image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತುಳುವರ ವಿಶೇಷ ಆಚರಣೆಗಳಲ್ಲಿ ಒಂದಾದ 'ಪತ್ತನಾಜೆ' ಬಗ್ಗೆ ಒಂದು ಸಣ್ಣ ನೋಟ

ತುಳುವರ ವಿಶೇಷ ಆಚರಣೆಗಳಲ್ಲಿ ಒಂದಾದ 'ಪತ್ತನಾಜೆ' ಬಗ್ಗೆ ಒಂದು ಸಣ್ಣ ನೋಟ

ವಿಬಿನ್ನ ಆಚರಣೆಗಳುಳ್ಳ ತುಳುನಾಡಿನ ಸಂಪ್ರದಾಯಗಳೇ ವಿಶಿಷ್ಟವಾಗಿದೆ. ಅದರಲ್ಲಿ ಪತ್ತನಾಜೆಯೂ ಒಂದು. ತುಳುವರ ಬೇಸ (ಸಾಮಾನ್ಯವಾಗಿ ಮೇ 24 ಆಸುಪಾಸು)ತಿಂಗಳಿನ 10ನೇ ದಿನ ಬರುವ ಪತ್ತನಾಜೆ ಕೃಷಿಕರನ್ನು ಕೃಷಿ ಕೆಲಸದ ಕಡೆಗೆ ಕರೆದೊಯ್ಯುವ ದಿನ ಎಂದರೆ ತಪ್ಪಾಗಲಾರದು. ಮಳೆಗಾಲ ಕರಾವಳಿ ಜಿಲ್ಲೆಗಳಲ್ಲಿ ಆರಂಭಗೊಳ್ಳುವ ಹಿನ್ನಲೆಯಲ್ಲಿ ಈ ಭಾಗದ ಜನ ತನ್ನ ಎಲ್ಲಾ ಆಚರಣೆಗಳಿಗೆ, ಮನೋರಂಜನೆಗಳಿಗೆ ವಿಶ್ರಾಂತಿ ನೀಡುವ ದಿನವೂ ಇದೇ ಆಗಿದೆ. ತುಳುನಾಡಿನ ಎಲ್ಲಾ ದೈವಗಳು ಪತ್ತನಾಜೆಯ ಬಳಿಕ ಘಟ್ಟಪ್ರದೇಶಕ್ಕೆ ತೆರಳುತ್ತದೆ ಎಂದು ನಂಬಿಕೊಂಡು ಬಂದಿರುವ ಇಲ್ಲಿನ ಜನ ಈ ದಿನದ ಬಳಿಕ ಯಾವುದೇ ದೈವಿಕ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ. ಸೀಮೆಯ ಪ್ರಧಾನ ದೇವಸ್ಥಾನಗಳ ಧ್ವಜಾ ಅಂದರೆ ಜಡಿ ಮರವನ್ನು ಇಳಿಸುವ ಕಾರ್ಯಕ್ರಮ  ಪತ್ತನಾಜೆಯಂದೇ ನಡೆಯುತ್ತದೆ. ವಿವಿಧ ದೈವಸ್ಥಾನಗಳಲ್ಲಿನ ಬಂಡಿ ಉತ್ಸವಗಳು ಪತ್ತ ನಾಜೆಯಂದೇ ಕೊನೆಗೊಳ್ಳುತ್ತವೆ. ಅದಕ್ಕೆ “ಪತ್ತನಾಜೆಗೆ ಬಂಡಿ ಹಗ್ಗ ಎಲ್ಲ ಒಳಗೆ” ಎನ್ನುವ ಮಾತು ಕೂಡ ಇದೆ. ಅಲ್ಲದೆ ಗಂಡು ಕಲೆ ಎನಿಸಿಕೊಂಡಿರುವ ಯಕ್ಷಗಾನದ ಕಲಾವಿದರೂ ಪತ್ತನಾಜೆಯು ಬಳಿಕ ತನ್ನ ಗೆಜ್ಜೆಯನ್ನು ಕಳಚಿಟ್ಟು ತಮ್ಮನ್ನೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳವುದು ಇಲ್ಲಿನ ವಾಡಿಕೆಯಾಗಿದೆ. ಪತ್ತೆನಾಜೆ ದಿನದಂದು ಪ್ರತೀ ದೈವಸ್ಥಾನ ಹಾಗೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯೂ ನಡೆಯುತ್ತದೆ. ಅಲ್ಲದೇ ದೈವಗಳನ್ನು ನಂಬಿಕೊಂಡು ಬರುವ ಎಲ್ಲಾ ಮನೆತನಗಳಲ್ಲೂ ಈ ದಿನ ತನ್ನ ಕುಲದೈವಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಪದ್ದತಿಯಿದೆ. ಪತ್ತನಾಜೆಯ ವಿಚಾರದಲ್ಲಿ ಕೆಲವು ನಂಬಿಕೆಗಳಿವೆ. ಅವುಗಳಲ್ಲಿ ಪತ್ತನಾಜೆಯಂದು ಹತ್ತು ಹನಿ ಮಳೆ ಸುರಿಯುತ್ತದೆ ಎಂಬ ಭಾವನೆ ಇದೆ. ಅದು ನಂಬಿಕೆ ಮಾತ್ರವಾಗಿರದೆ ಆ ದಿನ ಮಳೆ ಬಿದ್ದೇ ಬೀಳುತ್ತದೆ. ಪತ್ತನಾಜೆಯಂದು ದೇವರು ಮನುಷ್ಯನ ತೂಕ ನೋಡುತ್ತಾರೆ ಎನ್ನುವುದು ಕೂಡ ಹಿರಿಯರ ಮಾತು.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ