ಮಂಗಳೂರು: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿನ ವಿವಿಧ ಯೋಜನೆಗಳಡಿ ಸಹಾಯಧನ ಹಾಗೂ ಸಾಲ ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ನಿಗಮದ ಮೂಲಕ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಹೊಸ ಮತ್ತು ನವೀಕರಣದ ಅರಿವು-ಶೈಕ್ಷಣಿಕ ನೇರ ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ವಿದೇಶಿ ವ್ಯಾಸಂಗ ಯೋಜನೆ ಹಾಗೂ ಹೊಲಿಗೆ ಯಂತ್ರ/ಜಿಗ್‌ಜಾಗ್ ಯೋಜನೆಗಳಿಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.
ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ವಿಶ್ವಕರ್ಮ ಅಥವಾ ಅದರ ಉಪ ಜಾತಿಗಳಿಗೆ ಸೇರಿರಬೇಕು. ಸಾಮಾನ್ಯ ಯೋಜನೆಗಳಿಗೆ ವಯೋಮಿತಿ 18ರಿಂದ 55 ವರ್ಷಗಳ ಒಳಗಿರಬೇಕು ಹಾಗೂ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ. ಕುಟುಂಬದ ವಾರ್ಷಿಕ ಆದಾಯ ಮಿತಿ ಗ್ರಾಮಾಂತರ ಪ್ರದೇಶದವರಿಗೆ ₹98 ಸಾವಿರ ಮತ್ತು ನಗರ ಪ್ರದೇಶದವರಿಗೆ ₹1.20 ಲಕ್ಷ ಇರಬೇಕು. ವಿಶೇಷ ಅರ್ಹತೆಗಳಾಗಿ ಅರಿವು ಯೋಜನೆಗೆ 18ರಿಂದ 30 ವರ್ಷ ವಯೋಮಿತಿ ಹಾಗೂ ವಾರ್ಷಿಕ ಆದಾಯ ₹3.50 ಲಕ್ಷ ಮಿತಿ ನಿಗದಿಪಡಿಸಲಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಗೆ 21ರಿಂದ 45 ವರ್ಷ ವಯಸ್ಸಿನವರು ಅರ್ಹರಿದ್ದು, ವಿದೇಶಿ ವ್ಯಾಸಂಗ ಯೋಜನೆಗೆ ವಾರ್ಷಿಕ ಆದಾಯ ಮಿತಿ ₹15 ಲಕ್ಷದವರೆಗೆ ಇರುತ್ತದೆ. ಗಂಗಾ ಕಲ್ಯಾಣ ಯೋಜನೆಗೆ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು.
ಸರ್ಕಾರದ ಅಥವಾ ನಿಗಮದ ಯಾವುದೇ ಯೋಜನೆಗಳಲ್ಲಿ ಈ ಹಿಂದೆ ಸೌಲಭ್ಯ ಪಡೆದಿರಬಾರದು ಹಾಗೂ ಕುಟುಂಬದ ಒಬ್ಬರಿಗೆ ಮಾತ್ರ ಅವಕಾಶವಿರುತ್ತದೆ. ಅರ್ಜಿದಾರರ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಆಧಾರ್ ಸಂಖ್ಯೆಗೆ ಜೋಡಣೆಯಾಗಿರಬೇಕು. ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ವಿಳಾಸ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್‌ಬುಕ್‌ನಲ್ಲಿರುವ ವಿವರಗಳು ತಾಳೆಯಾಗುವುದು ಕಡ್ಡಾಯವಾಗಿದೆ. ಕಳೆದ 2024-25 ಹಾಗೂ 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದವರಿಗೂ ಈ ಬಾರಿ ಬೇರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಬೆಂಗಳೂರು-ಒನ್, ಕರ್ನಾಟಕ-ಒನ್, ಅಟಲ್-ಜಿ ಜನಸ್ನೇಹಿ ಕೇಂದ್ರ ಹಾಗೂ ನಾಗರಿಕ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ kvcdcl.karnataka.gov.in, ಮಂಗಳೂರು ಜಿಲ್ಲಾ ಕಛೇರಿಯ ದೂರವಾಣಿ ಸಂಖ್ಯೆ 0824-2456544 ಅಥವಾ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದಾಗಿದೆ.