ಆವನಿ ಕೋಲಾರ ಜಿಲ್ಲೆಯ ಮುಳುಬಾಗಿಲನಿಂದ ಸುಮಾರು ಹತ್ತು ಮೈಲಿ ದಕ್ಷಿಣಕ್ಕಿರುವ ಒಂದು ಪುಣ್ಯಕ್ಷೇತ್ರ. ಸ್ಥಳೀಯ ನಂಬಿಕೆಗಳ ಪ್ರಕಾರ ಪುರಾಣ ಪ್ರಸಿದ್ಧವಾದ ಅವಂತಿಕಾ ಕ್ಷೇತ್ರವಾದ ವಾಲ್ಮೀಕಿ ಋಷಿಯ ಆಶ್ರಮವಿದ್ದುದು ಈ ಬೆಟ್ಟದಲ್ಲಿಯೇ. ರಾಮ ಲಂಕೆಯನ್ನು ಗೆದ್ದು ಅಯೋಧ್ಯೆಗೆ ಹಿಂತಿರುಗುವಾಗ ಇಲ್ಲಿಗೆ ಬಂದಿದ್ದನೆಂಬುದು ಪ್ರತೀತಿ. ಸೀತಾದೇವಿ ಗಂಡನಿಂದ ಕಾಡಿಗೆ ಕಳುಹಿಸಲ್ಪಟ್ಟಾಗ ಇಲ್ಲಿ ಬಂದು ತಂಗಿ ಲವಕುಶರಿಗೆ ಜನ್ಮವಿತ್ತಳೆಂದೂ, ಲವಕುಶರು ರಾಮನ ಯಜ್ಞಾಶ್ವವನ್ನು ಕಟ್ಟಿ ರಾಮನೊಡನೆ ಇಲ್ಲಿಯೇ ಯುದ್ಧ ಮಾಡಿದರೆಂದೂ ಐತಿಹ್ಯ.ಈ ಘಟನೆಗಳಿಗೆ ಸಂಬಂಧಪಟ್ಟಂತೆ, ಈ ಸುತ್ತಿನ ಅನೇಕ ತಾಣಗಳು ವಾಲ್ಮೀಕಿಯ ಕುಟೀರ, ಲವಕುಶರ ತೊಟ್ಟಿಲು, ಸೀತೆಯ ಅಡುಗೆಪಾತ್ರೆ,ಅವಳು ಬಟ್ಟೆಯೊಗೆಯುತ್ತಿದ್ದ ಕೊಳ, ಲವಕುಶರು ಯಜ್ಞಾಶ್ವವನ್ನು ಕಟ್ಟಿದ ಬಂಡೆ, ರಾಮಲಕ್ಷ್ಮಣರು ಕುಳಿತಿದ್ದ ಬಂಡೆ-ಇತ್ಯಾದಿಯಾಗಿ ಪ್ರಸಿದ್ಧವಾಗಿವೆ. ವಾಲ್ಮೀಕಿ ಬೆಟ್ಟದ ಬುಡದಲ್ಲಿ 9ನೇ ಶತಮಾನಕ್ಕೆ ಸೇರಿದ ದೇವಾಲಯ ಸಮುಚ್ಚಯವೊಂದಿದೆ. ರಾಮಲಿಂಗೇಶ್ವರ ದೇವಾಲಯವೆಂದು ಪ್ರಸಿದ್ಧವಾಗಿರುವ ಈ ಸಂಕೀರ್ಣವೇ ಈ ಊರಿಗೆ ಐತಿಹಾಸಿಕ ಹಿನ್ನೆಲೆ ಒದಗಿಸಿದೆ. 10-12 ದೇವಾಲಯಗಳಿರುವ ಈ ಸಮುಚ್ಚಯದ ನಿರ್ಮಾಣ ಕಾಲದ ಬಗ್ಗೆ ನಿಖರತೆ ಇಲ್ಲದಿದ್ದರೂ ನೊಳಂಬರು, ಚೋಳರು, ಚಾಳುಕ್ಯರು,ಗಂಗರು, ವಿಜಯನಗರದ ಅರಸರಿಂದ ಹಿಡಿದು ಇತ್ತಿಚಿನ ಮೈಸೂರರಸರವರೆಗೆ ಎಲ್ಲ ರಾಜಮನೆತನಗಳ ಕೆತ್ತನೆ ಶೈಲಿಗಳು ಇಲ್ಲಿವೆ. ದಕ್ಷಿಣಕ್ಕೆ ಹಾಗು ಪೂರ್ವಕ್ಕೆ ಬಾಗಿಲಿದ್ದು ಎತ್ತರದ ಪ್ರಾಕಾರದಿಂದ ಈ ಸಮುಚ್ಚಯ ಸುರಕ್ಷಿತವಾಗಿದೆ.
ಮಧ್ಯದಲ್ಲಿ ಪಾರ್ವತಿ ಅಮ್ಮನವರ ದೇವಾಲಯವಿದ್ದು ಅದರ ಪಶ್ಚಿಮಕ್ಕೆ ರಾಮೇಶ್ವರ, ಲಕ್ಷ್ಮಣೇಶ್ವರ ಹಾಗು ಭರತೇಶ್ವರ ದೇವಾಲಯಗಳಿವೆ.ಹಾಗೇ ಪೂರ್ವಕ್ಕೆ ಶತೃಘ್ನೇಶ್ವರ, ಅಂಜನೇಶ್ವರ ಹಾಗೂ ಚಿಕ್ಕದಾದ ಸುಗ್ರೀವೇಶ್ವರ ಮತ್ತು ಅಂಗದೇಶ್ವರ ದೇವಾಲಯಗಳಿವೆ. ದೇವಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಎತ್ತರದ ಗರುಡಗಂಬವಿದೆ. ಶತೃಘ್ನೇಶ್ವರ ಹಾಗು ಲಕ್ಷ್ಮಣೇಶ್ವರ ದೇವಾಲಯಗಳ ಗೋಡೆ ಮೇಲೆ ಹಳೆಗನ್ನಡದ ಲಿಪಿ ಇದ್ದು ವೀರನೊಳಂಬ ಕಾಲಕ್ಕೆ ಸೇರಿದ್ದಾಗಿದೆ. ಈ ಶಾಸನದ ಪ್ರಕಾರ ದೇವಬ್ಬರಸಿ ಎಂಬ ಅರಸಿಯೊಬ್ಬಳು "ದೇವಬ್ಬೆ ಸಮುದ್ರ"ವನ್ನು ಹಾಗು ಹೊರವಂಗಲದಲ್ಲಿ ವಿಷ್ಣು ದೇವಾಲಯವನ್ನು ಕಟ್ಟಿಸಿರುವ ಮಾಹಿತಿ ಇದೆ. ಅಲ್ಲದೆ ಈಕೆ ತನ್ನ ಮೊದಲನೇ ಮಗ ವೀರ ಮಹೇಂದ್ರನೊಳಂಬಾಧಿ ರಾಜನ ಸಾವಿನಿಂದ ಕೆಂಗೆಟ್ಟುತನ್ನ ಎರಡನೇ ಮಗ ಇರವನೊಳಂಬನಿಗೆ ಪಟ್ಟ ಕಟ್ಟಿ ಆತನ ಕ್ಷೇಮಾಭಿವೃದ್ಧಿಗೆ "ನೊಳಂಬನಾರಾಯಣೇಶ್ವರ" ದೇವಾಲಯವನ್ನು ಕಟ್ಟಿಸಿದಳೆಂದು ತಿಳಿದುಬರುತ್ತದೆ. ಲಕ್ಷ್ಮಣೇಶ್ವರ ದೇವಾಲಯವು ಸಮುಚ್ಚಯದಲ್ಲಿರುವ ಎಲ್ಲ ದೇವಾಲಯಗಳಲ್ಲಿ ತುಂಬ ದೊಡ್ಡದಾಗಿದ್ದು ಅಪೂರ್ವ ಕೆತ್ತನೆಗಳಿಂದ ಕೂಡಿದೆ. ಇಲ್ಲಿನ ಗೋಡೆಗಳ ಮೇಲಿನ ಕುದುರೆ-ಆನೆ ಸಾಲುಗಳ ಕೆತ್ತನೆ,ಯಾಳಿ ಮತ್ತು ಮಕರ ಕೆತ್ತನೆಗಳು ಬಾಣರ ಮತ್ತು ರಾಷ್ಟ್ರಕೂಟರ ಕಾಲದವುಗಳು. ಇದರ ನವರಂಗ ಚೌಕಾಕಾರದ ಸುಂದರ ಕೆತ್ತನೆಯ ಕಂಬಗಳಿಂದ ರಚಿತವಾಗಿದ್ದು ಕಂಬಗಳ ಮೇಲ್ತುದಿಯಲ್ಲಿ ದುಂಡನೆಯ ದೊಡ್ಡ-ದೊಡ್ಡ ಕಲ್ಲಿನ ಗಾಲಿಗಳು ಛಾವಣಿಯನ್ನು ಎತ್ತಿ ನಿಲ್ಲಿಸಿವೆ.ತೆರೆದ ಸುಕನಾಸಿ, ಅಷ್ಟದಿಕ್ಪಾಲಕರಿಂದ ಸುತ್ತುವರಿದ ಉಮಾ-ಮಹೇಶ್ವರರ ಮೋಹಕ ಕೆತ್ತನೆಗಳು ನವರಂಗದ ಮೇಲ್ಛಾವಣಿಯಲ್ಲವೆ. ಗುಡಿ ಯ ಹೊರಮೈಯ ಸುತ್ತಲೂ ಬುಡದಲ್ಲಿ ಆನೆ,ಸಿಂಹ, ಯಾಳಿ, ಮಕರ, ಕುದುರೆಲಾಳದಾಕೃತಿಯ ಕಮಾನುಗಳು-ಇವುಗಳಿಂದ ಅಲಂಕೃತವಾದ ಆರು ಪಟ್ಟಿಕೆಗಳಿವೆ. ಮೇಲೆ ಅಲ್ಲಲ್ಲಿ ಯಕ್ಷ, ಶಿವ, ದುರ್ಗಿ, ಗಣೇಶ, ಭೈರವ, ಭೈರವಿ, ವಿಷ್ಣು ಮುಂತಾದ ಶಿಲ್ಪಗಳಿರುವ, ಸಮಾನಾಂತರಗಳಲ್ಲಿ ಅರ್ಧಕಂಭಗಳಿಂದ ಛೇದಿಸಲ್ಪಟ್ಟ ಎತ್ತರವಾದ ಭಿತ್ತಿಯಿದೆ. ಇದರಲ್ಲಿ ಮಧ್ಯೆ ಮಧ್ಯೆ ಮಹಿಷಾಸುರಮರ್ದಿನಿ, ಸೂರ್ಯ, ನಟರಾಜ ಮುಂತಾದ ವಿಗ್ರಹಗಳನ್ನೊಳಗೊಂಡ ಜಾಲಂಧ್ರಗಳೂ ಇದ್ದು ದೇವಾಲಯದ ಸೊಬಗನ್ನು ಹೆಚ್ಚಿಸಿವೆ. ಒಳಭಾಗದ ನವರಂಗದಲ್ಲಿ, ಮಧ್ಯೆಉಮಾಮಹೇಶ್ವರ ಮತ್ತು ಸುತ್ತಲೂ ಅಷ್ಟ ದಿಕ್ಪಾಲಕರ ಕೆತ್ತನೆಯಿರುವ ಒಂದು ಮೋಹಕ ಭುವನೇಶ್ವರಿಯಿದೆ. ಬೆಟ್ಟ ಹತ್ತುವಲ್ಲಿ ಸಿಗುವ ಗುಹೆಯನ್ನು ವಾಲ್ಮೀಕಿಯ ಗುಹೆಯೆಂದು ಕರೆಯುತ್ತಾರೆ.
✍ ಲಲಿತಶ್ರೀ ಪ್ರೀತಂ ರೈ