ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ 2026-27ನೇ ಸಾಲಿನ ವಿವಿಧ ಕ್ಷೇಮಾಭಿವೃದ್ಧಿ ಯೋಜನೆಗಳು ಹಾಗೂ ಸಾಲ ಸೌಲಭ್ಯಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹಿಂದುಳಿದ ವರ್ಗಗಳ ಪ್ರವರ್ಗ-3ಎ ಅಡಿಯಲ್ಲಿ ಬರುವ ಒಕ್ಕಲಿಗ, ಹಳ್ಳಿಕಾರ್, ನಾಮಧಾರಿ, ಗಂಗಡ್ಕಾರ್, ದಾಸ್, ರೆಡ್ಡಿ, ಮರಸು, ಗೌಡ, ಕುಂಚಿಟಿಗ, ಕಮ್ಮ, ಕಾಪು, ಹೆಗ್ಗಡೆ, ರಡ್ಡಿ, ಗೌಂಡರ್ ಸೇರಿದಂತೆ ವಿವಿಧ ಒಳಪಂಗಡಗಳ ಸಮುದಾಯದವರು ಈ ಯೋಜನೆಗಳ ಪ್ರಯೋಜನ ಪಡೆಯಬಹುದಾಗಿದೆ.
ಸ್ವಯಂ ಉದ್ಯೋಗ ಕೈಗೊಳ್ಳಲು ಬಯಸುವ 18 ರಿಂದ 55 ವರ್ಷ ವಯೋಮಿತಿಯವರಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ 2 ಲಕ್ಷ ರೂಪಾಯಿವರೆಗಿನ ಘಟಕ ವೆಚ್ಚಕ್ಕೆ ಶೇ. 30ರಷ್ಟು (ಗರಿಷ್ಠ 30,000 ರೂ.) ಸಹಾಯಧನ ಹಾಗೂ ಉಳಿದ ಶೇ. 70ರಷ್ಟು ಮೊತ್ತವನ್ನು ವಾರ್ಷಿಕ ಶೇ. 4ರ ಬಡ್ಡಿದರದಲ್ಲಿ ಸಾಲವಾಗಿ ನೀಡಲಾಗುತ್ತದೆ. ಈ ಯೋಜನೆಗೆ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ 98 ಸಾವಿರ ರೂ. ಹಾಗೂ ನಗರ ಪ್ರದೇಶದವರಿಗೆ 1.20 ಲಕ್ಷ ರೂ. ಮಿತಿಯೊಳಗಿರಬೇಕು. 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಸಾಲ ಸೌಲಭ್ಯ ಪಡೆಯಲು ಸ್ಥಿರಾಸ್ತಿ ಭದ್ರತೆ ಒದಗಿಸುವುದು ಕಡ್ಡಾಯವಾಗಿದೆ.
ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಗಂಗಾಕಲ್ಯಾಣ ಯೋಜನೆಯಡಿ ಕನಿಷ್ಠ 1 ಎಕರೆ ಜಮೀನು ಹೊಂದಿರುವ ಹಾಗೂ ವಾರ್ಷಿಕ ಆದಾಯ 98 ಸಾವಿರ ರೂಪಾಯಿ ಮಿತಿಯಲ್ಲಿರುವ ರೈತರಿಗೆ 3.75 ಲಕ್ಷ ರೂಪಾಯಿ ಘಟಕ ವೆಚ್ಚದ ಸೌಲಭ್ಯ ಸಿಗಲಿದೆ. ಇದರಲ್ಲಿ 3.25 ಲಕ್ಷ ರೂಪಾಯಿ ಸಹಾಯಧನ ಹಾಗೂ 50,000 ರೂಪಾಯಿ ಸಾಲ (ಶೇ. 4ರ ಬಡ್ಡಿದರ) ಒಳಗೊಂಡಿರಲಿದೆ. ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಈ ಯೋಜನೆಯಡಿ ತೆರೆದ ಬಾವಿ ನೀರಾವರಿ ಸೌಲಭ್ಯ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ.
ಯುವಜನರಿಗೆ ಸ್ವಯಂ ಉದ್ಯೋಗ ಕಂಡುಕೊಳ್ಳಲು 'ಸ್ವಾವಲಂಬಿ ಸಾರಥಿ' ಯೋಜನೆಯಡಿ ನಾಲ್ಕು ಚಕ್ರದ ವಾಹನ ಖರೀದಿಗೆ ಶೇ. 50ರಷ್ಟು (ಗರಿಷ್ಠ 3 ಲಕ್ಷ ರೂ.) ಸಹಾಯಧನ ದೊರೆಯಲಿದ್ದು, ಉಳಿಕೆ ಮೊತ್ತವನ್ನು ಬ್ಯಾಂಕ್ ಸಾಲದ ಮೂಲಕ ಪಡೆಯಬಹುದು. ಈ ಯೋಜನೆಗೆ 21 ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಸಾಲ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಸಿಇಟಿ ಅಥವಾ ನೀಟ್ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಾರ್ಷಿಕ 1 ಲಕ್ಷ ರೂಪಾಯಿಯಂತೆ ಒಟ್ಟು 4 ರಿಂದ 5 ಲಕ್ಷ ರೂಪಾಯಿವರೆಗೆ ಶೇ. 2ರ ಬಡ್ಡಿದರದಲ್ಲಿ ಸಾಲ ಒದಗಿಸಲಾಗುತ್ತದೆ. ಹಿಂದಿನ ವರ್ಷಗಳಲ್ಲಿ (2022-23 ರಿಂದ 2025-26) ಸಾಲ ಪಡೆದ ವಿದ್ಯಾರ್ಥಿಗಳು ತಮ್ಮ ಮುಂದಿನ ಕಂತಿನ ನವೀಕರಣಕ್ಕಾಗಿ ಸಂಬಂಧಿಸಿದ ವ್ಯಾಸಂಗ ದೃಢೀಕರಣ ಪತ್ರ ಹಾಗೂ ಅಂಕಪಟ್ಟಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದಾಗಿದೆ.