ಪುಷ್ಯ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ವಿಶೇಷವಾಗಿ ಮೌನಿ ಅಮಾವಾಸ್ಯೆ ಕರೆಯಲಾಗುತ್ತದೆ. ಈ ಅಮಾವಾಸ್ಯೆಯಂದು ಮಾಡುವ ಪ್ರಮುಖ ಆಚರಣೆಯೇ ಪವಿತ್ರ ತೀರ್ಥ ಸ್ನಾನ. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುವುದೆಂದು ನಂಬಿಕೆ. ಕೆಲವು ಭಕ್ತರು ಈ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಯಾರೊಂದಿಗೂ ಮಾತನಾಡದೇ ತೀರ್ಥಸ್ನಾನ ಮಾಡುತ್ತಾರೆ. ಕೆಲವರು ದಿನ ಪೂರ್ತಿ ಮೌನಾಚರಣೆ ಮಾಡುವುದು ಕೂಡ ರೂಢಿಯಲ್ಲಿದೆ. ಕೆಲವೊಂದು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ದ್ವಾಪರಯುಗವು ಈ ದಿನದಂದು ಆರಂಭವಾಯಿತು ಎಂದು ಹೇಳಲಾಗುತ್ತದೆ.
ಜೊತೆಗೆ ಗಂಗೆಯ ನೀರು ಈ ದಿನ ಅಮೃತವಾಗುವುದೆಂದು, ಈ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದರೆ ಆರೋಗ್ಯದೊಂದಿಗೆ ಮೋಕ್ಷವೂ ಪ್ರಾಪ್ತಿಯಾಗುವುದೆಂದು ಕೂಡ ಹೇಳಲಾಗುತ್ತದೆ. ಗಂಗಾನದಿ ಯಂತಹ ಪವಿತ್ರ ಪುಣ್ಯ ನದಿಗಳಲ್ಲಿ ಈ ದಿನ ಸ್ನಾನ ಮಾಡುವುದರಿಂದ ಮಾನಸಿಕ ಮಾತ್ರವಲ್ಲದೇ ದೈಹಿಕ ಸಮಸ್ಯೆಗಳೂ ನಿವಾರಣೆಯಾಗಿ, ಸಕಲಪಾಪಗಳೂ ಪರಿಹಾರವಾಗುತ್ತದೆ ಎಂದು ನಂಬಲಾಗುತ್ತದೆ.
ಪುರಾಣದ ಪ್ರಕಾರ ಈ ದಿನದಂದು "ಋಷಿ ಮನು" ಜನಿಸಿದ ಕಾರಣದಿಂದ ಈ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆಯೆಂದು ಕರೆಯಲಾಯಿತು ಎನ್ನುವುದು ಕೂಡ ಉಲ್ಲೇಖವಿದೆ. ಈ ಅಮಾವಾಸ್ಯೆಯಂದು ಎಣ್ಣೆ, ಎಳ್ಳು, ಧಾನ್ಯ ಮತ್ತು ಬೆಚ್ಚಗಿನ ಬಟ್ಟೆಗಳನ್ನು ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದೆಂದು ಎಂದೂ ಹೇಳಲಾಗುತ್ತದೆ. ಈ ವರ್ಷದ ಮೌನಿ ಅಮವಾಸ್ಯೆ ಮಹಾ ಕುಂಭಮೇಳಕ್ಕೂ ಸಾಕ್ಷಿಯಾಗಿದೆ. ಕೋಟ್ಯಾಂತರ ಭಕ್ತರು ಗಂಗೆಯಲ್ಲಿ ಮಿಂದೆದ್ದು ಪುನೀತರಾಗಿದ್ದಾರೆ.
✍ ಲಲಿತಶ್ರೀ ಪ್ರೀತಂ ರೈ