image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಲಿಗುಂ ಕುಣಿತ...

ಆಲಿಗುಂ ಕುಣಿತ...

ಉತ್ತರ ಕನ್ನಡ ಜಿಲ್ಲೆಯ ಮುಸಲ್ಮಾನ ಸಿದ್ದಿಗಳಲ್ಲಿ ಪ್ರಚಾರದಲ್ಲಿರುವ “ಆಲಿಗುಂ ಕುಣಿತ”. ಕುಣಿಯುವಾಗ ಗತ್ತಿಗೆ ಸರಿಯಾಗಿ ಹೆಜ್ಜೆ ಹಾಕುತ್ತಾ 'ಆಲಿ, ಆಲಿ. ಆಲಿ ಎಂದು ಕೂಗುವುದರಿಂದ ಈ ಕುಣಿತ 'ಆಲಿಗುಂ ಕುಣಿತ ಆಗಿದೆ.'ಕುಣಿತದ ಹರಕೆ'ಯನ್ನು ಹೊರುವ ರೂಡಿಕೂಡ ಇವರಲ್ಲಿದೆ. ಆಲಿಗಂ ಕುಣಿತದಲ್ಲಿ ಭಾಗವಹಿಸುವ ಕಲಾವಿದರು ಮೊಣಕಾಲಿನವರೆಗೆ ಬರುವ ಬಟ್ಟೆಯನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತಾರೆ. ಮುಖಕ್ಕೆ ಮತ್ತು ಬರಿ ಮೈಗೆ 'ಶೇಡಿ' ಎಂದು ಕರೆಯಲಾಗುವ ಬಿಳಿ ಮಣ್ಣಿನ ಪುಡಿಯನ್ನು ನೀರಿನಲ್ಲಿ  ಬೆರೆಸಿ ಹಚ್ಚಿಕೊಂಡು ಬೆರಳ ಉಗುರಿನಿಂದ ಅಲ್ಲಲ್ಲಿ ಕೆದರಿಕೊಳ್ಳುವುದರಿಂದ ಮೈ ತುಂಬಾ ಬಿಳಿಯ ಬಟ್ಟೆಯ ಪಟ್ಟೆಗಳನ್ನು ಬಳಿದಂತೆ ಇರುತ್ತದೆ. ತಲೆಗೆ ಹುಲ್ಲಿನಿಂದ ತಯಾರಿಸಿದ ಉಂಗುರಾಕಾರದ ಬಿದಿರು ಕಡ್ಡಿಯ ಬಳೆಗೆ ಮೂರು ಪ್ರತ್ಯೇಕ ಕಡ್ಡಿಗಳನ್ನು ಸಮಾಂತರವಾಗಿ ಸಿಕ್ಕಿಸಿ, ಆ ಕಡ್ಡಿಗಳ ತುದಿಯ ನ್ನು ಸೇರಿಸಿ ಕಟ್ಟಿ, ಹೂವಿನ ಕೈಮಾಲೆಯನ್ನು ಕಡ್ಡಿಗಳಿಗೂ ಸುತ್ತು ಬಳೆಗೂ ಸುತ್ತಿ ತಯಾರಿಸಿದ ಒಂದು ವಿಶಿಷ್ಟ ನಮೂನೆಯ ತಲೆದೊಡಿಗೆಯನ್ನು ಧರಿಸುತ್ತಾರೆ. ಸೊಂಟಕ್ಕೆ ಘಂಟೆ ಪಟ್ಟಿಯನ್ನು ಕಟ್ಟಿಕೊಂಡಿರುತ್ತಾರೆ. ನಾರಿನ ದಾರಕ್ಕೆ ಸಾಲಾಗಿ ಸಣ್ಣ ಘಂಟೆಗಳನ್ನು ಜೋಡಿಸಿ ಈ ಪಟ್ಟಿಯನ್ನು ಹೆಣೆದಿರುತ್ತಾರೆ. ಕೈಯಲ್ಲಿ ನಾರಿನಿಂದ ತಯಾರಿಸಿದ ಚಾಟಿಯನ್ನು ಹಿಡಿದಿರುತ್ತಾರೆ. ಕಲಾವಿದರು ಸೊಂಟಕ್ಕೆ ಕಟ್ಟಿ ಕೊಂಡ ಘಂಟೆಯ ನಾದದಗತ್ತಿಗೆ ಕಾಲುಗಳನ್ನು ಹಿಂದಕ್ಕೆ ಮುಂದಕ್ಕೆ ಮಾಡುತ್ತಾ ಮುಷ್ಠಿಗೊಡಿದ ಕೈಗಳನ್ನು ಮೇಲಕ್ಕೆತ್ತಿ ಅರ್ಧ ಮುದುರಿ ಹಿಡಿದು ಸುತ್ತ ತಿರುಗುತ್ತಾ “ಆಲಿ ಆಲಿ ಆಲಿ...” ಎಂದು ಕೂಗುತ್ತಾ ಕುಣಿಯುವರು. ಇವರ ಕುಣಿತಕ್ಕೆ ತಕ್ಕಂತೆ ಘಂಟೆಗಳು 'ಗಣಗಣ' ಸದ್ದು ಮಾಡಿ ವಿಶಿಷ್ಠ ಹಿಮ್ಮೇಳ ಒದಗಿಸುವವು.ಕೆಲವು ನಿಮಿಷಗಳು ಕುಣಿದ ನಂತರ ಕುಣಿತದವರು ಮಧ್ಯೆ ಮಧ್ಯೆ ಕುಣಿತ ನಿಲ್ಲಿಸಿ ಚಾಟಿಯಿಂದ ಮೈಗೆ ಹೊಡೆದು ಕೊಳ್ಳುತ್ತಾರೆ. ನಂತರ ಮತ್ತೆ ಕುಣಿತ ಆರಂಭವಾಗುತ್ತದೆ.ಕೆಲವರು ಹರಿಕೆಯ ರೂಪದಲ್ಲಿ ಕುಣಿಯುವುದರಿಂದ 'ಆಲಿ ಗುಂ' ಕುಣಿತವನ್ನು ಕೇವಲ ಮನರಂಜನೆಯ ಕಲೆ ಎನ್ನಲಾಗದು. ಭಾರತದ ಹಲವಾರು ಜನಪದ ಕಲೆಗಳು ನಶಿಸಿ ಹೋಗುತ್ತಿರುವುದು ವಿಷಾದನೀಯ. ಇಂತಹ ಕಲೆಗಳನ್ನು ಉಳಿಸುವ ಕೆಲಸ ಆಗಬೇಕಾಗಿದೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ