ಕರ್ನಾಟಕದ ದಕ್ಷಿಣ ಭಾಗವಾದ ಚನ್ನಪಟ್ಟಣ ತಾಲೂಕಿನ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಅಯ್ಯನ ಗುಡಿ ಎಂದೇ ಜನಪ್ರಿಯ ಆಗಿರುವ ದೇವಸ್ಥಾನವೇ (kengal Anjaneya) ಕೆಂಗಲ್ ಆಂಜನೇಯನ ದೇವಸ್ಥಾನ. ಹೊಯ್ಸಳರ ಕಾಲದಲ್ಲಿ ಕಟ್ಟಿರುವ ಕೆಂಗಲ್ ಆಂಜನೇಯ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ ಎನ್ನಲಾಗುತ್ತಿದೆಯಾದರು ಮೈಸೂರಿನ ದಿವಾನರು ಇದನ್ನು ಪುನರುಜ್ಜೀವನ ಗೊಳಿಸಿದರು. ಸಾಮಾನ್ಯವಾಗಿ ಗುಡಿಗಳಲ್ಲಿ ಆಂಜನೇಯ ದಕ್ಷಿಣಾಭಿಮುಖ ವಾಗಿ ನಿಂತಿರುತ್ತಾನೆ. ಆದರೆ ಇಲ್ಲಿ ಮಾತ್ರ ಆಂಜನೇಯ ಉತ್ತರಕ್ಕೆ ಮುಖ ಮಾಡಿ ನಿಂತಿದ್ದಾನೆ. ಆಂಜನೇಯನ ವಿಗ್ರಹ ಕ್ರಮೇಣವಾಗಿ ಈಶಾನ್ಯದತ್ತ ತಿರುಗುತ್ತಿದೆ ಎನ್ನುವ ಮಾತು ಕೂಡ ಇದೆ. ಆಂಜನೇಯನ ವಿಗ್ರಹ ಕೆಂಪು ಬಣ್ಣದಾಗಿರುವುದರಿಂದ ಇದನ್ನು ಕೆಂಗಲ್ ಅಂದರೆ ಕೆಂಪು ಕಲ್ಲು ಆಂಜನೇಯ ಎನ್ನುತ್ತಾರೆ. ಪ್ರತಿವರ್ಷ ಉತ್ತರಾಯಣ ಪುಣ್ಯಕಾಲದಲ್ಲಿ ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ರಾಜ್ಯದ ಮೂಲೆಮೂಲೆಗಳಿಂದ ಜನ ಹರಕೆ ಹೊತ್ತು ಈ ಜಾತ್ರೆಗೆ ಬರುವುದು ರೂಢಿ. ದೇವಾಸ್ಥಾನದ ಸುತ್ತ 12 ಪ್ರದಕ್ಷಿಣೆಗಳನ್ನು ಹಾಕಿದರೆ ಇಷ್ಟಾರ್ಥಗಳು ನೆರವೇರುತ್ತದೆ ಎಂದು ಹೇಳುತ್ತಾರೆ. ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ವಿಧಾನಸೌಧದ ನಿರ್ಮಾತ್ರು (kengal hanumanthaih) ಕೆಂಗಲ್ ಹನುಮಂತಯ್ಯನವರ ಮನೆ ದೇವರು ಈ ಆಂಜನೇಯ. ಅಂದಿನ ಕಾಲದಲ್ಲಿ ಹುಲಿಗಳು ಹೆಚ್ಚಾಗಿದ್ದ ಕಾರಣ ಇದಕ್ಕೆ ಹುಲಿ ಮುತ್ತಿಗೆ ದೊಡ್ಡಿ ಎಂತಲೂ ಕರೆಯಲಾಗುತ್ತಿತ್ತು. ಹುಲಿಗಳು ಅಲ್ಲಿನ ಗ್ರಾಮಸ್ಥರಿಗೆ ಬಹಳಷ್ಟು ತೊಂದರೆ ನೀಡುತ್ತಿದ್ದವು. ಅಂದಿನ ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಹುಲಿಗಳ ಉಪಟಳ ತಾಳಲಾರದೆ ಭಗವಂತನ ಮೊರೆ ಹೋಗಿದ್ದರಂತೆ. ದಂತ ಕತೆಯೊಂದರ ಪ್ರಕಾರ, ಒಂದು ದಿನ ಓರ್ವ ರೈತ ಈ ಮಾರ್ಗವಾಗಿ ಎತ್ತಿನ ಗಾಡಿಯಲ್ಲಿ ತನ್ನ ಊರಿಗೆ ತೆರಳುತ್ತಿದ್ದಾಗ ವಿಶ್ರಾಂತಿಗಾಗಿ ಈ ಕ್ಷೇತ್ರದಲ್ಲಿ ಉಳಿದುಕೊಂಡು, ಬೆಳಿಗ್ಗೆ ಎದ್ದು ನೋಡಿದಾಗ ತನ್ನ ಹಸುಗಳನ್ನು ಕಾಣದೆ ಕಂಗಾಲಾಗಿ ದೇವರ ಮೊರೆ ಹೋಗುತ್ತಾನೆ. ಭಗವಂತ ಪ್ರತ್ಯಕ್ಷನಾಗಿ ನನ್ನ ಮೂರ್ತಿ ಬಳಿ ನಿನ್ನ ಹಸುಗಳಿವೆ ಎಂದು ಹೇಳಿದನಂತೆ. ಆಗ ರೈತ ಆಂಜನೇಯನ ಮೂರ್ತಿ ಬಳಿ ಧಾವಿಸಿದಾಗ ತನ್ನ ಹಸುಗಳ ಜತೆ ಹುಲಿಯೂ ಸಹ ಅಲ್ಲಿಯೇ ಇದ್ದುದನ್ನು ಇದ್ದುದನ್ನು ಕಂಡು ಬೆರಗಾಗಿ, ದಿನವಾನರಿಗೆ ಇಲ್ಲಿ ನಡೆದಿರುವಿದನ್ನು ತಿಳಿಸುತ್ತಾನೆ. ಇದರಿಂದ ಪ್ರೇರಿತರಾದ ಮೈಸೂರಿನ ದಿವಾನರು ಈ ದೇವಾಲಯದ ಅಭಿವೃದ್ಧಿಗೆ 10 ಎಕರೆ ಜಮೀನನ್ನು ನೀಡಿ, ಆಂಜನೇಯ ಸ್ವಾಮಿಗೆ ಚಿನ್ನದ ಕಣ್ಣು ಹಾಗೂ ಮೀಸೆಯನ್ನು ಕೊಡುಗೆಯಾಗಿ ನೀಡಿದರು ಎಂಬುದು ಅಲ್ಲಿನ ಹಿರಿಯರ ಮಾತು. ತಾಲೂಕು ಆಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಒಂದು ವಾರಗಳ ಕಾಲ ಜಾನುವಾರುಗಳ ಜಾತ್ರೆ ಅದ್ಧೂರಿಯಾಗಿ ನಡೆದುಕೊಂಡು ಬರುತ್ತಿದೆ. ದೇಶದ ನಾನಾ ಭಾಗದಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೈಸೂರು, ಊಟಿ, ಕೇರಳ ಕಡೆ ಹೋಗುವ ಪ್ರವಾಸಿಗರುಈ ದೇವಾಲಯಕ್ಕೆ ಭೇಟಿ ಕೊಡುತ್ತಾರೆ. ಇಲ್ಲಿ ಮೂರು ಮದುವೆ ಛತ್ರಗಳಿದ್ದು, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಬಡವರು ತಮ್ಮ ಮಕ್ಕಳ ಮದುವೆಗಳನ್ನು ಇಲ್ಲಿ ಮಾಡುತ್ತಾರೆ. ಇಂತಹ ಕ್ಷೇತ್ರ ಒಮ್ಮೆ ಬೇಟಿ ನೀಡಿ ಆಂಜನೇಯನ ಕೃಪೆಗೆ ಪಾತ್ರರಾಗಲು ಮರೆಯದಿರಿ.
✍ ಲಲಿತಶ್ರೀ ಪ್ರೀತಂ ರೈ