image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭತ್ತದ ಬೆಳೆ ಸ್ಪರ್ಧೆ, ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ

ಭತ್ತದ ಬೆಳೆ ಸ್ಪರ್ಧೆ, ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಂಗಳೂರು : ಕೃಷಿ ಇಲಾಖೆಯ 2026-27ನೇ ಸಾಲಿನ ಕೃಷಿ ಪ್ರಶಸ್ತಿ ಯೋಜನೆಯಡಿ ಭತ್ತದ ಬೆಳೆ ಸ್ಪರ್ಧೆ ಹಾಗೂ ಕೃಷಿ ಪಂಡಿತ ಪ್ರಶಸ್ತಿಗೆ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪುರುಷ ಮತ್ತು ಮಹಿಳಾ ರೈತರು ಯಾವುದೇ ಶುಲ್ಕವಿಲ್ಲದೆ ಕೆ-ಕಿಸಾನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ನೇರವಾಗಿ, ರೈತ ಸಂಪರ್ಕ ಕೇಂದ್ರ ಅಥವಾ ನಾಗರಿಕ ಸೇವಾ ಕೇಂದ್ರಗಳ (ಸಿಎಸ್‌ಸಿ) ಮೂಲಕ ಅರ್ಜಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಭತ್ತದ ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಲು ಕನಿಷ್ಠ 1 ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿರುವುದು ಕಡ್ಡಾಯ. ಈ ಹಿಂದೆ ಪ್ರಶಸ್ತಿ ಪಡೆದ ಕುಟುಂಬದವರು ಮುಂದಿನ 5 ವರ್ಷಗಳವರೆಗೆ ಅದೇ ಹಂತದ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಇನ್ನು ಕೃಷಿ ಕ್ಷೇತ್ರದಲ್ಲಿ ನೂತನ ಅನ್ವೇಷಣೆ, ಮೂಲ ಸ್ವರೂಪದ ಸಂಶೋಧನೆ ಹಾಗೂ ವಿಭಿನ್ನ ಸಾಧನೆ ಮಾಡಿರುವ ರೈತರು ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಹಿಂದೆ ಈ ಪ್ರಶಸ್ತಿ ಪಡೆದವರಿಗೆ ಮತ್ತೆ ಅವಕಾಶವಿರುವುದಿಲ್ಲ.

ಅರ್ಜಿಯೊಂದಿಗೆ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಭಾವಚಿತ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಸರ್ಕಾರಿ ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಸ್ಪರ್ಧೆಗೆ ಅರ್ಹರಲ್ಲ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ