ದೀಪಾವಳಿ ಎಂದರೆ ಸಂಭ್ರಮದ ಹಬ್ಬ. ಬಲಿಪಾಡ್ಯಮಿಯೊಂದಿಗೆ ಮೂರು ದಿನಗಳ ದೀಪಾವಳಿ ಹಬ್ಬ ಮುಗಿಯುತ್ತದೆ. ಪಾಡ್ಯದಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ನಡೆಸುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂದೇ ಹೆಸರು ಬಂತು. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುವಿನ ಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿ ಪ್ರಜೆಗಳನ್ನು ಅತ್ಯಂತ ಯೋಗಕ್ಷೇಮದಿಂದ ನೋಡಿಕೊಳ್ಳುತ್ತಿರುತ್ತಾನೆ. ರಾಕ್ಷಸ ರಾಜನಾದರೂ ದಾನ ಧರ್ಮದಿಂದ ಹೆಸರುವಾಸಿಯಾಗಿದ್ದ ಬಲಿ ಮಹಾರಾಜನಿಗೆ ತನ್ನ ರೀತಿಯಲ್ಲಿ ಬೇರೆ ಯಾರು ಪ್ರಜೆಗಳನ್ನು ನೋಡಿಕೊಳ್ಳುವುದಿಲ್ಲ ಎಂಬ ಅಹಂಕಾರ ಬರುತ್ತದೆ. ಈತನನ್ನು ಹೇಗಾದರೂ ಮಾಡಿ ಸಂಹಾರ ಮಾಡಬೇಕೆಂದು ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ದೇವತೆಗಳಿಗೆ ಅಭಯ ನೀಡಿದ ವಿಷ್ಣು ವಾಮನನ ಅಂದರೆ ಬಾಲಕನ ರೂಪದಲ್ಲಿ ಬಲಿ ಮಹಾರಾಜನ ಬಳಿ ಬರುತ್ತಾನೆ. ದಾನ ಶೂರನಾದ ಬಲಿಯನ್ನು ತನಗೆ ”ತನ್ನ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ನೀಡಬಹುದೇ?” ಎಂದು ಕೇಳುತ್ತಾನೆ. ಪ್ರಜಾ ಪರಿಪಾಲನೆಯಲ್ಲಿ ಯಶಸ್ವಿ ಕಂಡಿರುವ ನನಗೆ ಈ ಪುಟ್ಟ ಬಾಲಕನ ಬೇಡಿಕೆಯನ್ನು ಈಡೇರಿಸುವ ಯೋಗ್ಯತೆ ಇಲ್ವಾ ಎಂಬ ಅಹಂಕಾರದಿಂದ ಬಲೀಂದ್ರ ಮಹಾರಾಜ ವಾಮನನಿಗೆ, “ನೀನು ಕೇಳಿದ ಮೂರು ಹೆಜ್ಜೆ ಊರುವಷ್ಟು ಜಾಗ ನೀಡುತ್ತೇನೆ” ಎಂದು ವಚನವನ್ನು ಕೊಡುತ್ತಾನೆ.
ಸ್ಥಳವನ್ನು ದಾನ ಪಡೆಯುವಾಗ ವಾಮನಮೂರ್ತಿ ಆಕಾಶದ ಉದ್ದಕ್ಕೂ ಬೆಳೆಯುತ್ತಾನೆ. ಒಂದು ಪಾದವನ್ನು ಭೂಮಿ ಮೇಲೆ, ಮತ್ತೊಂದು ಪಾದವನ್ನು ಆಕಾಶದ ಮೇಲೆ ಇರಿಸುತ್ತಾನೆ. ಇನ್ನೊಂದು ಪಾದ ಇಡಲು ಜಾಗ ಕಾಣುತ್ತಿಲ್ಲ ಎಲ್ಲಿ ಇಡಬೇಕು ಎಂದು ಕೇಳಿದಾಗ ಬಲಿ ಚಕ್ರವರ್ತಿಗೆ ಜ್ಞಾನೋದಯವಾಗಿ ನನ್ನ ತಲೆ ಮೇಲೆ ಇಡು ಎಂದು ಹೇಳುತ್ತಾನೆ. ನನ್ನ ತಲೆ ಮೇಲೆ ನಿಮ್ಮ ಪಾದ ಇಡುವ ಮೂಲಕ ನನ್ನಲ್ಲಿರುವ ಅಹಂಕಾರವೆಲ್ಲ ನಾಶವಾಗಲಿ ಎಂದು ವಾಮನನ ಬಳಿ ಬಲಿ ಕ್ಷಮೆ ಕೇಳುತ್ತಾನೆ. ಶ್ರೀಮನ್ನಾರಾಯಣ ತನ್ನ ಪಾದವನ್ನು ಬಲೀಂದ್ರ ಮಹಾರಾಜನ ಮೇಲೆ ಇರಿಸಿ ಪಾತಾಳಕ್ಕೆ ಕಳುಹಿಸುತ್ತಾನೆ. ತಲೆ ಮೇಲೆ ಕಾಲನ್ನು ಇಡುವ ಮುನ್ನ ವಾಮನ ಬಳಿ ಬಲಿ, ನನ್ನ ಮಕ್ಕಳಂತೆ ನಾನು ಪ್ರಜೆಗಳನ್ನು ನೋಡಿದ್ದೇನೆ. ಹೀಗಾಗಿ ಪ್ರಜೆಗಳನ್ನು ನೋಡಲು ಅವಕಾಶ ನೀಡಬೇಕೆಂದು ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಈ ಪ್ರಾರ್ಥನೆ ಸ್ವೀಕರಿಸಿದ ವಾಮನ ಅಸ್ತು ಎನ್ನುತ್ತಾನೆ. ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಅದೇ ಆಶ್ವಯುಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜೆ ಮಾಡುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ ಎನ್ನುತ್ತಾನೆ. ಅದೇ ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪಾಡ್ಯ – ಈ ಮೂರು ದಿನಗಳನ್ನು ಬಲಿರಾಜ್ಯವೆಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಬಲಿ ಚಕ್ರವರ್ತಿ ಪಾತಾಳದಿಂದ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರ ಪೂಜೆ ನಡೆಯುತ್ತದೆ. ಇಂದಿಗೂ ತುಳುನಾಡಿನ ಹಲವು ಕಡೆ ಈ ಆಚರಣೆ ಉಳಿದಿದೆ.
✍ಲಲಿತಶ್ರೀ ಪ್ರೀತಂ ರೈ