“ಋತುಗಳ ರಾಜ” ಅಂದರೆ “ವಸಂತಋತು” ಹೇಗೋ, ಹಾಗೇಯೇ “ಮಾಸಗಳ ರಾಜ ಶ್ರಾವಣ ಮಾಸ” ಎನ್ನಲಾಗುತ್ತದೆ. ಹಿಂದೂ ಪಂಚಾಂಗದ ಐದನೇ ಮಾಸವಾದ ಶ್ರಾವಣ ಮಾಸವು ಮಾಸಗಳಲ್ಲೇ ಹೆಚ್ಚು ಪವಿತ್ರವೆಂಬ ಹೆಗ್ಗಳಿಕೆ ಪಡೆದಿದೆ. ಪವಿತ್ರವಾದ ಈ ಮಾಸದಲ್ಲಿ ಶಿವನ ಆರಾಧನೆ ಮಾಡಿದರೆ ಬೇಡಿದ್ದನ್ನು ಕೊಡುವ ಶಿವನ ಕೃಪೆ ಸಂಪೂರ್ಣ ಪ್ರಾಪ್ತವಾಗುತ್ತದೆ ಎಂಬುದು ನಂಬಿಕೆ. ಧಾರ್ಮಿಕ ಕಾರ್ಯಗಳು, ಹಬ್ಬಗಳು ಸಾಲು ಸಾಲಾಗಿ ಬರುವ ಈ ಶ್ರಾವಣ ಮಾಸದ ಎಲ್ಲ ದಿನಗಳೂ ಶುಭವೇ ಆಗಿದೆ. ಅಷ್ಟೇ ಅಲ್ಲದೆ, ಮೊದಲನೆಯ ಬಾರಿಗೆ ಯಾವುದಾದರೂ ಕೆಲಸವನ್ನು ಆರಂಭಿಸಲು ಇದು ಪ್ರಶಸ್ತವಾದ ತಿಂಗಳು ಎಂದೇ ಹೇಳಬಹುದು. ಪುರಾಣ ಕಾಲದಲ್ಲಿ ಸಮುದ್ರ ಮಂಥನವಾದ ಸಂದರ್ಭದಲ್ಲಿ ಅಮೃತಕ್ಕಾಗಿ ದೇವತೆಗಳು ಮತ್ತು ದಾನವರು ಕಾದಾಡುತ್ತಿದ್ದರು. ಆಗ 14 ಬೇರೆ ಬೇರೆ ರತ್ನಗಳು ಮೇಲೆದ್ದು ಬರುತ್ತವೆ. ಹದಿಮೂರು ರತ್ನಗಳನ್ನು ದೇವತೆಗಳು ಮತ್ತು ದಾನವರು ಹಂಚಿಕೊಳ್ಳುತ್ತಾರೆ, ಉಳಿದ ಒಂದು ರತ್ನವೇ ಹಾಲಾಹಲ. ಇಡೀ ಪೃಥ್ವಿಯನ್ನೇ ನಾಶಮಾಡುವ ಶಕ್ತಿಯಿರುವ ಹಾಲಾಹಲವನ್ನು ಶಿವ ಕುಡಿಯುತ್ತಾನೆ, ಪಾರ್ವತಿ ಗಂಟಲನ್ನು ಒತ್ತಿ ಹಿಡಿದ ಕಾರಣ ಹಾಲಾಹಲವು ಗಂಟಲಲ್ಲೇ ಉಳಿದುಕೊಳ್ಳುತ್ತದೆ. ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ಶಿವನಿಗೆ ನೀಲಕಂಠನೆಂಬ ಹೆಸರು ಬರುತ್ತದೆ. ಜಗತ್ತಿನ ಉಳಿವಿಗಾಗಿ ಶಿವ ಹಾಲಾಹಲವನ್ನು ಕುಡಿದಿದ್ದು ಶ್ರಾವಣ ಮಾಸದಲ್ಲಿ ಆದ ಕಾರಣ ಈ ಮಾಸದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಈ ಮಾಸದಲ್ಲಿ ಭಕ್ತಿಯಿಂದ ಶಿವನನ್ನು ಆರಾಧಿಸಿದರೆ ಪುಣ್ಯ ಲಭಿಸುತ್ತದೆ. ಪಂಚಾಮೃತದಿಂದ ಹರನಿಗೆ ಅಭಿಷೇಕ ಮಾಡುವುದರ ಜೊತೆಗೆ ಬಿಲ್ವಪತ್ರೆಗಳಿಂದ ಅರ್ಚನೆ ಮಾಡಿದರೆ, ಶಿವ ಸಂತುಷ್ಟನಾಗಿ ಬೇಡಿದ್ದನ್ನು ನೀಡುತ್ತಾನೆ. ಶ್ರಾವಣ ಮಾಸದಲ್ಲಿ ರುದ್ರಾಭಿಷೇಕವನ್ನು ಮಾಡಿಸುವುದರಿಂದ ಮನೆಗೆ ಒಳಿತಾಗುತ್ತದೆ. ಈ ಮಾಸದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದು ಹೆಚ್ಚು ಶ್ರೇಯಸ್ಕರವಾಗಿದೆ. ವಿವಾಹಾಪೇಕ್ಷಿತ ಕನ್ಯೆಯರು ಉತ್ತಮ ವರನನ್ನು ಪಡೆಯಲು ಶ್ರದ್ಧಾ-ಭಕ್ತಿಯಿಂದ ಶ್ರಾವಣ ಸೋಮವಾರ ವ್ರತವನ್ನು ಪಾಲಿಸಿ, ನಿಯಮದಂತೆ ಉಪವಾಸವನ್ನು ಆಚರಿಸಿದರೆ ಶುಭಫಲದೊರೆಯುವುದರಲ್ಲಿ ಸಂಶಯವಿಲ್ಲ ಎನ್ನುವುದು ಎಲ್ಲರ ನಂಬಿಕೆ.
✍ ಲಲಿತಶ್ರೀ ಪ್ರೀತಂ ರೈ