ಮಂಗಳೂರು: ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಯುಜಿ ಲ್ಯಾಟರಲ್ ಎಂಟ್ರಿ ಕೋಟಾದಡಿ ಅಂತಿಮ ಸುತ್ತಿನ ಪ್ರವೇಶಾತಿ ಬಳಿಕವೂ ಖಾಲಿ ಉಳಿದಿರುವ ವಿವಿಧ ಸ್ನಾತಕ ಪದವಿ ಸೀಟುಗಳ ಭರ್ತಿಗೆ ನವೆಂಬರ್ 24ರಂದು ಮುಕ್ತ ಕೌನ್ಸೆಲಿಂಗ್ ಆಯೋಜಿಸಲಾಗಿದೆ.
ಯುಜಿ ಲ್ಯಾಟರಲ್ ಎಂಟ್ರಿ-2026 ಪ್ರವೇಶ ಪರೀಕ್ಷೆ ಬರೆದು ರ್ಯಾಂಕ್ ಪಡೆದಿರುವ ಅರ್ಹ ಅಭ್ಯರ್ಥಿಗಳು ಮಾತ್ರ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಆಸಕ್ತರು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ (www.uahs.edu.in) ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಬೇಕು. ಬಳಿಕ ಅಗತ್ಯ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ, ನವೆಂಬರ್ 24ರ ಬೆಳಿಗ್ಗೆ 11 ಗಂಟೆಯೊಳಗೆ ಶಿವಮೊಗ್ಗ ಜಿಲ್ಲೆಯ ಇರುವಕ್ಕಿಯಲ್ಲಿರುವ (577412) ವಿಶ್ವವಿದ್ಯಾಲಯದ ಶರಾವತಿ ಆಡಳಿತ ಭವನದ 2ನೇ ಮಹಡಿಯಲ್ಲಿರುವ ಕುಲಸಚಿವರ ಕಾರ್ಯಾಲಯಕ್ಕೆ ಖುದ್ದಾಗಿ ಸಲ್ಲಿಸಬೇಕು. ನಿಗದಿತ ಸಮಯದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಇರುವಕ್ಕಿಯ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿಯೇ ಮುಕ್ತ ಕೌನ್ಸೆಲಿಂಗ್ ನಡೆಯಲಿದ್ದು, ಹೆಚ್ಚಿನ ವಿವರಗಳಿಗಾಗಿ ವಿಶ್ವವಿದ್ಯಾಲಯದ ವೆಬ್ಸೈಟ್ ವೀಕ್ಷಿಸಬಹುದು ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.