image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗುರುವಿನ ಲೀಲೆಯನ್ನು ಹಾಡುವವರು ಈ "ನೀಲಗಾರರು"

ಗುರುವಿನ ಲೀಲೆಯನ್ನು ಹಾಡುವವರು ಈ "ನೀಲಗಾರರು"

ಭಾರತದ ಜನಪದ ಕಲೆಯೇ ವಿಭಿನ್ನ. ಇಲ್ಲಿ ಸಾವಿರಾರು ಜನಪದ ಕಲೆಗಳಿವೆ. ಅದರಲ್ಲಿ ಜನಪದ ಗಾಯಕರು ಪ್ರಮುಖ ಪಾತ್ರ ವಹಿಸುತ್ತಾರೆ. ದಕ್ಷಿಣ ಕರ್ನಾಟಕದ ಜನಪದ ಗಾಯಕರಲ್ಲಿ ಮಂಟೇಸ್ವಾಮಿ ಪರಂಪರೆಗೆ ಸೇರಿದ ನೀಲಗಾರರು ಪ್ರಮುಖರಾದವರು. ಹಾವಿನ ಹೆಡೆ ಅಥವಾ ಸಿಂಹಮುಖದ ಮಟ್ಡಸವಾದ ತಂಬೂರಿ ಇವರ ಪ್ರಮುಖ ವಾದ್ಯ. ನಾಲ್ಕು ತಂತಿಯ ಈ ವಾದ್ಯವನ್ನು ನುಡಿಸುತ್ತಾ ಇವರು ತಾಳ ಮೇಳಗಳೊಡನೆ ಸುವಿಸ್ತಾರ ಲಾವಣಿಗಳನ್ನು ಹಾಡುತ್ತಾರೆ. ತಲೆಯ ಮೇಲೆ ಕೆಂಪು ಮುಂಡಾಸು, ಮೈ ಮೇಲೆ ಬಣ್ಣದ ನಿಲುವಂಗಿ, ಶುಭ್ರವಾದ ಕಚ್ಚೆಯ ಪಂಚೆ, ನಡುವಿಗೆ ಸುತ್ತಿದ ವಸ್ತ್ರಗಳೊಡನೆ ಅತ್ಯಂತ ಠೀವಿಯಿಂದ ಈ ಕಲಾವಿದರು ಹೊರಗೆ ಹೊರಡುತ್ತಾರೆ. ಹಣೆಯಲ್ಲಿ ವಿಭೂತಿ ಗಂಧ ಎರಡನ್ನೂ ಇವರು ಧರಿಸುತ್ತಾರೆ. ಕೊರಳಲ್ಲಿ ಮೂರು ರುದ್ರಾಕ್ಷಿ ಮಣಿಗಳು ಇರುತ್ತದೆ. ಲೀಲೆಗಾರರು ಎಂಬ ಪದವೇ ನೀಲಗಾರರು ಎಂದಾಗಿದೆ. ಲೀಲೆಗಾರರು ಎಂದರೆ ಗುರುವಿನ ಲೀಲೆಯನ್ನು ಹಾಡುವರು ಎಂದರ್ಥ. ನೀಲಗಾರರಲ್ಲಿ ಪ್ರಧಾನವಾಗಿ ಹರಿಜನರೇ ಕಂಡು ಬರುತ್ತಾರೆ. ಉಳಿದಂತೆ ಕುರುಬರು, ಅಕ್ಕಸಾಲಿಗರು, ಕುಂಬಾರರು ನೀಲಗಾರರಾಗಿರುವುದುಂಟು. ಇವರು ತಮ್ಮನ್ನು ಸಿದ್ದಪ್ಪಾಜಿಯ ಗುಡ್ಡಗಳು ಎಂದು ಕರೆದುಕೊಳ್ಳುತ್ತಾರೆ. ನೀಲಗಾರರಲ್ಲಿ ಎರಡು ವಿಧ. ಸಾಧರಣ ನೀಲಗಾರರು ಮತ್ತು ತಂಬೂರಿ ನೀಲಾಗರರು. ಸಾಧರಣ ನೀಲಗಾರರು ಕೇವಲ ಗುಡ್ಡರು. ಇವರು ಕಾವ್ಯ ಅಥವಾ ಪದಗಳನ್ನು ಹಾಡುವುದಿಲ್ಲ, ಅಲ್ಲದೇ ಇವರಿಗೆ ಒಂದು ರುದ್ರಾಕ್ಷಿಯನ್ನು ಕಟ್ಟಲಾಗಿರುತ್ತದೆ. ತಂಬೂರಿ ನೀಲಾಗರರು ದೇವರ ಕಥೆಗಳನ್ನು ಹಾಡುತ್ತ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸುತ್ತಾರೆ. ನೀಲಗಾರರು ಮಂಟೇಸ್ವಾಮಿ ಸಂಪ್ರದಾಯಕ್ಕೆ ಸೇರಿದ್ದವರಾದ್ದರಿಂದ ಮಂಟೇದವರು ಮಂಟೇದಯ್ಯ,ಮಂಟೇಸ್ವಾಮಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಮಂಟೆಲಿಂಗಯ್ಯ ಎಂಬುದು ಮಂಟೇಸ್ವಾಮಿ ಕಥೆಯಲ್ಲಿ ಬರುವ ಧರೆಗೆ ದೊಡ್ಡವರ ಹೆಸರು. 'ಮಂಟಾಡು' 'ಮುಂಟಾಕೊ' ಎಂಬ ಶಬ್ದಗಳಿವೆ. ಓಲಾಡು, ಉರುಳು, ಒರಗು ಎಂಬರ್ಥದಲ್ಲಿ ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಪ್ರಯೋಗದಲ್ಲಿದೆ. ಕಲ್ಯಾಣದಿಂದ ಮಳವಳ್ಳಿ ಪ್ರಾಂತ್ಯಕ್ಕೆ ಬಂದ ಧರೆಗೆ ದೊಡ್ಡವರಿಗೆ ಯಾವ ನಾಮಕರಣವು ಅಗಿರಲಿಲ್ಲ. ಅವರು ಮಳವಳ್ಳಿ ಸಮೀಪದ ಆದಿಹೊನ್ನನಾಯಕನಹಳ್ಳಿಗೆ ಬಂದಾಗ 'ಬಳೆಯ ಮುದ್ದಮ್ಮ ತಾಯಿ' ಕಂಚಿನ ಹಂಡೆಯಲ್ಲಿ ಮನೆಯ ಮಂದೆ ಹಾಲು ಕರೆಯುತ್ತಿದಳು. ಅಲ್ಲಿಗೆ ಭಿಕ್ಷೆಗೆ ಬಂದಾಗ ಧರೆಗೆ ದೊಡ್ಡವರ ಶಂಖ, ಜಾಗಟೆಗಳ ಶಬ್ದ ಕೇಳಿ ಹಸು ಬೆದರಿತು ಎಂದು ರೇಗಿದಳು. ಧರೆಗೆ ದೊಡ್ಡವರು ಅದೇ ನಾಮಕರಣವನ್ನು ಸ್ವೀಕರಿಸಿದರು. ಮಳವಳ್ಳಿ ಬಳಿಯ ಬೊಪ್ಪಗೌಡನ ಪುರದ ಮಠವನ್ನು ಮಂಟೇಸ್ವಾಮಿ ಮಠವೆಂದು ಕರೆಯಲಾಗುತ್ತಿದೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ