ಕೊಂಕಣಿ ಮತ್ತು ಮರಾಠಿಗರ ಹಿಂದೂಗಳಿಗೆ ಸಾಂಪ್ರದಾಯಿಕ ಹೊಸ ವರ್ಷದ ಹಬ್ಬವೇ ಗುಡಿ ಪಾಡ್ವಾ. ಗುಡಿ ಎಂದರೆ ಧ್ವಜ, ಮಹಾರಾಷ್ಟ್ರದಲ್ಲಿ ಆಚರಣೆಯ ಭಾಗವಾಗಿ ಮನೆಗಳ ಮೇಲೆ ಧ್ವಜವನ್ನು ನೆಟ್ಟು, ಹಬ್ಬವನ್ನು ಆಚರಿಸಲಾಗುತ್ತದೆ. ಗುಡಿ ಪಾಡ್ವಾ ಸಮಯದಲ್ಲಿ ಉದ್ದವಾದ ಬಿದಿರಿನ ಮೇಲ್ಭಾಗದಲ್ಲಿ ಪ್ರಕಾಶಮಾನವಾದ ವರ್ಣರಂಜಿತ ರೇಷ್ಮೆ ತರಹದ ಬಟ್ಟೆಯನ್ನು ಕಟ್ಟಲಾಗುತ್ತದೆ. ಅದರ ಮೇಲೆ, ಒಂದು ಅಥವಾ ಹೆಚ್ಚಿನ ಬೇವಿನ ಎಲೆಗಳು ಮತ್ತು ಮಾವಿನ ಎಲೆಗಳನ್ನು ಹೂವಿನ ಹಾರದೊಂದಿಗೆ ಜೋಡಿಸಲಾಗುತ್ತದೆ. ಈ ವ್ಯವಸ್ಥೆಯು ವಿಜಯ ಅಥವಾ ಸಾಧನೆಯನ್ನು ಸೂಚಿಸುವ ಬೆಳ್ಳಿ, ಕಂಚು ಅಥವಾ ತಾಮ್ರದ ಪಾತ್ರೆಯಿಂದ ಮುಚ್ಚಲ್ಪಟ್ಟಿರುತ್ತದೆ. ರಾಜ ಶಾಲಿವಾಹನನ ವಿಜಯವನ್ನು ಸಂಕೇತಿಸುತ್ತದೆ ಮತ್ತು ಅವನು ಪೈಥಾನ್‌ಗೆ ಹಿಂದಿರುಗಿದಾಗ ಅವನ ಜನರು ದ್ವಜವನ್ನು ಎತ್ತಿದರು ಎನ್ನುವ ಕತೆಯಿದೆ. ಗುಡಿಯು ದುಷ್ಟತನವನ್ನು ನಿವಾರಿಸುತ್ತದೆ ಎಂದು ನಂಬಲಾಗಿದ್ದು, ಮನೆಗೆ ಸಮೃದ್ಧಿ ಮತ್ತು ಅದೃಷ್ಟವನ್ನು ಆಹ್ವಾನಿಸುತ್ತದೆ ಎಂದು ನಂಬಲಾಗಿದೆ. ಹಬ್ಬದ ದಿನದಂದು, ಗ್ರಾಮದ ಮನೆಗಳ ಅಂಗಳವನ್ನು ಸ್ವಚ್ಛಗೊಳಿಸಿ ಹಸುವಿನ ಸಗಣಿ ಸಾರಿಸಿ ಮಹಿಳೆಯರು ಮತ್ತು ಮಕ್ಕಳು ತಮ್ಮ ಮನೆ ಬಾಗಿಲಿಗೆ ರಂಗೋಲಿ ಬಿಡುತ್ತಾರೆ. ಈ ದಿನ ವಿಶೇಷವಾಗಿ ಬೇವಿನ ಮರದ ಎಲೆಗಳು ಮತ್ತು ಸಿಹಿ ಬೆಲ್ಲದ ಮಿಶ್ರಣದಿಂದ ಮಾಡುವ ವಿಶೇಷ ಭಕ್ಷ್ಯವನ್ನು ತಯಾರಿಸುತ್ತಾರೆ. ಇದನ್ನು ಜೀವನದ ಸಿಹಿ ಮತ್ತು ಕಹಿ ಅನುಭವಗಳ ನೆನಪಿಗಾಗಿ ತಿನ್ನಲಾಗುತ್ತದೆ. ಜೊತೆಗೆ ಬೇವಿನ ಮಿಶ್ರಣವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಅಷ್ಟೆ ಅಲ್ಲದೆ ಈ ದಿನದಂದು ಶ್ರೀಖಂಡ್ ಮತ್ತು ಪೂರಿ ಅಥವಾ ಪುರನ್ ಪೋಲಿ ಮುಂತಾದ ಅನೇಕ ಹಬ್ಬದ ಭಕ್ಷ್ಯಗಳನ್ನು ಸಹ ತಯಾರಿಸುತ್ತಾರೆ. ಇದನ್ನು ನೇಪಾಳ, ಮ್ಯಾನ್ಮಾರ್, ಕಾಂಬೋಡಿಯಾ ಮತ್ತು ಸಿಂಗಪುರ್ ಮತ್ತು ಮಲೇಷಿಯಾದಂತಹ ಹಿಂದೂಗಳಿರುವ ಇತರ ರಾಷ್ಟ್ರಗಳಲ್ಲಿ ಸಾಜಿಬು ನೋಂಗ್ಮಾ ಪನ್ಬಾ ಚೀರಾಬಾ ಎಂದು ಆಚರಿಸಲಾಗುತ್ತದೆ. ಈ ದಿನದಂದು ವಿವಿಧ ಆಹಾರ ತಿನಿಸುಗಳನ್ನು ತಯಾರಿಸುತ್ತಾರೆ.
✍ಲಲಿತಶ್ರೀ ಪ್ರೀತಂ ರೈ