ಮಂಗಳೂರು : 2026ನೇ ಸಾಲಿನ ದೀಪಾವಳಿ ಹಾಗೂ ತುಳಸಿ ಪೂಜೆ ಹಬ್ಬಗಳ ಪ್ರಯುಕ್ತ ಮೈದಾನ ಅಥವಾ ತೆರೆದ ಪ್ರದೇಶಗಳಲ್ಲಿ ಸುಡುಮದ್ದು ಮಾರಾಟ ಮಾಡಲು ತಾತ್ಕಾಲಿಕ ಪರವಾನಗಿ ಕೋರಿ ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಲು ಆಸಕ್ತರಿಂದ ಆಹ್ವಾನಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ, ಜಿಲ್ಲೆಯ ಇತರ ಪ್ರದೇಶಗಳಲ್ಲಿ ಪಟಾಕಿ ಅಂಗಡಿ ತೆರೆಯಲು ಬಯಸುವವರು ಅಕ್ಟೋಬರ್ 10 ರೊಳಗಾಗಿ ಅರ್ಜಿ ಸಲ್ಲಿಸಬೇಕಾಗಿದೆ.
ಅರ್ಜಿಯನ್ನು ನಿಗದಿತ 'ನಮೂನೆ ಎಇ-5' ರಲ್ಲಿ ಸಲ್ಲಿಸಬೇಕಾಗಿದ್ದು, ಅಂಗಡಿ ತೆರೆಯಲು ಉದ್ದೇಶಿಸಿರುವ ಸ್ಥಳದ ರಸ್ತೆ ಹಾಗೂ ಕಟ್ಟಡ ವಿವರಗಳನ್ನೊಳಗೊಂಡ ನೀಲನಕ್ಷೆ (ಬ್ಲೂ ಪ್ರಿಂಟ್), ಅರ್ಜಿದಾರರ ಭಾವಚಿತ್ರ ಮತ್ತು ಜಮೀನಿನ ಪಹಣಿ ಪ್ರತಿಯನ್ನು ಲಗತ್ತಿಸುವುದು ಕಡ್ಡಾಯವಾಗಿದೆ. ಪ್ರಸ್ತಾವಿತ ಜಾಗವು ಖಾಸಗಿಯಾಗಿದ್ದರೆ 100 ರೂಪಾಯಿ ಸ್ಟಾಂಪ್ ಪೇಪರ್ನಲ್ಲಿ ಜಮೀನಿನ ಮಾಲೀಕರ ಒಪ್ಪಿಗೆ ಪತ್ರವನ್ನು ಹಾಗೂ ಸರ್ಕಾರಿ ಜಾಗವಾಗಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ನಿರಾಕ್ಷೇಪಣಾ ಪತ್ರವನ್ನು (NOC) ನೀಡಬೇಕಾಗುತ್ತದೆ.
ಇದರೊಂದಿಗೆ ಜಿಲ್ಲಾ ಅಗ್ನಿಶಾಮಕ ಇಲಾಖೆ, ಪೊಲೀಸ್ ಅಧೀಕ್ಷಕರು, ಸಂಬಂಧಪಟ್ಟ ತಹಶೀಲ್ದಾರ್ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಪಡೆದ ನಿರಾಕ್ಷೇಪಣಾ ಪತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಕೆ ವೇಳೆಯಲ್ಲಿ 200 ರೂಪಾಯಿ ಪರಿಶೀಲನಾ ಶುಲ್ಕ (Scrutiny Fee) ಹಾಗೂ ಪರವಾನಗಿ ಮಂಜೂರಾದ ಸಂದರ್ಭದಲ್ಲಿ 500 ರೂಪಾಯಿ ಪರವಾನಗಿ ಶುಲ್ಕವನ್ನು (License Fee) ಪಾವತಿಸಬೇಕು. ಅಲ್ಲದೆ, ಪರಿಸರ ಹಿತದೃಷ್ಟಿಯಿಂದ ಕಡ್ಡಾಯವಾಗಿ ಹಸಿರು ಪಟಾಕಿಗಳ (Green Crackers) ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುವುದು. ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರಗಳು ಬಂದಲ್ಲಿ ಸ್ಫೋಟಕ ಕಾಯ್ದೆ ಹಾಗೂ ನಿಯಮಾವಳಿಗಳಿಗೆ ಒಳಪಟ್ಟು ಅರ್ಹರಿಗೆ ಪರವಾನಗಿ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.