image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಏಳನೇ ಶತಮಾನದಲ್ಲಿ ಹುಟ್ಟಿಕೊಂಡಿರುವ ಜಾನಪದ ನೃತ್ಯವೇ ಕೋಲಾಟ...

ಏಳನೇ ಶತಮಾನದಲ್ಲಿ ಹುಟ್ಟಿಕೊಂಡಿರುವ ಜಾನಪದ ನೃತ್ಯವೇ ಕೋಲಾಟ...

ಕೋಲಾಟವು ಕರ್ನಾಟಕದ ಜನಪ್ರಿಯ ಜಾನಪದ ನೃತ್ಯವಾಗಿದ್ದು, ಐತಿಹಾಸಿಕ ದಾಖಲೆಗಳ ಪ್ರಕಾರ ಇದು ಏಳನೇ ಶತಮಾನದಲ್ಲಿ ಹುಟ್ಟಿಕೊಂಡಿದೆ. ಕೋಲಾಟನ್ನು ಸಾಮಾನ್ಯವಾಗಿ ಗಂಡು ಕಲೆ ಎನ್ನಲಾಗುತ್ತಿದ್ದರೂ, ಮಹಿಳೆಯರು ಹೆಚ್ಚಾಗಿ ಭಾಗವಹಿಸುತ್ತಾರೆ. ಇದು ಹಾಡು ಮತ್ತು ಕುಣಿತ ಬೆರೆತಿರುವಂತಹ ಕಲೆಯಾಗಿದ್ದು, ಗೋಕುಲದಲ್ಲಿ ಶ್ರೀಕೃಷ್ಣನ ಜನನವಾದಾಗ ಯಾದವರು ಕೋಲಾಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದುದು ಮತ್ತು ಗೋಪಿಕಾ ಸ್ತ್ರೀಯರು ಶ್ರೀ ಕೃಷ್ಣನೊಂದಿಗೆ ಬಣ್ಣದ ಕೋಲುಗಳೊಂದಿಗೆ ಆಟವಾಡಿದ ಸಂದರ್ಭವು ಕೋಲಾಟದ ಪ್ರಾಚೀನವಾದ ಕಲೆಯನ್ನು ತಿಳಿಸುತ್ತದೆ. ಗಂಡಸರು ಹಾಗೂ ಹುಡುಗಿಯರ ಗುಂಪು ಎದುರಾಗಿ ನಿಂತು ನರ್ತಿಸುವ ಅಥವಾ ಹುಡುಗಿಯರು ಮಾತ್ರವೇ ನರ್ತಿಸುವ ದಕ್ಷಿಣ ಭಾರತದ ಉತ್ಸವಗಳಲ್ಲಿ ಕಂಡುಬರುವ  ಕೋಲು ನೃತ್ಯ. ಇಲ್ಲಿ ನೃತ್ಯಗಾರರು ಕೈಯಲ್ಲಿ ಹಿಡಿದಿರುವ ಎರಡು ಕೋಲುಗಳನ್ನು ದೇಹದ ವಿವಿಧ ಭಾಗಗಳ ಬಳಿ, ತಲೆಯ ಮೇಲೆ, ಹೆಗಲ ಮೇಲೆ, ಹಿಂಭಾಗದಲ್ಲಿ, ಮೊಣಕಾಲ ಬಳಿ ಹೊಡೆಯುತ್ತಾರೆ. ಅಥವಾ ಸಂಗಾತಿಗಳ ಕೋಲನ್ನು ವಿವಿಧ ವಿನ್ಯಾಸಗಳಲ್ಲಿ ಹಾಗೂ ಲಯಗಳಲ್ಲಿ ಹೊಡೆಯುತ್ತಾರೆ. ಭಾರತ ಮಾತ್ರವಲ್ಲದೆ ಯುರೋಪು ದೇಶಗಳಲ್ಲಿಯೂ ಕೋಲಾಟ ಪ್ರಾಕಾರಗಳಿವೆ. ಆದರೆ ಯುರೋಪಿನ ಕೋಲು ನೃತ್ಯಗಳಿಗಿಂತ ನಮ್ಮ ನೃತ್ಯದಲ್ಲಿ ಮೈ ಹಾಗೂ ಮೊಣಕಾಲಿನ ಬಳುಕುಗಳು ಗಮನಾರ್ಹವಾಗಿರುತ್ತದೆ. ಸಾಮಾನ್ಯವಾಗಿ ಹಬ್ಬ ಹರಿದಿನಗಳು, ಉತ್ಸವಗಳು, ವಿಶೇಷ ಸಮಾರಂಭಗಳಲ್ಲಿ ಕೋಲಾಟ ಆಡುತ್ತಾರೆ. ಕೋಲಾಟದಲ್ಲಿ ಕನಿಷ್ಠ ಎಂಟು ಮಂದಿಯಿಂದ ಗರಿಷ್ಠ ಇಪ್ಪತ್ನಾಲ್ಕು ಮಂದಿ ಇರಬೇಕು. ಕಣಿಕಣಿ ಎಂದು ಶಬ್ದ ಕೊಡುವಂಥ ಗಟ್ಟಿಯಾದ ಕೋಲುಗಳಿಗೆ ಎರಡನೇಯ ಮಹತ್ವ. ಸುಮಾರು ಮುಕ್ಕಾಲು ಅಡಿ ಉದ್ದವಿರುವ ಕಾರೆ, ಆಲೆ, ಬೈನೆ ಮುಂತಾದ ಮರಗಳಿಂದ ಮಾಡಿದ ಕಾಲುಗಳನ್ನು ಉಪಯೋಗಿಸಲಾಗುತ್ತದೆ. ಇವುಗಳಿಗೆ ಬಣ್ಣ ಹಚ್ಚಿ ಗೀಲಿಟು ಮಾಡುವುದು ಉಂಟು. ಗೆಜ್ಜೆಗಳಿಗೆ ನಂತರದ ಸ್ಥಾನ. ಕೋಲಾಟವಾಡುವವರು ತಮ್ಮ ಎರಡು ಕಾಲುಗಳಿಗೂ ಒಂದೊಂದು ಸರಗೆಜ್ಜೆಯನ್ನು ಕಟ್ಟಿಕೊಳ್ಳುತ್ತಾರೆ. ಕೋಲಾಟವಾಡುವವರ ಮಧ್ಯೆ ದಮ್ಮಡಿ ಬಾರಿಸುವವನು ಇರುತ್ತಾನೆ. ಮತ್ತೊಬ್ಬ ತಾಳಗಳನ್ನು ಬಾರಿಸುತ್ತಾನೆ. ಇಷ್ಟು ಪರಿಕರಗಳನ್ನೊಳಗೊಂಡು ಕೋಲಾಟ ಪ್ರಾರಂಭವಾಗುತ್ತದೆ. ಕೋಲಾಟದಲ್ಲಿ ಕೋಲುಪದಗಳಿಗೆ ಹೆಚ್ಚು ಪ್ರಾಮುಖ್ಯತೆ. ಇವು ಪ್ರಾಸ, ಚರಣ, ಪಲ್ಲವಿಗಳಿಂದ ರಚಿತವಾಗಿರುತ್ತದೆ. ವಿನೋದ, ದುರಂತ, ಪ್ರಣಯ ಮುಂತಾದ ವಸ್ತುಗಳನ್ನೊಳಗೊಂಡ ಕೋಲುಪದಗಳು ಕೋಲಾಟದ ಅವಿಭಾಜ್ಯ ಅಂಗ. ಕೋಲಾಟದವರ ವೇಷವೆಂದರೆ ಚಡ್ಡಿ ಅಥವಾ ಮೊಣಕಾಲಿನವರೆಗೆ ಎತ್ತಿ ಕಟ್ಟಿದ ಪಂಚೆ, ಒಳ ಅಂಗಿ, ಸೊಂಟಕ್ಕೆ ಒಂದು ವಸ್ತು ಮತ್ತು ಕಾಲಿಗೆ ಗೆಜ್ಜೆ. ಕೊಡವ, ಗೊಲ್ಲ ಮತ್ತು ಲಂಬಾಣಿ ಜನಾಂಗಗಳಲ್ಲಿ ಕೋಲಾಟವು ಹೆಚ್ಚು ಪ್ರಯೋಗಗೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಇಂತಹ ಜನಪದ ಕಲೆಗಳು ಮರೆಯಾಗುತ್ತಿದ್ದರೂ, ಕೆಲವು ಸಂಘಟನೆಗಳು ಜನಪದ ಕಲೆಗಳನ್ನು ಉಳಿಸುವಲ್ಲಿ ಪ್ರಯತ್ನ ಪಡುತ್ತಿದೆ ಎನ್ನುವುದು ಖುಷಿಯ ಸಂಗತಿ. 

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ