ಮಂಗಳೂರು : ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ (ಸ್ವಾಯತ್ತ) ಸಂಸ್ಥೆಯು 2026-27ನೇ ಶೈಕ್ಷಣಿಕ ಸಾಲಿನ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಾತಿಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಎರಡು ವರ್ಷಗಳ ಐಟಿಐ, ದ್ವಿತೀಯ ಪಿಯುಸಿ ವಿಜ್ಞಾನ ಅಥವಾ ತಾಂತ್ರಿಕ ವಿಷಯಗಳಲ್ಲಿ ತೇರ್ಗಡೆಯಾಗಿರುವ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಸ್ಕೀಂ ಮೂಲಕ ನೇರವಾಗಿ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ, ತಾಂತ್ರಿಕ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಕೆಲಸದ ಅನುಭವ ಹೊಂದಿದ್ದು, ಪ್ರಸ್ತುತ ಖಾಯಂ ಸೇವೆಯಲ್ಲಿರುವ ಆಸಕ್ತ ಉದ್ಯೋಗಿಗಳಿಗೆ ವರ್ಕಿಂಗ್ ಪ್ರೊಫೆಶನಲ್ಸ್ ಡಿಪ್ಲೊಮಾ ಕೋರ್ಸ್‌ಗಳಿಗೂ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಸೂಕ್ತ ಮೂಲ ದಾಖಲೆಗಳೊಂದಿಗೆ ಸಂಸ್ಥೆಯಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಬೇಕಾಗಿದ್ದು, ಮೆರಿಟ್ ಹಾಗೂ ರೋಸ್ಟರ್ ಆಧಾರದ ಮೇಲೆ ಆಫ್‌ಲೈನ್ ಕೌನ್ಸೆಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತದೆ.
ಪ್ರವೇಶ ಪ್ರಕ್ರಿಯೆಯ ತಾತ್ಕಾಲಿಕ ವೇಳಾಪಟ್ಟಿಯಂತೆ ಅರ್ಜಿ ಸಲ್ಲಿಸಲು ಜೂನ್ 6 ಕೊನೆಯ ದಿನವಾಗಿದೆ. ತದನಂತರ ಜೂನ್ 8 ರಂದು ಬೆಳಿಗ್ಗೆ 10 ಗಂಟೆಗೆ ಕೆ.ಪಿ.ಟಿ-ಸಿ.ಎ.ಟಿ (KPT-CAT) ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದ್ದು, ಅಂದೇ ಮಧ್ಯಾಹ್ನ 12 ಗಂಟೆಗೆ ಮಾದರಿ ಉತ್ತರಗಳನ್ನು ಪ್ರಕಟಿಸಲಾಗುತ್ತದೆ. ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಸಲ್ಲಿಸಲು ಜೂನ್ 9 ಕೊನೆಯ ದಿನವಾಗಿದ್ದು, ಜೂನ್ 10 ರಂದು ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳಲಿದೆ. ಫಲಿತಾಂಶದ ಮೇಲಿನ ಆಕ್ಷೇಪಣೆಗಳಿಗೆ ಜೂನ್ 11 ರವರೆಗೆ ಕಾಲಾವಕಾಶ ನೀಡಲಾಗಿದೆ. ಜೂನ್ 12 ರಂದು ಸಂಜೆ 5 ಗಂಟೆಗೆ ಕರಡು ಮೆರಿಟ್ ಪಟ್ಟಿ ಬಿಡುಗಡೆಯಾಗಲಿದ್ದು, ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಜೂನ್ 13 ಕೊನೆಯ ದಿನವಾಗಿರುತ್ತದೆ. ಅಂತಿಮ ಮೆರಿಟ್ ಪಟ್ಟಿಯನ್ನು ಜೂನ್ 15 ರಂದು ಬೆಳಿಗ್ಗೆ 8 ಗಂಟೆಗೆ ಪ್ರಕಟಿಸಿ, ಜೂನ್ 16 ರಂದು ಲ್ಯಾಟರಲ್ ಎಂಟ್ರಿ ಹಾಗೂ ವರ್ಕಿಂಗ್ ಪ್ರೊಫೆಶನಲ್ಸ್ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಕೌನ್ಸೆಲಿಂಗ್ ಮುಗಿದ ನಂತರ ಉಳಿಯುವ ಸೀಟುಗಳನ್ನು ಡೀನ್ (ಶೈಕ್ಷಣಿಕ) ಅವರ ಹಂತದಲ್ಲಿಯೇ ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲು ಜೂನ್ 17 ರಿಂದ ಜೂನ್ 24 ರವರೆಗೆ ಅಂತಿಮ ಅವಕಾಶ ಇರಲಿದೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಕಛೇರಿಯ ದೂರವಾಣಿ ಸಂಖ್ಯೆಗಳಾದ 0824-2211636 ಹಾಗೂ 3516910 ಅನ್ನು ಸಂಪರ್ಕಿಸಬಹುದೆಂದು ಪ್ರಾಂಶುಪಾಲರು ತಿಳಿಸಿದ್ದಾರೆ.