನ ದರುಶನ ಪಡೆದು ಪುಣೀತರಾಗಲು ಮರೆಯದಿರಿ.

Category
ಕರಾವಳಿ ತರಂಗಿಣಿ