ತುಳುವರ ಆಚರಣೆಗಳೆ ವಿಬಿನ್ನ, ವಿಶಿಷ್ಟಪೂರ್ಣ ಹಾಗೆ ಅರ್ಥಗರ್ಬಿತವಾಗಿದೆ. ಇಲ್ಲಿ ನಡೆಯುವ ಪ್ರತಿಯೊಂದು ಆಚರಣೆಯೂ ಜನರ ದೈಹಿಕ, ಆರ್ಥಿಕ, ಮಾನಸಿಕ ಸ್ಥಿತಿಗತಿಗೆ ಪೂರಕವಾಗಿರುವುದನ್ನು ನಾವು ನೋಡಬಹುದು. ಅಂತಹ ಆಚರಣೆಗಳಲ್ಲಿ ಒಂದು “ಆಟಿ ಅಮವಾಸ್ಯೆ”. ಆಟಿ ಅಮವಾಸ್ಯೆ ಎಂದ ಕೂಡಲೇ ತುಳವರಿಗೆ ನೆನಪಾಗುವುದು ಆಟಿ ಕಷಾಯ. ಅಬ್ಬಾ ಎಂತಹ ಕಹಿ. ಹಾಗಂತ ಇಲ್ಲಿ ಆಬಾಲಾದಿಯಾಗಿ ಎಲ್ಲರೂ ಈ ಕಷಾಯವನ್ನು ಕುಡಿಯದಿರರು. ಈ ಕಷಾಯ ತಯಾರಿಸುವ ಬಗೆ ವಿಬಿನ್ನವಾಗಿದೆ. ಮುಂಜಾನೆ ಎಲ್ಲರೂ ಎದ್ದೇಳುವ ಮೊದಲೇ ಮನೆಯ ಯಜಮಾನ ಪಾಲೆ ಅಂದರೆ ಹಾಲೆಯ ಮರದ ಚೆಕ್ಕೆಯನ್ನು ಕಲ್ಲಿನಿಂದ ಜಜ್ಜಿ ತರುತ್ತಾರೆ. ಇದನ್ನು ಕಬ್ಬಿಣದ ವಸ್ತು ಎಂದರೆ ಕತ್ತಿಯಿಂದ ತೆಗೆದರೆ ವಿಷವಾಗುತ್ತದೆ ಎನ್ನುವುದರೊಂದಿಗೆ, ಕತ್ತಿಯಿಂದ ತೆಗೆದರೆ ತಿರುಳಿಗೆ ಗಾಯವಾಗುವ ಸಂಭವ ಜಾಸ್ತಿ ಇರುವುದರಿಂದ ನಮ್ಮ ಹಿರಿಯರು ಕಲ್ಲಿನಿಂದ ಜಜ್ಜಿ ತೆಗೆದಿರಬಹುದೇನೋ.
ಯಾಕೆಂದರೆ ಗಿಡ ಮರ, ಪ್ರಾಣಿ ಪಕ್ಷಿಗಳಲ್ಲಿ ಕೂಡ ದೇವರನ್ನು ಕಂಡಿದ್ದಾರೆ ನಮ್ಮ ಹಿರಿಯರು. ಹಾಗೇ ಜಜ್ಜಿ ತಂದ ಚೆಕ್ಕೆಯೊಂದಿಗೆ ಶುಂಠಿ, ಬೆಳ್ಳುಳ್ಳಿ, ಜೀರಿಗೆ ಮುಂತಾದ ವಸ್ತುಗಳನ್ನು ಹಾಕಿ ಕಷಾಯ ತಯಾರು ಮಾಡಿ ಮನೆಮಂದಿಯೆಲ್ಲಾ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ ಆಟಿ ಅಮವಾಸ್ಯೆಯ ದಿನ ಈ ಮರದಲ್ಲಿ ಔಷದೀಯ ಗುಣಗಳು ಹೇರಳವಾಗಿರುತ್ತದೆ ಹಾಗಾಗಿ ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗಿ ರೋಗ ರುಜಿನಗಳು ಶಮನವಾಗುತ್ತದೆ. ಕಷಾಯ ಕುಡಿದ ನಂತರ ತೀರ್ಥ ಸ್ನಾನಕ್ಕೆ ಹೋಗುವುದು ತುಳುನಾಡಿನಲ್ಲಿ ರೂಡಿ.
ತುಳುನಾಡಿನ ಆಟಿ ತಿಂಗಳಲ್ಲಿ ಆಟಿ ಕಳೆಂಜ ಮನೆ ಮನೆಗೂ ಬರುವ ಸಂಪ್ರದಾಯ ಕೂಡ ಇದೆ. ಆಟಿ ಕಳೆಂಜ ವೇಷ ಹಾಕುವವರು ತುಳುನಾಡಿನಲ್ಲಿ ದೈವ ಕುಣಿತ ಮಾಡುವವರು ಆಗಿರುತ್ತಾರೆ. ಆಟಿ ಕಳಂಜ ಮನೆ ಮನೆಗೆ ಬಂದಾಗ ಆ ಮನೆಯವರು ಅಕ್ಕಿ, ತೆಂಗಿನಕಾಯಿ ಕೊಡುವ ರೂಡಿ ಇದೆ.
ಇನ್ನು ಆಟಿ (ಆಷಾಡ) ಬಂತೆಂದರೆ ನವ ವಿವಾಹಿತರಿಗೆ ಬಲು ಬೇಜಾರಿನ ಸಂಗತಿ. ಮದುವೆಯ ನಂತರ ಬರುವ ಮೊದಲ ಆಟಿ(ಆಷಾಡ) ತಿಂಗಳಿನಲ್ಲಿ ಹೆಣ್ಣು ಮಕ್ಕಳು ತನ್ನ ಗಂಡನ ಮನೆಯಿಂದ ತವರಿಗೆ ಹೋಗಿ ಆಟಿ ಮುಗಿದ ಮೇಲೆ ಮತ್ತೆ ಗಂಡನ ಮನೆಗೆ ಬರುವ ಪದ್ದತಿ ನಮ್ಮಲ್ಲಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಆಚರಣೆಗಳು ಬದಲಾಗುತ್ತಿದೆ.
ಆಟಿ ಬಂತೆಂದರೆ ಮದುವೆ, ಮುಂಜಿ ಮೊದಲಾದ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಕೃಷಿಯನ್ನೇ ಅವಲಂಬಿಸಿದ್ದ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಕೃಷಿ ಚಟುವಟಿಕೆಗಳು ಕಡಿಮೆ ಇರುವುದರ ಜೊತೆಗೆ ಜಿಟಿ ಜಿಟಿ ಬರುವ ಮಳೆ ಒಂದು ಕಡೆಯಾದರೆ ಹಿಂದಿನ ಕಾಲದಲ್ಲಿ ಬಡತನ ಮತ್ತೊಂದೆಡೆ. ಆಟಿಯಲ್ಲಿ ಮನೆಮಂದಿಯೆಲ್ಲಾ ಕೂಡಿ ಚೆನ್ನೆ ಮಣೆ ಆಟ ಆಡುವುದನ್ನು ಕಾಣಬಹುದು.
ಆಟಿ ಕಳೆದ ಕೂಡಲೇ ಆಟದ ಮಣೆಯು ಅಟ್ಟ ಸೇರುತ್ತದೆ, ಅಂದರೆ ಇದನ್ನು ತೆಗೆದಿಟ್ಟು ಮತ್ತೆ ಬರುವ ಆಟಿಯಲ್ಲಿ ಹೊರ ತೆಗೆಯಲಾಗುತ್ತದೆ. ಇಂತಹ ಪದ್ದತಿಗೂ ಹಿರಿಯರು ಒಂದು ಕಥೆಯನ್ನು ಹೇಳುತ್ತಾರೆ ಆದರೆ ವಾಸ್ತವಿಕವಾಗಿ ಚೆನ್ನೆ ಮಣೆ ಆಟವು ನಮ್ಮನ್ನು ತುಂಬಾ ಆಕರ್ಷಿಸುವ ಆಟ. ಒಂದು ಸಲ ಕೂತರೆ ಮತ್ತೆ ಮದ್ಯದಲ್ಲಿ ಏಳಲು ಮನಸೇ ಬರುವುದಿಲ್ಲ. ಅದಕ್ಕೆ ಇರಬೇಕು
ಆಟಿಯಲ್ಲಿ ಹೇಗೂ ಕೆಲಸ ಕಾರ್ಯಗಳು ಕಡಿಮೆ ಮತ್ತೆ ಕೃಷಿ ಚಟುವಟಿಕೆಗಳು ಶುರುವಾದ ಮೇಲೂ ಈ ಆಟದ ಕಡೆ ಆಕರ್ಷಿತರಾಗುವುದು ಬೇಡ ಎನ್ನುವ ಕಾರಣಕ್ಕೆ ವರ್ಷದಲ್ಲಿ ಒಂದು ತಿಂಗಳು ಮಾತ್ರ ಆಟ ಆಡುವದನ್ನು ರೂಡಿಸಿರಬಹುದು.
ಈ ಆಷಾಡದಲ್ಲಿ ಕೆಸುವಿನ ಎಲೆ, ಕೆಸುವಿನ ದಂಟು, ಕೆಸುವಿನ ಬೇರು, ಕನಿಲೆ(ಬಿದಿರಿನ ಮೊಳಕೆ) ಚಗಟೆ (ತಜಂಕ್) ಸೊಪ್ಪು, ಮೊದಲಾದವುಗಳನ್ನು ಆಹಾರವಾಗಿ ಉಪಯೋಗಿಸುವುದರಿಂದ. ನಮ್ಮ ದೇಹದಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ ಎನ್ನುವುದನ್ನು ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ.
✍ ಲಲಿತಶ್ರೀ ಪ್ರೀತಂ ರೈ