ತುಳುನಾಡಿನ ಸಂಸ್ಕೃತಿಯು ವೈವೀಧ್ಯಮಯವಾಗಿದೆ. ಇಲ್ಲಿ ದೇವಾರಾಧನೆಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ದೈವಾರಾಧನೆ ಮತ್ತು ನಾಗಾರಾಧನೆಗಿದೆ. ಅಷ್ಟೇ ಅಲ್ಲದೆ ಇಲ್ಲಿನ ಸಂಸ್ಕೃತಿ , ಆಚರಣೆ, ಹಬ್ಬ ಹರಿದಿನಗಳು ಎಲ್ಲವೂ ವಿಭಿನ್ನ. ಯಕ್ಷಗಾನ, ಕಂಬಳ, ಆಟಿ ಕಳೆಂಜ, ಹುಲಿವೇಷ, ಸಿರಿ, ಕೋಲ, ನೇಮ ಹೀಗೆ ತನ್ನದೆ ಆದ ವಿಶಿಷ್ಟ ಸಂಸ್ಕೃತಿಯಿಂದ ಶ್ರೀಮಂತವಾಗಿದೆ ನಮ್ಮ ತುಳುನಾಡು. ಹಬ್ಬ ಹರಿದಿನಗಳ ವಿಚಾರಕ್ಕೆ ಬಂದಾಗ ಕೆಡ್ಡಸ ತುಳುನಾಡಿನಲ್ಲಿ ಹೆಣ್ಣಿಗಿರುವ ಮಹತ್ವವನ್ನು ಸಾರುತ್ತದೆ. ಭೂಮಿ ತಾಯಿಯನ್ನು ಹೆಣ್ಣಿಗೆ ಹೋಲಿಸಿರುವ ನಮ್ಮ ಹಿರಿಯರು ಭೂಮಿ ತಾಯಿಯು ಋತುಮತಿಯಾಗಿ ಸ್ನಾನ ಮಾಡುವ ದಿನವನ್ನು "ಕೆಡ್ಡಸ" ಹಬ್ಬವಾಗಿ ಆಚರಿಸಿ ಭೂಮಿ ತಾಯಿಗೆ ನಮಿಸುತ್ತಾರೆ. ಆದ್ದರಿಂದ ಕೆಡ್ಡಸ ಹಬ್ಬವು ಫಲವಂತಿಕೆಯ ಸಂಕೇತ ಎನ್ನಬಹುದು. ಕೆಡ್ಡಸದ ಮೂರು ದಿನ ನೆಲ ಅಗೆಯುವುಯುವುದು, ಉಳುವುದು, ಮರ ಕಡಿಯುವುದು ತುಳುವರು ಮಾಡುವುದಿಲ್ಲ. ಆ ದಿನಗಳಲ್ಲಿ ಕೃಷಿ ಕಾರ್ಯಗಳನ್ನು ಮಾಡಿದರೆ ಸೂಕ್ಷ್ಮವಾಗಿರುವ ಭೂಮಿತಾಯಿಯು ನೋವನ್ನು ಅನುಭವಿಸಿ ಬಂಜೆಯಾಗುತ್ತಾಳೆಂಬ ನಂಬಿಕೆ ಇದೆ. ಕೆಡ್ಡಸದ ಮೋದಲನೆಯ ದಿನ ಸ್ತೀಯರು ಅಂಗಳದ ಮೂಲೆಯಲ್ಲಿ ಅಥವಾ ತುಳಸಿ ಕಟ್ಟೆಯ ಹತ್ತಿರ ನೆಲವನ್ನು ಗೋಮಯದಿಂದ ಸಾರಿಸಿ ಅದರಲ್ಲಿ ಬಿಳಿ ಮಡಿ ಬಟ್ಟೆ, ಗೆಜ್ಜೆಕತ್ತಿ, ತೆಂಗಿನ ಸೋಗೆಯ ಹಸಿ ಕಡ್ಡಿ ಇಟ್ಟು ಭೂಮಿ ತಾಯಿಯ ಸಾನಿಧ್ಯ ರಚಿಸಿ ಪೂಜಿಸುವುದರೋಂದಿಗೆ ನವ ಧಾನ್ಯಗಳನ್ನು (ವಿಶೇಷವಾಗಿ ಹುರುಳಿ ಮತ್ತು ಅಕ್ಕಿ) ಹುರಿದು ಪುಡಿ ಮಾಡಿ ಬೆಲ್ಲ, ಅರಳು, ತೆಂಗಿನಚೂರನ್ನು ಬೆರೆಸಿ ಭೂಮಿ ತಾಯಿಗೆ ಸಮರ್ಪಿಸಿ ಮನೆಮಂದಿಯೆಲ್ಲಾ ತಿನ್ನುತ್ತಾರೆ. ಹಿಂದಿನ ದಿನಗಳಲ್ಲಿ ಎರಡನೆಯ ದಿನ ಭೇಟೆಯಾಡುವುದು ಸಾಮಾನ್ಯವಾಗಿತ್ತು, ಕುಂಡ ಕೋರಿ(ಒಂದು ರೀತಿಯ ಕಾಡು ಕೋಳಿ) ಭೇಟೆಯಾಡುವುದು ವಿಶೇಷ. ಕೆಡ್ಡಸದಂದು ಕೊಂಡಕೋರಿಗೆ(ಒಂದು ಕಾಡು ಕೋಳಿ) ಜ್ವರ ಬರುತ್ತದೆ ಎಂಬದನ್ನೂ ಕೂಡ ನಮ್ಮ ಹಿರಿಯರು ಹೇಳುತ್ತಿದ್ದನ್ನು ನಾವು ಕೇಳಿದ್ದೇವೆ. ಮಾಂಸಾಹಾರಿಗಳಿಗೆ ಕೆಡ್ಡಸದ ಎರಡನೆಯ ದಿನ ಬಾಡೂಟ ಎನ್ನಬಹುದು. ಮೂರನೆಯ ದಿನ ಮುಂಜಾನೆ ಮುತ್ತೈದೆಯರು ಸ್ನಾನ ಮಾಡಿ ತುಳಸಿ ಕಟ್ಟೆಯ ಹತ್ತಿರ ಗೋಮಯದಿಂದ ಸಾರಿಸಿ ಬಾಳೆಯ ತುದಿ ಎಲೆ ಇಟ್ಟು ಊದುಬತ್ತಿ ಹಚ್ಚಿ ಮಣೆಯ ಮೇಲೆ ಎಣ್ಣೆ, ಸೀಗೆ ಪುಡಿ ಅರಶಿನ ಕುಂಕುಮ ವೀಳ್ಯದೆಲೆ ಇತ್ಯಾದಿಗಳನ್ನು ಭೂಮಿ ತಾಯಿಯ ಸ್ನಾನಕ್ಕೋಸ್ಕರ ಮತ್ತು ಅಲಂಕಾರಕ್ಕಾಗಿ ಕನ್ನಡಿ ಬಾಚಣಿಗೆ ಮುಂತಾದವುಗಳನ್ನು ಇಡುತ್ತಾರೆ. ಈ ಪ್ರಕಾರ ಋತುಮತಿಯಾದ ಭೂಮಿ ತಾಯಿಯು ಮಿಂದು ಶುದ್ಧಳಾಗಿ ಪುಷ್ಪವತಿಯಾಗಿದ್ದಾಳೆ ಎಂಬುದು ತುಳುವರ ನಂಬಿಕೆ. ನಮ್ಮ ಹಿರಿಯರ ಮೈಮನದಲ್ಲಿ ಇಂತಹ ಆಚರಣೆಗಳು ಹಾಸುಹೊಕ್ಕಾಗಿತ್ತು ಹಾಗೆಯೇ ಅವರು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬಂದಿದ್ದರು. ಆದರೆ ಈಗಿನ ಆಡಂಬರದ ಬದುಕಿನಲ್ಲಿ ನಮ್ಮ ಹಿರಿಯರ ಆಚರಿಸಿಕೊಂಡು ಬಂದಿದ್ದ ಆಚರಣೆಗಳು ಅಲಿಸಿ ಹೋಗುತ್ತಿರುವುದು ನೋವಿನ ಸಂಗತಿ. ನಮ್ಮ ಯುವ ಪೀಳಿಗೆಗೆ ಇಂತಹ ಆಚರಣೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ.
✍ಲಲಿತಶ್ರೀ ಪ್ರೀತಂ ರೈ