ಮಂಡ್ಯ ಜಿಲ್ಲೆಯಲ್ಲಿ ವಿಶೇಷವಾಗಿ ಕಂಡುಬರುವಂತಹ ವಿಶೇಷ ಕಲೆ ಕೊರವಂಜಿ ಕೋಲಾಟ. ಇದು ಮೈಸೂರು, ಬೆಂಗಳೂರು, ಹಾಸನ, ತುಮಕೂರು, ಚಿತ್ರದುರ್ಗದ ಕಡೆಗಳಲ್ಲಿ ಕಾಣಬಹುದಾಗಿದೆ. ಹಾಡು ಮತ್ತು ಕುಣಿತದೊಂದಿಗೆ ಸಂಭಾಷಣೆಯು ಈ ಕಲೆಯಲ್ಲಿ ಸೇರಿಕೊಂಡಿರುತ್ತದೆ. ಕೃಷ್ಣ ಕಥೆಯಲ್ಲಿ ಸತ್ಯಭಾಮ ಸ್ವರ್ಗದಲ್ಲಿದ್ದ ಪಾರಿಜಾತ ಗಿಡವನ್ನು ಭೂಲೋಕಕ್ಕೆ ತರಿಸಿದ ಚಂಡಿ ಕಥೆ ಜನಜನಿತವಾಗಿದೆ. ಚಂಡಿ ಎನಿಸಿದ ಸತ್ಯಭಾಮಳನ್ನು ಮುಖ್ಯ ಪಾತ್ರವಾಗಿಟ್ಟುಕೊಂಡು ಅವಳಿಗಾಗಿ ಕೃಷ್ಣ ಬೇಸ್ತು ಬೀಳುವುದನ್ನು ತಮ್ಮದೇ ಆದ ರೀತಿಯಲ್ಲಿ ನಿರೂಪಿಸುವ ಕ್ರಮವು ಈ ಕಲೆಯಲ್ಲಿದೆ. ಹಳ್ಳಿಗಳಲ್ಲಿ ಕಣಿ ಹೇಳುವವರು ಗಂಡಸಾದರೆ ಕೊರಮ ಎಂತಲೂ, ಹೆಂಗಸಾದರೆ ಕೊರಮಿ ಎಂತಲೂ ಕರೆಯುವ ಪದ್ದತಿ ಇತ್ತಂತೆ. ಕೊರವಂಜಿಗೆ ಕರಿಪಟ್ಟಿಯ ರವಿಕೆ, ಮೊಣಕಾಲಿನವರಿಗೆ ಕಂಬಿಸೀರೆ, 'ಬಾಳೆಕಾಯಿ' ಎನ್ನುವ ಸೊಂಟದ ಗಂಟಿಗೆ ಒಂದು ಪುಡಿಚೀಲ, ಹಣೆಗೆ ಅಗಲವಾದ ಕುಂಕುಮ, ದವಡೆಯಲ್ಲಿ ಎಲೆ ಅಡಿಕೆ ತಲೆಯ ಎಡಭಾಗಕ್ಕೆ ಏಡಿಗಂಟು, ಕಂಕುಳಲ್ಲಿ ಅಥವಾ ತಲೆಯ ಮೇಲೆ ಬೇವಿನ ಸೊಪ್ಪು ಹೆಡಿಗೆ, ಕಾಲಿಗೆ ಗೆಜ್ಜೆ, ಬಲಗೈಯಲ್ಲಿ ಕಣಿ ಕೋಲು ಹಿಡಿದು ಕಣಿ ಹೇಳುವ ಕೊರಮಿಯನ್ನು ಸೃಷ್ಟಿಸುತ್ತಾರೆ. ಕೊರಮ ಸಾಮಾನ್ಯವಾಗಿ ಒಂದು ನಿಲುವಂಗಿ, ಸೊಂಟಕ್ಕೆ ಕಟ್ಟಿದ ವಸ್ತ್ರ ಏರುಗಟ್ಟಿದ ಪಂಚೆ, ಹಣೆಯಲ್ಲಿ ಗೀರುನಾಮ, ತಲೆಗೆ ಸುತ್ತಿದ ಒಂದು ವಸ್ತ್ರ, ಕಾಲಿಗೆ ಗೆಜ್ಜೆ, ಕೈಯಲ್ಲಿ ಒಂದು ಬಿದಿರಿನ ದೊಣ್ಣೆ ಹಿಡಿದಿರುತ್ತಾನೆ. ಸಾಮಾನ್ಯವಾಗಿ ಕೋಲಾಟದ ವಿವಿಧ ಆಟಗಳು ಮುಗಿದ ಮೇಲೆಯೇ ಕೊರವಂಜಿ ಕೋಲು ಕಟ್ಟುವುದು. ಅದರ ಮುಖ್ಯ ಕಥೆ ಹೀಗೆ ಸಾಗುತ್ತದೆ. ಪ್ರಾರಂಭದಲ್ಲಿ ಎರಡು ಸಾಲಿನಲ್ಲಿ ಕುಳಿತ ಕೋಲಾಟಗಾರರು 'ತಾಳಗಟುಕ' ಹಾಕುತ್ತಾರೆ. ಆಟದ ಓಣಿಯಲ್ಲಿ ಕೊರವಂಜಿ ಕಣಿ ಹೇಳುವವಳಂತೆ ಬರುತ್ತಾಳೆ. ಇವಳ ಕಣಿ ಹಾಡಿನ ರೂಪಕ್ಕೆ ತಿರುಗುತ್ತದೆ. ಕಣಿಯನ್ನು ಕೇಳಿ ಎದುರಾದ ಕೊರಮ ಇವಳನ್ನು ಕುರಿತು ತನಗೆ ಮತ್ತು ಊರಿಗೆ ಕಣಿ ಹೇಳಲು ಕೇಳುತ್ತಾನೆ. ಹಾಗೇ ಇವಳ ಮಾತಿಗೆ, ವೈಯ್ಯಾರಕ್ಕೆ, ಬೆಡಗಿಗೆ ಮನಸೋತು ಕೊರಮ ಇವಳ ಕೈ ಹಿಡಿಯಲು ಬಯಸುತ್ತಾನೆ. ಇವರಿಬ್ಬರ ಸಂಭಾಷಣೆಯು ಹಾಡಿನ ರೂಪದಲ್ಲಿ ಸಾಗುತ್ತದೆ. ಕೊರವಂಜಿ ಕೊರಮನ ಮಾತಿಗೆ ಒಪ್ಪಿ ತನ್ನ ಅಪ್ಪನನ್ನು ನಂಬಿಸಲು ಮುಂದಾಗುತ್ತಾಳೆ. ಬುಡುಬುಡಿಕೆ ವೇಷಧಾರಿಯಾಗಿ ಅಪ್ಪನ ಮುಂದೆ ನಿಂತು...."ನಿನ್ನ ಮನೆ ಉದ್ಧಾರವಾಗಬೇಕಾದರೆ, ನಿನ್ನ ಮಗಳನ್ನು ಇದೇ ಊರಿನ ಕೊರಮನಿಗೆ ಕೊಟ್ಟು ಲಗ್ನ ಮಾಡು" ಎಂದು ಹೇಳುತ್ತಾನೆ. ನಂತರ ಇವರ ವಿವಾಹವು ನಡೆಯುವುದು. ಕೊರವಂಜಿ ಆಟದಲ್ಲಿ ಹಾಡು, ಕಥನಗೀತೆ, ಒಡಬು, ಹೊಗಳಿಕೆ ಬೈಗುಳ, ವ್ಯಂಗ್ಯ ಒಳಗೊಂಡಿರುವುದು. ಇಂತಹ ವಿಶಿಷ್ಟ ಆಚರಣೆಗಳು ಭಾರತದ ಉದ್ದಗಲಕ್ಕೂ ಕಾಣ ಸಿಗುತ್ತವೆ. ಕೆಲವು ಆಚರಣೆಗಳು ಅಳಿವಿನಂಚಿನಲ್ಲಿದ್ದರೆ, ಇನ್ನು ಕೆಲವು ಅಳಿದು ಹೋಗಿದೆ ಎನ್ನುವುದು ಬೇಸರದ ಸಂಗತಿ. ಇಂತಹ ವಿಶಿಷ್ಟ ಆಚರಣೆಗಳು ದಾಖಲೀಕರಣವಾದರೆ ಮುಂದಿನ ಪೀಳಿಗೆಗೆ ಕೈಗೆಟಕುವಂತಾಗುತ್ತದೆ ಎನ್ನುವುದು ನನ್ನ ಅನಿಸಿಕೆ.