image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೀಪಾವಳಿ-ತುಳಸಿ ಪೂಜೆ: ಮಂಗಳೂರಿನಲ್ಲಿ ಪಟಾಕಿ ಮಾರಾಟ ಲೈಸೆನ್ಸ್‌ಗೆ ಅರ್ಜಿ ಆಹ್ವಾನ

ದೀಪಾವಳಿ-ತುಳಸಿ ಪೂಜೆ: ಮಂಗಳೂರಿನಲ್ಲಿ ಪಟಾಕಿ ಮಾರಾಟ ಲೈಸೆನ್ಸ್‌ಗೆ ಅರ್ಜಿ ಆಹ್ವಾನ

ಮಂಗಳೂರು: ದೀಪಾವಳಿ ಮತ್ತು ತುಳಸಿ ಪೂಜೆ ಹಬ್ಬಗಳ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 7 ರಿಂದ 10 ಹಾಗೂ ನವೆಂಬರ್ 20 ಮತ್ತು 21 ರವರೆಗೆ ಒಟ್ಟು 6 ದಿನಗಳ ಕಾಲ ಮಾತ್ರ ಸಾರ್ವಜನಿಕ ವಸತಿ ಪ್ರದೇಶಗಳಿಂದ ದೂರವಿರುವ ನಿಗದಿತ ತೆರೆದ ಸ್ಥಳಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ವ್ಯಾಪಾರಿಗಳು ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ (mangalorecitypolice.karnataka.gov.in) ಮೂಲಕ ಎಇ-5 (AE-5) ಅರ್ಜಿ ನಮೂನೆಯನ್ನು ಪಡೆದುಕೊಂಡು, ಅಕ್ಟೋಬರ್ 30 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಜಿ ಸಲ್ಲಿಸುವಾಗ ಸರ್ಕಾರ ನಿಗದಿಪಡಿಸಿರುವ 300 ರೂ. ಅರ್ಜಿ ಶುಲ್ಕವನ್ನು ಖಜಾನೆ-2 ಪೋರ್ಟಲ್ ಮೂಲಕ ಚಲನ್ ಬಳಸಿ ಪಾವತಿಸಬೇಕು ಹಾಗೂ ಪರವಾನಿಗೆ ಮಂಜೂರಾದ ಬಳಿಕ 600 ರೂ. ಪರವಾನಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅರ್ಜಿಯೊಂದಿಗೆ ಅಗ್ನಿಶಾಮಕ ಇಲಾಖೆ, ಸ್ಥಳೀಯ ಸಂಸ್ಥೆ (ಮಹಾನಗರ ಪಾಲಿಕೆ/ಪಂಚಾಯತ್) ಮತ್ತು ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ಪಡೆದ ನಿರಾಕ್ಷೇಪಣಾ ಪತ್ರ (NOC), 100 ರೂ. ಛಾಪಾ ಕಾಗದದಲ್ಲಿ ಅಫಿಡವಿಟ್, ಜಮೀನಿನ ಬ್ಲೂ ಪ್ರಿಂಟ್ ನಕ್ಷೆ, ಅರ್ಜಿದಾರರ 2 ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಿ ಸ್ವೀಕೃತಿ ಪಡೆಯಬೇಕು.

ಪರವಾನಿಗೆ ಪಡೆದ ಮಾರಾಟಗಾರರು CSIR ಮತ್ತು NEERI ಸಂಸ್ಥೆಗಳಿಂದ ಪ್ರಮಾಣೀಕರಿಸಲ್ಪಟ್ಟ 'ಹಸಿರು ಪಟಾಕಿ'ಗಳನ್ನು (Green Crackers) ಮಾತ್ರ ಮಾರಾಟ ಮಾಡಲು ಅವಕಾಶವಿರುತ್ತದೆ. ಮಳಿಗೆಗಳಲ್ಲಿ ಕನಿಷ್ಠ 3 ಮೀಟರ್ ಅಂತರ ಕಾಯ್ದುಕೊಳ್ಳಬೇಕು ಮತ್ತು ಮೂಲ ಪರವಾನಿಗೆಯನ್ನು ಮಳಿಗೆಯ ಮುಂಭಾಗದಲ್ಲಿ ಕಾಣಿಸುವಂತೆ ಪ್ರದರ್ಶಿಸಬೇಕು. ಮಳಿಗೆಗಳಲ್ಲಿ ನಿಯಮಾನುಸಾರ ಅಗತ್ಯ ಅಗ್ನಿಶಾಮಕ ಉಪಕರಣಗಳು, ನೀರು ಹಾಗೂ ಮರಳಿನ ಬಕೆಟ್‌ಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು.

ರಾತ್ರಿ 10 ಗಂಟೆಯ ನಂತರ ಮಳಿಗೆಗಳನ್ನು ತೆರೆದಲ್ಲಿ ಪರವಾನಿಗೆಯನ್ನು ತಕ್ಷಣವೇ ರದ್ದುಗೊಳಿಸಲಾಗುವುದು. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 223 ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಕಮಿಷನರೇಟ್ ತಿಳಿಸಿದೆ.

Category
ಕರಾವಳಿ ತರಂಗಿಣಿ